ಬೆಂಗಳೂರು: ಆತ್ಮನಿರ್ಭರ ಭಾರತ ಕಲ್ಪನೆಗೆ ಪೂರಕವಾಗಿ ಏರೋ ಇಂಡಿಯಾ ಶೋ ನಡೆಯುತ್ತಿದೆ. ಇದರಲ್ಲಿ ನಮ್ಮ ದೇಶದ ಸೇನಾ ಶಕ್ತಿ ಹಾಗೂ ರಕ್ಷಣಾ ವಲಯದ ಸಾಮರ್ಥ್ಯ ಜಗಜ್ಜಾಹೀರಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಹೇಳಿದ್ದಾರೆ.
ಯಲಹಂಕದ ವಾಯುನೆಲೆಯಲ್ಲಿ ಏರ್ಪಡಿಸಲಾಗಿರುವ ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನದ 13ನ ಆವೃತ್ತಿಗೆ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಆತ್ಮನಿರ್ಭರ ಭಾರತ ಕಲ್ಪನೆಗೆ ಪೂರಕವಾಗಿ ಈ ಏರ್ ಶೋ ನಡೆಯುತ್ತಿದೆ. ಇದರಲ್ಲಿ ನಮ್ಮ ದೇಶದ ಸೇನಾ ಶಕ್ತಿ, ರಕ್ಷಣಾ ವಲಯದ ಸಾಮರ್ಥ್ಯ ಜಗಜ್ಜಾಹೀರಾಗಲಿದೆ. ಚಿನೂಕ್, ಹಾಕ್, ಜಾಗ್ವಾರ್, ಅಪಾಚೆ, ಸೂರ್ಯಕಿರಣ್, ಸಾರಂಗ್, ರಫೇಲ್ ಸೇರಿದಂತೆ ಇನ್ನೂ ಅನೇಕ ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರಸ್ತುತ ಪಡಿಸಲಿವೆ ಎಂದು ಹೇಳಿದ್ದಾರೆ.
ಏರೋ ಇಂಡಿಯಾ 21 ಭಾರತದ ಅಪಾರ ಸಾಮರ್ಥ್ಯವನ್ನು ಮತ್ತು ರಕ್ಷಣಾ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ನಮ್ಮ ದೇಶ ನೀಡುವ ಬಹುಮುಖಿ ಅವಕಾಶಗಳನ್ನು ಪ್ರದರ್ಶಿಸುತ್ತದೆ. ಇದು ವಿಶ್ವದ ಮೊದಲ ಹೈಬ್ರಿಡ್ ಏರೋ ಮತ್ತು ರಕ್ಷಣಾ ಪ್ರದರ್ಶನ ಎಂದು ಭರವಸೆ ನೀಡಿದೆ.
ಜಾಗತಿಕವಾಗಿ ಸಾಂಕ್ರಾಮಿಕ ರೋಗದಿಂದ ಉಂಟಾದ ನಿರ್ಬಂಧಗಳ ಹೊರತಾಗಿಯೂ, ಈ ವರ್ಷದ ಕಾರ್ಯಕ್ರಮದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವವರನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ಇದು ಮಿಲಿಟರಿ ಮತ್ತು ವಾಯುಯಾನ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಿಂದ ಬರುತ್ತಿದೆ ಎಂದು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ 80 ವಿದೇಶಿ ಕಂಪನಿಗಳು, ರಕ್ಷಣಾ ಮಂತ್ರಿಗಳು, ಪ್ರತಿನಿಧಿಗಳು, ಸೇವಾ ಮುಖ್ಯಸ್ಥರು ಮತ್ತು 55 ಕ್ಕೂ ಹೆಚ್ಚು ರಾಷ್ಟ್ರಗಳ ಅಧಿಕಾರಿಗಳು ಸೇರಿದಂತೆ ಸುಮಾರು 540 ಪ್ರದರ್ಶಕರು ಭಾಗವಹಿಸುತ್ತಿದ್ದಾರೆ ಎಂದು ನನಗೆ ಮಾಹಿತಿ ನೀಡಲಾಗಿದೆ. ಇದು ಜಾಗತಿಕ ಸಮುದಾಯದಲ್ಲಿ ಬೆಳೆಯುತ್ತಿರುವ ಆಶಾವಾದವನ್ನು ಪ್ರತಿಬಿಂಬಿಸುತ್ತದೆ.
ನಮ್ಮ ಭದ್ರತಾ ವಿಭಾಗವನ್ನು ಬಲಪಡಿಸಲು ನಾವು ಅನೇಕ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ದೊಡ್ಡ ಮತ್ತು ಸಂಕೀರ್ಣ ರಕ್ಷಣಾ ವೇದಿಕೆಗಳ ದೇಶೀಯ ಉತ್ಪಾದನೆಯು ಈಗ ‘ಆತ್ಮನಿರ್ಭರ ಭಾರತ್ ಅಭಿಯಾನ್’ ಅಡಿಯಲ್ಲಿ ನಮ್ಮ ನೀತಿಯ ಕೇಂದ್ರಬಿಂದುವಾಗಿದೆ. ಮುಂದಿನ 7-8 ವರ್ಷಗಳಲ್ಲಿ ಮಿಲಿಟರಿ ಆಧುನೀಕರಣಕ್ಕಾಗಿ 130 ಬಿಲಿಯನ್ ಡಾಲರ್ ಖರ್ಚು ಮಾಡಲು ನಾವು ಯೋಜಿಸಿದ್ದೇವೆಂದಿದ್ದಾರೆ.
ಬಸವಣ್ಣ, ಸರ್‌ಎಂವಿ ನೆನೆದ ರಕ್ಷಣಾ ಸಚಿವ
ಏರೋ ಇಂಡಿಯಾ ಉದ್ಘಾಟಿಸಿದ ಬಳಿಕ ಭಾಷಣದ ಆರಂಭದಲ್ಲಿ ರಾಜನಾಥ್ ಸಿಂಗ್ ಅವರು, ಬಸವಣ್ಣ ಹಾಗೂ ಸರ್.ಎಂ ವಿಶ್ವೇಶ್ವರಯ್ಯ ಅವರನ್ನು ನೆನೆದರು. ಅದಲ್ಲದೇ ಏರೋ ಇಂಡಿಯಾಗೆ ಕರ್ನಾಟಕ ಸರ್ಕಾರದ ಸಹಕಾರಕ್ಕೆ ಧನ್ಯವಾದ ಅರ್ಪಿಸಿದ ಅವರು, ಏಷ್ಯಾದ ಅತ್ಯಂತ ದೊಡ್ಡ ಏರೋ ಶೋ ಹಮ್ಮಿಕೊಳ್ಳುವುದು ಭಾರತದ ಪಾಲಿಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
‘ರಕ್ಷಣಾ ಕ್ಷೇತ್ರದ ಆಧುನೀಕರಣಕ್ಕೆ 130 ಬಿಲಿಯನ್ ಅಮೆರಿಕನ್ ಡಾಲರ್’
ಆತ್ಮ ನಿರ್ಭರ ಭಾರತ ಅಭಿಯಾನ ಅಡಿಯಲ್ಲಿ ದೇಶದ ರಕ್ಷಣಾ ಕ್ಷೇತ್ರವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಇದಕ್ಕಾಗಿ 130 ಬಿಲಿಯನ್ ಅಮೆರಿಕನ್ ಡಾಲರ್ ಹಣ ಮೀಸಲಿರಿಸಲಾಗಿದೆ. ಜಾಗತಿಕ ರಕ್ಷಣಾ ಪಾಲುದಾರಿಕೆಯಲ್ಲಿ ಭಾರತದ ಇರುವಿಕೆಯನ್ನು ವಿಶ್ವ ಗಮನಿಸುತ್ತಿದ್ದು, ರಕ್ಷಣಾ ಸಹಭಾಗಿತ್ವಕ್ಕೆ ಉತ್ಸುಕವಾಗಿವೆ. ಭಾರತ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲಿದ್ದು, ಜಾಗತಿಕ ರಕ್ಷಣಾ ಸಹಭಾಗಿತ್ವದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ.
Comments are closed.