ರಾಷ್ಟ್ರೀಯ

ಜೆನೋಮ್ ಪರೀಕ್ಷೆಗೆ ಪಂಜಾಬ್ ಕಳುಹಿಸಿದ 401 ಮಾದರಿಗಳ ಪೈಕಿ ಶೇ.81 ರಷ್ಟು ಮಂದಿಗೆ ಬ್ರಿಟನ್ ರೂಪಾಂತರಿ ಕೊರೋನಾ ದೃಢ

Pinterest LinkedIn Tumblr

ಚಂಡೀಗಢ: ಜೆನೋಮ್(ವಂಶವಾಹಿನಿ) ಪರೀಕ್ಷೆಗೆ ಪಂಜಾಬ್ ಕಳುಹಿಸಿದ 401 ಮಾದರಿಗಳ ಪೈಕಿ ಶೇ.81 ರಷ್ಟು ಮಂದಿಗೆ ಬ್ರಿಟನ್ ರೂಪಾಂತರಿ ಕೊರೋನಾ ದೃಢಪಟ್ಟಿದೆ.

ಪಂಜಾಬ್ ಸರ್ಕಾರ ಜನವರಿ 1 ಮತ್ತು ಮಾರ್ಚ್ 10 ರ ನಡುವೆ ಸಂಗ್ರಹಿಸಲಾದ 401 ಮಾದರಿಗಳನ್ನು ಎನ್‌ಸಿಡಿಸಿಗೆ ಜೆನೋಮ್ ಪರೀಕ್ಷೆಗಾಗಿ ಕಳುಹಿಸಿತ್ತು. ಈ ಪೈಕಿ 326 ಮಾದರಿಗಳಲ್ಲಿ ಬ್ರಿಟನ್ ರೂಪಾಂತರ ಪತ್ತೆಯಾಗಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ರಾಜ್ಯ ಕೋವಿಡ್ ತಜ್ಞರ ಸಮಿತಿಯ ಮುಖ್ಯಸ್ಥ ಡಾ.ಕೆ.ಕೆ.ತಲ್ವಾರ್ ಹೇಳಿದ್ದಾರೆ.

ಈ ಬ್ರಿಟನ್ ರೂಪಾಂತರಿ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ಅದು ಹೆಚ್ಚು ಅಪಾಯಕಾರಿ ಅಲ್ಲ ಎಂದು ತಲ್ವಾರ್ ಅವರು ತಿಳಿಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಅಲ್ಲದೆ, ಈ ಹೊಸ ಬ್ರಿಟನ್ ರೂಪಾಂತರಿ ಕೊರೋನಾಗೂ ಕೋವಿಶೀಲ್ಡ್ ಲಸಿಕೆ ಅಷ್ಟೇ ಪರಿಣಾಮಕಾರಿಯಾಗಿದೆ ಎಂದಿದ್ದಾರೆ.

ಈ ರೂಪಾಂತರಿ ಯುವಜನರಿಗೆ ಹೆಚ್ಚು ತಗುಲಿರುವುದು ಕಂಡುಬಂದಿರುವುದರಿಂದ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೂ ವ್ಯಾಕ್ಸಿನೇಷನ್ ವಿಸ್ತರಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದ ಪಂಜಾಬ್ ಸಿಎಂ, ರಾಜ್ಯದ ಕೋವಿಡ್ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.

ಬ್ರಿಟನ್ ರೂಪಾಂತರಿ ಕೊರೋನಾ ಈಗ ವಿಶ್ವದ ಅನೇಕ ಭಾಗಗಳಲ್ಲಿ ಅತ್ಯಂತ ವೇಗವಾಗಿ ಹರಡುತ್ತಿದ್ದು, ಇಂಗ್ಲೆಂಡ್ ನಲ್ಲಿ ಹೊಸ ಪ್ರಕರಣಗಳ ಪೈಕಿ 98 ರಷ್ಟು ಮತ್ತು ಸ್ಪೇನ್‌ನಲ್ಲಿ ಶೇ. 90 ಬ್ರಿಟನ್ ಮಾದರಿಯ ಕೊರೋನಾ ಪತ್ತೆಯಾಗಿದೆ. ಇದು ಮೂಲ ವೈರಸ್‌ಗಿಂತ ಶೇಕಡಾ 70 ರಷ್ಟು ಹೆಚ್ಚು ಹರಡುತ್ತದೆ ಎಂದು ಯುಕೆ ಅಧಿಕಾರಿಗಳು ಹೇಳಿದ್ದಾರೆ.

Comments are closed.