ಇಸ್ಲಾಮಾಬಾದ್: ಪಾಕಿಸ್ತಾನ ಜೈಲಿನಲ್ಲಿರುವ ಭಾರತೀಯ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಹೋಗಿದ್ದ ಅವರ ಪತ್ನಿ ಮತ್ತು ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿರುವ ಅಲ್ಲಿನ ಸರಕಾರ ತನ್ನ ಉದ್ಧಟತನವನ್ನು ಮತ್ತೂ ಮುಂದುವರಿಸಿದೆ. ಜಾಧವ್ ಅವರ ಪತ್ನಿಯ ಷೂ ತೆಗೆದಿರಿಸ ವಾಪಸ್ ನೀಡದ ಪಾಕ್ ಅಧಿಕಾರಿಗಳು ಅದನ್ನು ಈಗ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.
ಅನುಮಾನಕ್ಕೆ ಎಡೆ ಮಾಡಿ ಕೊಡುವ ವಿದೇಶಿ ವಸ್ತು ಷೂನಲ್ಲಿ ಇರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿರುವುದಾಗಿ ಅಲ್ಲಿನ ಮಾಧ್ಯಮ ವರದಿ ಮಾಡಿದೆ.
ಷೂನಲ್ಲಿದ್ದ ವಸ್ತು ಲೋಹದ ವಸ್ತುವೇ, ಕ್ಯಾಮೆರಾ ಅಥವಾ ರೆಕಾರ್ಡಿಂಗ್ ಚಿಪ್ ಇರಬಹುದೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಪಾಕ್ ವಿದೇಶ ವ್ಯವಹಾರ ಕಚೇರಿಯ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ.
ಆ ಷೂನಲ್ಲಿ ಲೋಹದ ವಸ್ತು ಇರುವುದನ್ನು ವಿದೇಶ ವ್ಯವಹಾರ ಕಚೇರಿಯ ಅಧಿಕಾರಿಗಳು ಪತ್ತೆಹಚ್ಚಿರುವುದಾಗಿ ‘ಡಾನ್’ ವರದಿಯಲ್ಲಿ ಹೇಳಿದೆ. ಆದರೆ ಕಚೇರಿ ಪ್ರಕಟಣೆಯು ಷೂನಲ್ಲಿ ಏನೋ ವಸ್ತು ಇದೆ ಎಂದಷ್ಟೆ ಹೇಳಿತ್ತು. ಜಾಧವ್ ಅವರ ಪತ್ನಿಗೆ ಹೊರಡುವಾಗ ಬೇರೆ ಷೂ ನೀಡಿರುವುದಾಗಿ ಮೊಹಮ್ಮದ್ ಫೈಸಲ್ ತಿಳಿಸಿದ್ದಾರೆ.
ಜಾಧವ್ ಅವರ ಪತ್ನಿ ಮತ್ತು ತಾಯಿಯನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ ಎಂಬ ಭಾರತದ ವಾದವನ್ನು ಪಾಕ್ ಅಲ್ಲಗಳೆದಿದೆ. ಜಾಧವ್ ಭೇಟಿಯ ವೇಳೆ ಅವರ ಪತ್ನಿ ಮತ್ತು ತಾಯಿಯ ಬಳೆ, ಬಿಂದಿ, ಮಂಗಲಸೂತ್ರ ಸೇರಿ ಎಲ್ಲವನ್ನು ಪಾಕ್ ಅಧಿಕಾರಿಗಳು ತೆಗೆಸಿದ್ದರು.
ಪಾಕ್ ಭದ್ರತೆಯ ನೆಪ ಮಾಡಿಕೊಂಡು ಭಾರತೀಯರ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂವೇದನೆಗೆ ಧಕ್ಕೆ ಮಾಡಿದೆ. ಅವರು ಮಾಡಿದ್ದೆಲ್ಲ ಭದ್ರತೆಯ ದೃಷ್ಟಿಯಿಂದ ಅಗತ್ಯವಿರಲಿಲ್ಲ ಎಂದು ಭಾರತ ಹೇಳಿದೆ.
ಭೇಟಿ ನಡೆದ 24 ಗಂಟೆ ನಂತರ ಭಾರತ ಆಕ್ಷೇಪ ಎತ್ತಿದೆ. ಹಾಗಿದ್ದರೆ ಜಾಧವ್ ತಾಯಿ, ಪತ್ನಿ ಜತೆಗಿದ್ದ ಭಾರತೀಯ ಉಪ ರಾಯಭಾರಿ ಯಾವುದೇ ಆಕ್ಷೇಪಣೆ ಸಲ್ಲಿಸಲಿಲ್ಲವೇಕೆ ಎಂದು ಪ್ರಶ್ನಿಸಿರುವ ಪಾಕ್ ಈ ವಿಚಾರವಾಗಿ ನೆರೆರಾಷ್ಟ್ರದ ಜತೆ ಮಾತಿನ ಯುದ್ಧದಲ್ಲಿ ತೊಡಗಲು ಬಯಸುವುದಿಲ್ಲ ಎಂದೂ ಹೇಳಿದ್ದಾರೆ.
ಸಂಸತ್‌ನಲ್ಲಿ ಇಂದು ಸುಷ್ಮಾ ಹೇಳಿಕೆ
ಹೊಸದಿಲ್ಲಿ: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮಾಜಿ ಸೇನಾಧಿಕಾರಿ ಕುಲಭೂಷಣ ಜಾಧವ್ ಭೇಟಿಗೆ ತೆರಳಿದ ವೇಳೆ ಅವರ ತಾಯಿ ಹಾಗೂ ಪತ್ನಿಯನ್ನು ಪಾಕ್ ಸರಕಾರ ನಡೆಸಿಕೊಂಡ ರೀತಿ ಕುರಿತಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಲೋಕಸಭೆಯಲ್ಲಿ ಗುರುವಾರ ಹೇಳಿಕೆ ನೀಡಲಿದ್ದಾರೆ. ಬುಧವಾರ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಎಐಎಡಿಎಂಕೆ ಹಾಗೂ ಶಿವಸೇನೆ ಸದಸ್ಯರು ಪಾಕಿಸ್ತಾನದ ವರ್ತನೆಯನ್ನು ಕಟುವಾಗಿ ಟೀಕಿಸಿದರು. ಈ ವೇಳೆ ಸದನದಲ್ಲೇ ಇದ್ದ ಸುಷ್ಮಾ ಸ್ವರಾಜ್ ಅವರು, ಗುರುವಾರ ಹೇಳಿಕೆ ನೀಡುವುದಾಗಿ ಘೋಷಿಸಿದರು.
ಜಾಧವ್‌ರನ್ನು ಪಾಕಿಸ್ತಾನ ಅಮಾನವೀಯವಾಗಿ ನಡೆಸಿಕೊಂಡಿರುವುದು ಭಾರತ ಸರಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜತಾಂತ್ರಿಕ ವೈಫಲ್ಯ. ಜಾಧವ್ ಕುಟುಂಬಕ್ಕೆ ರಾಜತಾಂತ್ರಿಕ ಶಿಷ್ಟಾಚಾರದ ರಕ್ಷಣೆಯನ್ನು ಸರಕಾರ ಖಾತರಿಪಡಿಸಿಕೊಳ್ಳಬೇಕಿತ್ತು. ಪಾಕಿಸ್ತಾನಕ್ಕೆ ಕಳಿಸುವ ಮುನ್ನ ಖುದ್ದು ಪ್ರಧಾನಿ ಅಥವಾ ವಿದೇಶಾಂಗ ವ್ಯವಹಾರಗಳ ಸಚಿವರು ಪಾಕ್ ಸರಕಾರದ ಜತೆ ಮಾತುಕತೆ ನಡೆಸಬೇಕಿತ್ತು.
– ಎಂ.ವೀರಪ್ಪ ಮೊಯಿಲಿ, ಕಾಂಗ್ರೆಸ್ ಸಂಸದ
ಜಾಧವ್ ಕುಟುಂಬವನ್ನು ಪಾಕಿಸ್ತಾನ ನಡೆಸಿಕೊಂಡ ರೀತಿ ಅಕ್ಷಮ್ಯ. ಭಾರತವು ಪಾಕ್ ಮೇಲೆ ಯುದ್ಧ ಸಾರಿ ಆ ದೇಶವನ್ನು ನಾಲ್ಕು ಚೂರುಗಳಾಗಿ ಮಾಡಿ ಬಿಸಾಕಬೇಕು. ಅಸೂಯೆ ಮತ್ತು ಪ್ರತೀಕಾರದಿಂದ ನಡೆದುಕೊಳ್ಳುವ ನೆರೆರಾಷ್ಟ್ರದ ಸಮಸ್ಯೆಗೆ ಶಾಶ್ವತ ಪರಿಹಾರ ಎಂದರೆ ಅದೊಂದೇ. ಯುದ್ಧದ ವಿಚಾರವಾಗಿ ಕೇಂದ್ರ ಸರಕಾರ ಯೋಜನೆ ರೂಪಿಸಲು ಇದು ಸೂಕ್ತ ಸಮಯವಾಗಿದೆ.
– ಡಾ.ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಸಂಸದ
Comments are closed.