ಅಂತರಾಷ್ಟ್ರೀಯ

3ನೇ ಮಹಾಯುದ್ಧಕ್ಕೆ ತೊಡೆತಟ್ಟುತ್ತಿರುವ ರಷ್ಯಾ, ಚೀನಾ?

Pinterest LinkedIn Tumblr

ಬೆಂಗಳೂರು: ರಷ್ಯಾ ದೇಶವು ತನ್ನ ಇಡೀ ಸೇನೆಯ ಅರ್ಧದಷ್ಟು ಶಕ್ತಿಯನ್ನು ಒಟ್ಟುಗೂಡಿಸಿ ಯುದ್ಧದ ತಾಲೀಮು ನಡೆಸುತ್ತಿದೆ. ರಷ್ಯಾದ 3 ಲಕ್ಷಕ್ಕೂ ಹೆಚ್ಚು ಯೋಧರು, 36 ಸಾವಿರ ಟ್ಯಾಂಕ್​ಗಳು,1 ಸಾವಿರ ಯುದ್ಧವಿಮಾನ, ಹೆಲಿಕಾಪ್ಟರ್, ಡ್ರೋನ್​ಗಳು; 80 ಯುದ್ಧನೌಕೆಗಳು ಒಂದೆಡೆ ಸೇರಿದರೆ ಎಂತಹವರ ಎದೆಯೂ ಥರ ಥರ ನಡುಗಿ ಹೋಗುತ್ತದೆ. ರಷ್ಯಾ ದೇಶ ಇಂಥದ್ದೊಂದು ಬೃಹತ್ ಮಟ್ಟದಲ್ಲಿ ಸಮರಾಭ್ಯಾಸ ನಡೆಸುತ್ತಿದೆ. ಕಳೆದ 40 ವರ್ಷಗಳಲ್ಲೇ ರಷ್ಯಾ ನಡೆಸುತ್ತಿರುವ ಅತೀ ದೊಡ್ಡ ಮತ್ತು ಅತ್ಯಂತ ಶಕ್ತಿಶಾಲಿ ಮಿಲಿಟರಿ ವಾರ್ ಗೇಮ್ ಇದಾಗಿದೆ. ರಷ್ಯಾ ಜೊತೆಗೆ ಚೀನಾ ಕೂಡ ಈ ಸಮರಾಭ್ಯಾಸದಲ್ಲಿ ಸೀಮಿತ ಮಟ್ಟದಲ್ಲಿ ಬೆಸೆದುಕೊಂಡಿರುವುದು ಜಗತ್ತಿನ ಅನೇಕ ರಾಷ್ಟ್ರಗಳ ಹುಬ್ಬೇರಿಸಿದೆ.

ಸೋವಿಯತ್ ರಷ್ಯಾ ಸಾಮ್ರಾಜ್ಯದ ಪತನ ಹಾಗೂ ಆರ್ಥಿಕ ಹಿನ್ನಡೆಗಳಿಂದಾಗಿ ಮೌನವಾಗಿಯೇ ಇದ್ದ ರಷ್ಯಾ ದೇಶ ಈಗ್ಗೆ ಕೆಲವಾರು ವರ್ಷಗಳಿಂದ ಅಗ್ರೆಸ್ಸಿವ್ ಆಗಿ ವರ್ತಿಸಲು ಆರಂಭಿಸಿದೆ. ಉಕ್ರೇನ್, ಸಿರಿಯಾ ಬಿಕ್ಕಟ್ಟು ವಿಚಾರವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳೊಂದಿಗೆ ರಷ್ಯಾ ಮತ್ತೆ ಜಿದ್ದಾಜಿದ್ದಿಗೆ ಬಿದ್ದಿದೆ. ಸದ್ದಿಲ್ಲದೆ ತನ್ನ ಮಿಲಿಟರಿ ಸಾಮರ್ಥ್ಯವನ್ನು ಕ್ರಮೇಣವಾಗಿ ಹೆಚ್ಚಿಸಿಕೊಳ್ಳುತ್ತಾ ಹೋಗಿದೆ. ಅಮೆರಿಕದ ಆಂತರಿಕ ವ್ಯವಹಾರಗಳ ಮೇಲೆ ರಷ್ಯಾ ರಹಸ್ಯವಾಗಿ ಹಸ್ತಕ್ಷೇಪ ಮಾಡುತ್ತಿರುವ ಸಂಗತಿಗಳು ಬೆಳಕಿಗೆ ಬರುತ್ತಿವೆ. ಅಮೆರಿಕ ಮತ್ತು ರಷ್ಯಾ ನಡುವಿನ ಶೀತನ ಸಮರ ಮರುಕಳಿಸುವ ಸುಳಿವು ಸಿಗುತ್ತಲೇ ಇದೆ.

ಈ ಹಿನ್ನೆಲೆಯಲ್ಲಿ ರಷ್ಯಾ ನಡೆಸುತ್ತಿರುವ ಮಿಲಿಟರಿ ವಾರ್ ಗೇಮ್ ಇಡೀ ಜಗತ್ತಿನ ಗಮನ ಸೆಳೆದಿದೆ. ವಿಶ್ವದ ದೊಡ್ಡಣ್ಣನ ಸ್ಥಾನ ಆಕ್ರಮಿಸಿಕೊಳ್ಳುವ ಬಲುಮಹತ್ವಾಕಾಂಕ್ಷಿ ಚೀನಾ ಕೂಡ ರಷ್ಯಾದ ಕೈಜೋಡಿಸಿದೆ. ಈ ಸಮರಾಭ್ಯಾಸದಲ್ಲಿ ಚೀನಾದ 3,500 ಸೇನಾಪಡೆಗಳು ಮಾತ್ರ ಪಾಲ್ಗೊಂಡಿದ್ದರೂ ಈ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಗಟ್ಟಿಯಾಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ರಷ್ಯಾ ಮತ್ತು ಚೀನಾ ಜೋಡಿ ಸೇರಿದರೆ ವಿಶ್ವದ ಬಲಿಷ್ಠಾತಿಬಲಿಷ್ಠ ಪಡೆಗಳಿಗೆ ನಡುಕ ಹುಟ್ಟಿಸಬಹುದೆನ್ನಲಾಗಿದೆ.

ರಷ್ಯಾದಲ್ಲಿ ಒಟ್ಟು 8-9 ಲಕ್ಷ ಸೇನಾ ತುಕಡಿಗಳಿವೆ. ಅದರಲ್ಲಿ ಮೂರೂವರೆ ಲಕ್ಷದಷ್ಟು ತುಕಡಿಗಳನ್ನ ಸಮರಾಭ್ಯಾಸದಲ್ಲಿ ಬಳಸಲಾಗುತ್ತಿದೆ ಎಂದರೆ ಈ ವಾರ್ ಗೇಮ್​ನ ಗಾಂಭೀರ್ಯತೆ ಅದೆಷ್ಟಿರಬಹುದೆಂದು ಅಂದಾಜಿಸಬಹುದಾಗಿದೆ. ತನ್ನ ಹೊಚ್ಚಹೊಸ ಶಸ್ತ್ರಾಸ್ತ್ರಗಳಾದ ಇಸ್ಕಂದರ್ ಕ್ಷಿಪಣಿಗಳು, ಟಿ-80, ಟಿ-90 ಟ್ಯಾಂಕ್​ಗಳು, ಸುಖೋಯ್-34, 35 ಫೈಟರ್​ಗಳು, ಕಲಿಬರ್ ಕ್ಷಿಪಣಿಗಳು ಇತ್ಯಾದಿಗಳನ್ನ ರಷ್ಯಾ ದೇಶ ಈ ತಾಲೀಮಿನಲ್ಲಿ ಬಳಸುತ್ತಿದೆ. ಈ ಸಮರಾಭ್ಯಾಸವು 1 ವಾರದವರೆಗೆ ನಡೆಯುವ ಸಾಧ್ಯತೆ ಇದೆ.

ರಷ್ಯಾದ ಈ ನಡೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಟೀಕಿಸಿವೆ. ರಷ್ಯಾ ದೇಶವು ಯುದ್ಧೋನ್ಮಾದದಲ್ಲಿದೆ. ಇದು ಮಹಾ ಸಮರಕ್ಕೆ ಪಂಥಾಹ್ವಾನದಂತಿದೆ ಎಂದು ಅಮೆರಿಕದ ಮೈತ್ರಿ ಶಕ್ತಿಗಳು ಅಭಿಪ್ರಾಯಪಟ್ಟಿವೆ.

ಆದರೆ, ಅಮೆರಿಕ ದೇಶವು ತನ್ನ ಮಿತ್ರರಿಂದಲೇ ದೂರವಾಗಿ ಏಕಾಂಗಿಯಾಗುತ್ತಿರುವ ಈ ಹೊತ್ತಿನಲ್ಲಿ ಅದರ ಸಾಂಪ್ರದಾಯಿಕ ವೈರಿಗಳಾದ ರಷ್ಯಾ ಮತ್ತು ಚೀನಾ ದೇಶಗಳು ಒಂದು ದೊಡ್ಡ ಮಿಲಿಟರಿ ಶಕ್ತಿಯ ಪ್ರದರ್ಶನ ನೀಡುತ್ತಿರುವುದು ಗಮನಾರ್ಹವಾದ ವಿಷಯವಾಗಿದೆ.

Comments are closed.