ರಾಷ್ಟ್ರೀಯ

75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ದೆಹಲಿ: ಇಂದು 75ನೇ ಸ್ವಾತಂತ್ರ್ಯ ದಿನಾಚರಣೆ (75th Independence Day) ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿಯವರು ಹಲವು ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದ್ದಾರೆ. ಹಾಗೇ, ಆತ್ಮ ನಿರ್ಭರ ಭಾರತ (Atma Nirbhar Bharat)ಕ್ಕೆ ಒತ್ತು ನೀಡಬೇಕು ಎಂದು ಹೇಳಿರುವ ಅವರು, ಸ್ವ ಸಹಾಯ ಸಂಘ (SHGs)ಗಳಿಂದ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡುವ ಸಲುವಾಗಿ ನಮ್ಮ ಕೇಂದ್ರ ಸರ್ಕಾರ ಇ-ಕಾಮರ್ಸ್​ ವೇದಿಕೆ ಒದಗಿಸಿಕೊಡಲಿದೆ ಎಂದು ಪ್ರಧಾನಿ ಮೋದಿಯವರು ಘೋಷಿಸಿದರು.

ದೇಶಾದ್ಯಂತ ಅನೇಕ ಹಳ್ಳಿಗಳ ಸುಮಾರು 8 ಕೋಟಿ ಮಹಿಳೆಯರು ಹೀಗೆ ಸ್ವಸಹಾಯ ಸಂಘಗಳಿಗೆ ಸೇರ್ಪಡೆಯಾಗಿದ್ದಾರೆ. ತಮ್ಮ ಸಂಘಗಳ ಮೂಲಕ ವಿವಿಧ ಉತ್ಪನ್ನಗಳನ್ನು ತಯಾರಿಸುತ್ತಿದ್ದಾರೆ. ಆದರೆ ಅದೆಷ್ಟೋ ಮಂದಿಗೆ ಮಾರುಕಟ್ಟೆ ಸೌಲಭ್ಯ ಸಮರ್ಪಕವಾಗಿ ಸಿಗದೆ ಕಷ್ಟವಾಗುತ್ತಿದೆ. ಅಂಥ ಸ್ವ ಸಹಾಯ ಸಂಘಗಳು ಉತ್ಪಾದಿಸಿದ ಉತ್ಪನ್ನಗಳಿಗೆ ದೇಶೀಯವಾಗಿ ಹಾಗೂ ವಿದೇಶಗಳಲ್ಲೂ ಮಾರುಕಟ್ಟೆ ಸೌಕರ್ಯ ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರವೇ ಇ-ಕಾಮರ್ಸ್​ ವೇದಿಕೆ ಸೃಷ್ಟಿಸಿಕೊಡಲಿದೆ ಎಂದಿದ್ದಾರೆ. ಅಲ್ಲದೆ, ದೇಶದಲ್ಲಿ ವೋಕಲ್​ ಫಾರ್​ ಲೋಕಲ್​ ಎಂಬ ತತ್ವವನ್ನು ಹೆಚ್ಚೆಚ್ಚು ಜನರು ಅಳವಡಿಸಿಕೊಂಡು, ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಹಕಾರ ಕೊಡಬೇಕು ಎಂದೂ ಒತ್ತಾಯಿಸಿದ್ದಾರೆ.

75ವಾರಗಳಲ್ಲಿ 75 ವಂದೇ ಭಾರತ್​ ರೈಲುಗಳ ಸಂಪರ್ಕ
ಈ ಬಾರಿ ಭಾರತ ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಅದರ ಅಂಗವಾಗಿ 75ವಾರಗಳ ಸರಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಾಗೇ 75ವಾರಗಳಲ್ಲಿ 75 ವಂದೇ ಭಾರತ್​ ರೈಲುಗಳು ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಉಡಾನ್​ (UDAN) ಯೋಜನೆಯಡಿ ಅದೆಷ್ಟೋ ದೂರದ ಪ್ರದೇಶಗಳಲ್ಲಿ ಏರ್​ಪೋರ್ಟ್​ ನಿರ್ಮಾಣ ಮಾಡಿ, ವಿಮಾನ ಯಾನ ಸಂಪರ್ಕ ಕಲ್ಪಿಸಲಾಗಿದೆ. ಅದೇ ರೀತಿ ಇದೀಗ ವಂದೇ ಭಾರತ್​ ಸ್ಕೀಮ್​ನಡಿ 75 ರೈಲುಗಳು ಇನ್ನು 75 ವಾರಗಳಲ್ಲಿ ದೇಶದ ವಿವಿಧ ಭಾಗಗಳನ್ನು ಸಂಪರ್ಕಿಸಲಿವೆ ಎಂದು ತಿಳಿಸಿದ್ದಾರೆ.

ಅಪೌಷ್ಟಿಕತೆ ಹೋಗಲಾಡಿಸಲು ಕ್ರಮ
ದೇಶದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. 2024ರ ಹೊತ್ತಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಬಡವರಿಗೆ ನೀಡಲಾಗುವ ಅಕ್ಕಿಯ ಪ್ರಮಾಣ ಹೆಚ್ಚಿಸಲಾಗುತ್ತದೆ. ಅಲ್ಲದೆ, ಪೌಷ್ಟಿಕಾಂಶವುಳ್ಳ ಅಕ್ಕಿಯನ್ನು ಒದಗಿಸಲಾಗುವುದು ಎಂದೂ ತಿಳಿಸಿದ್ದಾರೆ.

ಸಣ್ಣ ರೈತರು ದೇಶದ ಹೆಮ್ಮೆ
ದೇಶದ ಒಟ್ಟಾರೆ ರೈತರಲ್ಲಿ ಶೇ.80ರಷ್ಟು ಸಣ್ಣ ರೈತರು ಇದ್ದಾರೆ. ಎರಡು ಹೆಕ್ಟೇರ್​ಗಿಂತಲೂ ಕಡಿಮೆ ಕೃಷಿ ಭೂಮಿ ಇದ್ದು ಸಣ್ಣ ರೈತರು ಎನ್ನಿಸಿಕೊಂಡವರನ್ನು ಈ ದೇಶದ ಹೆಮ್ಮೆಯನ್ನಾಗಿ ರೂಪಿಸುವುದು ಸರ್ಕಾರದ ಆದ್ಯತೆಯಾಗಿದೆ. ದೇಶದ ಸಣ್ಣ ರೈತರ ಸಾಮೂಹಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿ, ಅವರಿಗೆ ಅಗತ್ಯ ಇರುವ, ಮುಂದುವರಿದ ಸೌಕರ್ಯಗಳನ್ನು ನೀಡಬೇಕು ಎಂಬುದು ನಮ್ಮ ಕನಸು ಎಂದು ಮೋದಿ ಹೇಳಿದರು. ಹಾಗೇ, Chhota kisan bane desh ki shaan ಎಂಬುದೇ ನಮ್ಮ ಮಂತ್ರವಾಗಲಿದೆ ಎಂದೂ ತಿಳಿಸಿದರು.

ಈಶಾನ್ಯ ರಾಜ್ಯಗಳ ಉಲ್ಲೇಖ
ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳನ್ನು ವಿಶೇಷವಾಗಿ ಉಲ್ಲೇಖಿಸಿದರು. ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗದೆ. ಹಾಗೇ, ಜಮ್ಮು-ಕಾಶ್ಮೀರವೂ ಪ್ರಗತಿಯಾಗುತ್ತಿದೆ.. ಅಲ್ಲಾದ ಅಭಿವೃದ್ಧಿ ಕಾಣಿಸುತ್ತಿದೆ. ಇನ್ನು ಈಶಾನ್ಯ ರಾಜ್ಯಗಳ ಎಲ್ಲ ರಾಜಧಾನಿಗಳಿಗೂ ರೈಲು ಸಂಪರ್ಕ ಒದಗಿಸುವ ಕೆಲಸ ಕೆಲವೇ ದಿನಗಳಲ್ಲಿ ಮುಕ್ತಾಯ ಆಗಲಿದೆ ಎಂದೂ ಹೇಳಿದರು.

Comments are closed.