ರಾಷ್ಟ್ರೀಯ

ಹೆಚ್ಚುತ್ತಿರುವ ಕೊರೋನಾ; ಇಂದು ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆಯಲಿದೆ ಮಹತ್ವದ ಸಭೆ: ರಾಜ್ಯದಲ್ಲಿ ಮತ್ತೆ ಜಾರಿಯಾಗುತ್ತಾ ಲಾಕ್​ಡೌನ್​?

Pinterest LinkedIn Tumblr

ಬೆಂಗಳೂರು: ದಿನೇ ದಿನೇ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆ, ಮುಂಜಾಗ್ರತೆ ವಹಿಸುವಂತೆ ರಾಜ್ಯ ಸರ್ಕಾರವು ಜನರಿಗೆ ಎಚ್ಚರಿಕೆ ನೀಡಿದೆ. ಜೊತೆಗೆ ರಾಜ್ಯದಲ್ಲಿ ಕೊರೋನಾ ತಡೆಗಾಗಿ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಹೀಗಾಗಿ ಇಂದು ಸಿಎಂ ಬಿಎಸ್​ ಯಡಿಯೂರಪ್ಪನವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಇಂದು ಸಂಜೆ 5 ಗಂಟೆಗೆ ವಿಧಾನಸೌಧದಲ್ಲಿ ಕೋವಿಡ್​ ತಂತ್ರಜ್ಞರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಬಿಎಸ್​ವೈ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 6 ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಎಷ್ಟೇ ಕ್ರಮ ಕೈಗೊಂಡರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ, ಖಡಕ್ ಸಂದೇಶ ರವಾನಿಸಲಾಗುತ್ತದೆ. ಸಭೆ ನಡೆಸುವಂತೆ ಈಗಾಗಲೇ ಆರೋಗ್ಯ ಸಚಿವ ಕೆ.ಸುಧಾಕರ್​ ಸಿಎಂ ಬಳಿ ಮನವಿ ಮಾಡಿದ್ದರು. ಕೊರೋನಾ ವಿಷಯದಲ್ಲಿ ಜನರು ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಪ್ರಸ್ತಾಪ ಕೂಡ ಮಾಡಿದ್ದರು.

ರಾಜ್ಯದ ಆರು ಜಿಲ್ಲೆಗಳಲ್ಲಿ ಈಗಾಗಲೇ ಕೊರೋನಾ ಹೆಚ್ಚಾಗಿದೆ. ಮುಂದೆ ಇದು ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎರಡನೇ ಅಲೆಯ ಬಗ್ಗೆಯೂ ತಾಂತ್ರಿಕ ತಜ್ಞರು ಎಚ್ಚರಿಸಿದ್ದಾರೆ. ಈ ಹಿನ್ನೆಲೆ ಕೊರೋನಾ ಕಡಿವಾಣಕ್ಕೆ ಏನು ಮಾಡಬಹುದು ಎಂದು ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಿದ್ದಾರೆ.

ಅವರ ಅಭಿಪ್ರಾಯದ ಮೇಲೆ ಕಠಿಣ ನಿಯಮಗಳನ್ನು ಜಾರಿಗೆ ತರಲು ನಿರ್ಧಾರ ಮಾಡಲಾಗುತ್ತದೆ. ಈಗಾಗಲೇ ಟಫ್​ ರೂಲ್ಸ್ ಬಗ್ಗೆ ಆರೋಗ್ಯ ಇಲಾಖೆ ಕೂಡ ಸಿದ್ದತೆ ನಡೆಸುತ್ತಿದೆ. ಇಂದು ಸಭೆಯಲ್ಲಿ ಈ ಬಗ್ಗೆ ಆರೋಗ್ಯ ಸಚಿವರು ಮಂಡಿಸಲಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ಸಿಎಂ ನೇತೃತ್ವದ ಸಭೆ ಮಹತ್ವ ಪಡೆದಿದೆ.

ರಾಜ್ಯ ಸರ್ಕಾರಕ್ಕೆ ಕೇಂದ್ರದ ಸೂಚನೆ
ಕೊರೋನಾ ಸಂಖ್ಯೆ ಏರಿಕೆ ಹಿನ್ನೆಲೆ, ಕೊರೋನಾ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಕೂಡ ಕಳವಳ ವ್ಯಕ್ತಪಡಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಂದಲೂ ಖಡಕ್ ಸಂದೇಶ ರವಾನೆಯಾಗಿದೆ.

ಕೊರೋನಾ ತಡೆಗೆ ಅಗತ್ಯ ಕ್ರಮ ವಹಿಸುವಂತೆ ಸಿಎಂ ಬಿಎಸ್​ ಯಡಿಯೂರಪ್ಪನವರಿಗೆ ಜೆ.ಪಿ.ನಡ್ಡಾ ಸಂದೇಶ ರವಾನಿಸಿದ್ದಾರೆ. ಕೊರೋನಾ ಬಗ್ಗೆ ಎಚ್ಚರಿಕೆ ವಹಿಸಲು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ತಾವೇ ಖುದ್ದು ರಾಜ್ಯದ ಜನರ ಎಚ್ಚರಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದಾರೆ.

ಕಳೆದ ಹಲವು ದಿನಗಳಿಂದ ನಿಯಂತ್ರಣದಲ್ಲಿದ್ದಕ್ಕೆ ಸಿಎಂ ಸುಮ್ಮನೆ ಇದ್ದರು. ಆದರೆ ಈಗ ದಿಢೀರ್ ಆಗಿ ಹೆಚ್ಚಳವಾಗ್ತಿರೋದಕ್ಕೆ ಸರ್ಕಾರ ಕೂಡ ಕಳವಳ ವ್ಯಕ್ತಪಡಿಸಿದೆ. ಕೊರೋನಾ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಜನರ ಮೇಲೂ ಆರೋಗ್ಯ ಇಲಾಖೆ ಬೇಸರ ವ್ಯಕ್ತಪಡಿಸಿದೆ. ಎಷ್ಟೇ ಎಚ್ಚರಿಸುವ ಪ್ರಯತ್ನ ಮಾಡಿದರೂ ಜನರು ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಿ, ಅಗತ್ಯ ಕ್ರಮ ವಹಿಸುವಂತೆ ಸೂಚನೆ ಕೊಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಇಂದು ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯದ ಜನತೆಗೆ ಖಡಕ್ ಸಂದೇಶ ರವಾನಿಸುವ ಸಾಧ್ಯತೆ ಇದೆ. ಕೊರೋನಾ ತಡೆಯುವ ವಿಷಯದಲ್ಲಿ ಸಿಎಂ ಯಾವ ಕಠಿಣ ನಿಯಮಗಳನ್ನು ಜಾರಿ ಮಾಡ್ತಾರೆ ಎಂಬುದೇ ಸದ್ಯಕ್ಕೆ ಇರುವ ಕುತೂಹಲವಾಗಿದೆ.

ಈ ವಿಚಾರವಾಗಿ, ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ನೋಡೋಣ ಸಿಎಂ ಸಭೆ ಕರೆದಿದ್ದಾರೆ. ಸಿಎಂ ಸಭೆಯಲ್ಲಿ ಏನು ಹೇಳ್ತಾರೋ, ಅದರ ಆಧಾರದ ಮೇಲೆ ಕ್ರಮ ಜರುಗಿಸುತ್ತೇವೆ. ಕರ್ಫ್ಯೂ ಆಗಲಿ, ರಾತ್ರಿ ಕರ್ಫ್ಯೂ ಆಗಲಿ ಯಾವ ವಿಷಯದ ಬಗ್ಗೆಯೂ ನಮ್ಮ ಜೊತೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತಾ..?
ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ, ಮತ್ತೆ ರಾಜ್ಯದಲ್ಲಿ ಲಾಕ್​ಡೌನ್​ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ವಿಚಾರವಾಗಿ ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದ ಜನತೆಯನ್ನು ಎಚ್ಚರಿಸಿದ್ದಾರೆ. ಕೊರೋನಾ ಜಾಸ್ತಿಯಾಗ್ತಿದೆ. ಜನರು ಎಚ್ಚರಿಕೆ ವಹಿಸಬೇಕು. ಹೀಗಾಗಿ ಅಗತ್ಯ ಕ್ರಮಕ್ಕೆ ಸಭೆ ಕರೆಯಲಾಗಿದೆ. ಇಂದು ಸಭೆಯಲ್ಲಿ ಬಿಗಿ ಕ್ರಮದ ಬಗ್ಗೆ ತೀರ್ಮಾನ ಮಾಡುತ್ತೇವೆ. ಇದುವರೆಗೂ ಲಾಕ್ ಡೌನ್ ಮಾಡುವ ಬಗ್ಗೆ ಚಿಂತನೆ ಇಲ್ಲ. ಆದರೆ ಮುಂದೆ ಜನರು ಸರ್ಕಾರದ ನಿಯಮ ಪಾಲಿಸದೆ ಇದ್ರೆ ಲಾಕ್ ಡೌನ್ ಅನಿವಾರ್ಯ ಎಂದು ಹೇಳಿದರು.

ಲಾಕ್ ಡೌನ್ ಆಗಬಾರದು ಅಂತಿದ್ದರೆ ಜನರು ಸಹಕರಿಸಬೇಕು. ಕೋವಿಡ್ ಕೈ ಮೀರಿ ಹೋಗ್ತಿದೆ. ದಿನೇ ದಿನೇ ಕೊರೋನಾ ಜಾಸ್ತಿಯಾಗ್ತಿದೆ. ಲಾಕ್ ಡೌನ್ ಆಗದೆ, ಎಲ್ಲ ವ್ಯವಹಾರಗಳು ನಡೆಯಬೇಕು ಎಂದರೆ ಜನರು ಸಹಕರಿಸಬೇಕು. ಇನ್ಮುಂದೆ ಮದುವೆ ಸಮಾರಂಭಗಳಿಗೆ ಇಂತಿಷ್ಟೇ ಜನರು ಇರಬೇಕು ಎಂದು ನಿಗದಿ ಮಾಡ್ತೇವೆ. ಈಗಾಗಲೇ ಈ ಸಂಬಂಧ ಬೆಳಿಗ್ಗೆ ಮುಖ್ಯಕಾರ್ಯದರ್ಶಿಗಳ ಜೊತೆಗೂ ಚರ್ಚೆ ಮಾಡಿದ್ದೇನೆ. ಏನೇನು ಮಾಡಬಹುದು ಎಂದು ಸಲಹೆ ಪಡೆದಿದ್ದೇನೆ. ನಾಳೆ ಅಂತಿಮವಾಗಿ ಎಲ್ಲರ ವಿಶ್ವಾಸ ತೆಗೆದುಕೊಂಡು ಬಿಗಿ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದರು.

Comments are closed.