ಲಂಡನ್: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಹಗರಣದ ರುವಾರಿ ನೀರವ್ ಮೋದಿ ಸಿಂಗಾಪುರ ಪಾಸ್‌ಪೋರ್ಟ್ ಬಳಸಿ, ಲಂಡನ್‌ನಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಕೇಂದ್ರಬಿಂದುವಾಗಿರುವ ನೀರವ್ ಮೋದಿ, ಬೇರೆ ದೇಶದ ಪಾಸ್‌ಪೋರ್ಟ್ ಬಳಸಿ ಮಂಗಳವಾರ ಲಂಡನ್‌ನಿಂದ ಬ್ರಸೆಲ್ಸ್‌ಗೆ ಸಾಗಿದ್ದಾರೆ ಎಂದು ಖಚಿತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ ಕೆಲ ತಿಂಗಳಿನಿಂದ ಅವರ ಚಲನವಲನಗಳನ್ನು ಸೂಕ್ಷ್ಮವಾಗಿ ಗಮಿಸುತ್ತಿರುವುದಾಗಿ ಸಿಬಿಐ ಮೂಲಗಳು ತಿಳಿಸಿವೆ.
ಮಾ.31ರ ಬಳಿಕ ನೀರವ್ ಮೋದಿಯ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಅವರ ಪ್ರಯಾಣದ ಕುರಿತು ಯಾವುದೇ ಮಾಹಿತಿ ದಾಖಲಾಗಿಲ್ಲ. ನ್ಯಾಯಾಲಯ ಅವರ ಭಾರತದ ಪಾಸ್‌ಪೋರ್ಟ್ ಮೇಲೆ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದ್ದರೂ ಬೇರೆ ದೇಶದ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅವರನ್ನು ಬಂಧಿಸಲಾಗದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರವ್ ಮೋದಿ ಬಳಸುತ್ತಿರುವ ಪಾಸ್‌ಪೋರ್ಟ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಇಂಗ್ಲೆಂಡ್‌ನ ಭಾರತೀಯ ಹೈಕಮಿಷನರ್ ಕಚೇರಿ ನಿರಾಕರಿಸಿದ್ದು, ಹಣದಿಂದ ಏನನ್ನೂ ಪಡೆಯಲು ಸಾಧ್ಯ ಎಂದಷ್ಟೇ ಹೇಳಿದೆ. ಅಲ್ಲದೆ ಇಂಗ್ಲೆಂಡ್‌ನ ವಲಸೆ ವಿಭಾಗದಲ್ಲಿ ಅವರು ಬಳಸಿರುವ ಪಾಸ್‌ಪೋರ್ಟ್ ಕುರಿತು ಮಾಹಿತಿ ಪಡೆಯಬೇಕಿದೆ. ಲಂಡನ್ ಹಾಗೂ ಸಿಂಗಾಪುರ ನಡುವೆ ಅವರು ಆಗಾಗ್ಗೆ ಪ್ರಯಾಣಿಸುತ್ತಿರುವ ಕುರಿತು ಖಚಿತ ಮಾಹಿತಿ ಸಂಪಾದಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇಷ್ಟಾಗ್ಯೂ ಇಂಟರ್‌ಪೋಲ್‌ಗೆ, ಯಾವುದೇ ದೇಶದ ಪಾಸ್‌ಪೋರ್ಟ್ ಬಳಸಿದರೂ, ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಮನವಿ ಮಾಡಲು ಅವಕಾಶವೂ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೀರವ್ ಮೋದಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಕೇಂದ್ರ ತನಿಖಾ ದಳ ಸೋಮವಾರ ಇಂಟರ್‌ಪೋಲ್‌ಗೆ ಮನವಿ ಮಾಡಿತ್ತು. ಈ ಸಂಬಂಧ ಇಂಗ್ಲೆಂಡ್‌ನ ಭಾರತ ಹೈಕಮಿಷನರ್ ನೀರವ್ ಮೋದಿ ಲಂಡನ್‌ನಲ್ಲಿರುವ ಕುರಿತು ಖಚಿತ ಮಾಹಿತಿ ಸಂಪಾದಿಸಲಿತ್ತು. ಈ ವಿಚಾರ ವಿದೇಶಿ ಮಾಧ್ಯಮಗಳಲ್ಲೂ ಸುದ್ದಿಯಾದ ಬೆನ್ನಲ್ಲೆ ನೀರವ್ ಮೋದಿ ಲಂಡನ್‌ನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
Comments are closed.