ವಾಷಿಂಗ್ಟನ್ : ಹಾರುವ ಕಾರುಗಳನ್ನು ರೂಪಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಗೂಗಲ್ ಹೊಂದಿದ್ದು ಅದೀಗ ಪ್ರಾಯೋಗಿಕ ಪರೀಕ್ಷಾ ಮಟ್ಟವನ್ನು ತಲುಪಿರುವುದಾಗಿ ಬ್ಲೂಮ್ ಬರ್ಗ್ ತಿಳಿಸಿದೆ.
ಹಾರುವ ಕಾರು ಅಭಿವೃದ್ಧಿಪಡಿಸುವ ತನ್ನ ಕನಸಿನ ದೊಡ್ಡ ಯೋಜನೆಯಾಗಿ ಗೂಗಲ್ ಸ್ಥಾಪಕ ಲ್ಯಾರಿ ಪೇಜ್ ಅವರು ಇಬ್ಬರು ಸ್ಟಾರ್ಟ್ ಅಪ್ ಗಳನ್ನು ಬೆಂಬಲಿಸುತ್ತಿದ್ದಾರೆ. ಇವರಲ್ಲಿ ಒಬ್ಟಾತನ ಯೋಜನೆಗೆ ಗೂಗಲ್ ಈಗಾಗಲೇ 10 ಕೋಟಿ ಡಾಲರ್ಗಳನ್ನು ಅವರು ವಿನಿಯೋಗಿಸಿದ್ದಾರೆ ಎಂದು ಬ್ಲೂಮ್ಬರ್ಗ್ ಹೇಳಿದೆ.
ಹಾರುವ ಕಾರುಗಳನ್ನು ರೂಪಿಸುವ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಝೀ ಡಾಟ್ ಏರೋ ಎಂಬ ಸ್ಟಾರ್ಟ್ ಅಪ್ ಸಾಹಸೋದ್ಯಮಿಯ ಯತ್ನಕ್ಕೆ ಗೂಗಲ್ ಸ್ಥಾಪಕ ಲ್ಯಾರಿ ಪೇಜ್ ಅವರು 2010ರಿಂದಲೇ ಹಣ ಹೂಡುತ್ತಾ ಬಂದಿದ್ದಾರೆ. ಕ್ಯಾಲಿಫೋರ್ನಿಯ ಹೋಲಿಸ್ಟರ್ನಲ್ಲಿ ವಿಮಾನ ನಿಲ್ದಾಣದಲ್ಲಿ ಗೂಗಲ್ ಹಾರುವ ಕಾರಿನ ಮಾದರಿಯ ಪ್ರಾಯೋಗಿಕ ಹಾರಾಟವನ್ನು ನಡೆಸಲಾಗುತ್ತಿದೆ ಎಂದು ಬ್ಲೂಮ್ ಬರ್ಗ್ ಹೇಳಿದೆ.
ಹಾರುವ ಕಾರಿನ ಯೋಜನೆಯನ್ನು ಅಭಿವೃದ್ಧಿ ಪಡಿಸುತ್ತಿರುವ ಸ್ಟಾರ್ಟ್ ಅಪ್ ಉದ್ಯಮಿಗೆ ನಾಸಾದ ಸಂಶೋಧನ ಕೇಂದ್ರದಲ್ಲಿ ಉತ್ಪಾದನಾ ಘಟಕವಿದೆ. ಇದು ನಾಸಾದ ಮೌಂಟ್ನ್ ವ್ಯೂ ಕೇಂದ್ರಕ್ಕೆ ತಾಗಿಕೊಂಡಿದೆ.
ಗೂಗಲ್ ಸಹ-ಸ್ಥಾಪಕ ಪೇಜ್ ಅವರು ಈಗ ಕಳೆದೊಂದು ವರ್ಷದಿಂದ ಇದೇ ರೀತಿಯ ಹಾರುವ ಕಾರಿನ ಬೇರೊಂದು ಮಾದರಿಯನ್ನು ಅಭಿವೃದ್ಧಿಪಡಿಸುವ ಮತ್ತೋರ್ವ ಸ್ಟಾರ್ಟ್ ಅಪ್ ಕಿಟೀ ಹಾಕ್ ಎಂಬಾತನ ಇನ್ನೊಂದು ಸ್ಪರ್ಧಾತ್ಮಕ ಯೋಜನೆಯಲ್ಲೂ ಹಣ ಹೂಡುತ್ತಿದ್ದಾರೆ ಎಂದು ಬ್ಲೂಮ್ಬರ್ಗ್ ತಿಳಿಸಿದೆ.
ಕಿಟೀ ಹಾಕ್ ಅವರ ಯೋಜನೆಯಲ್ಲಿ ಸುಮಾರು 12 ಮಂದಿ ಇಂಜಿನಿಯರ್ಗಳು ಕೆಲಸ ಮಾಡುತ್ತಿದ್ದಾರೆ. ಈತನ ಪ್ರಧಾನ ಕಾರ್ಯಾಲಯವು ಝೀ ಡಾಟ್ ಏರೋ ಕಂಪೆನಿಯ ಕಾರ್ಯಾಲಯದಿಂದ ಕೇವಲ ಅರ್ಧ ಮೈಲು ದೂರದಲ್ಲಿದೆ. ಕಿಟೀ ಹಾಕ್ ಅಭಿವೃದ್ಧಿಪಡಿಸುತ್ತಿರುವ ಹಾರುವ ಕಾರು ಗಾತ್ರದಲ್ಲಿ ದೊಡ್ಡದಿದ್ದು ಇದು ಕ್ವಾಡ್ಕಾಪ್ಟರ್ ಡ್ರೋನ್ನ ಬೃಹತ್ ಮಾದರಿಯಲ್ಲಿದೆ ಎಂದು ಬ್ಲೂಮ್ ಬರ್ಗ್ ಹೇಳಿದೆ.
-ಉದಯವಾಣಿ
Comments are closed.