ಅಂತರಾಷ್ಟ್ರೀಯ

ಮಾತುಕತೆಯಿಂದ ಹಿಂದೆ ಸರಿದಿರುವುದು ಭಾರತದ್ದು ‘ಸೊಕ್ಕಿನ’ ನಡೆ: ಇಮ್ರಾನ್ ಖಾನ್

Pinterest LinkedIn Tumblr


ಹೊಸದಿಲ್ಲಿ: ಪಾಕಿಸ್ತಾನ ಜತೆ ನಿಗದಿಯಾಗಿದ್ದ ಮಾತುಕತೆಯಿಂದ ಭಾರತ ಹಿಂದೆ ಸರಿದಿರುವುದು ಬೇಸರ ಉಂಟುಮಾಡಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಶಾಂತಿ ಕಾಪಾಡುವ ಮತ್ತು ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮುಂದಾದ ಪಾಕಿಸ್ತಾನದ ಜತೆಗೆ ಭಾರತ ಮಾತುಕತೆ ನಡೆಸದಿರುವ ಮೂಲಕ ಅಹಂಕಾರ ತೋರ್ಪಡಿಸಿದೆ. ಭಾರತದ ಋಣಾತ್ಮಕ ನಡೆ ಸರಿಯಲ್ಲ ಎಂದು ಇಮ್ರಾನ್ ಖಾನ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಜಮ್ಮು ಕಾಶ್ಮೀರದ ಮೂವರು ಪೊಲೀಸರನ್ನು ಶುಕ್ರವಾರ ಉಗ್ರರು ಅಪಹರಿಸಿ ಹತ್ಯೆ ಮಾಡಿದ್ದ ಬೆನ್ನಲ್ಲೇ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದ್ದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಭಾರತ ಮತ್ತು ಪಾಕ್ ವಿದೇಶಾಂಗ ಸಚಿವರ ನಡುವೆ ನಿಗದಿಯಾಗಿದ್ದ ಮಾತುಕತೆಯನ್ನು ರದ್ದಪಡಿಸಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿತ್ತು. ಜತೆಗೆ ಪಾಕ್ ನಡೆಯನ್ನು ಖಂಡಿಸಿದ್ದ ಭಾರತ, ಇಮ್ರಾನ್ ಖಾನ್ ನೈಜಮುಖ ಅನಾವರಣಗೊಂಡಿದೆ. ದ್ವಿಮುಖ ನೀತಿ ಹೊಂದಿರುವ ಪಾಕ್ ಜತೆ ನಾವು ಮಾತುಕತೆ ನಡೆಸುವುದಿಲ್ಲ ಎಂದಿತ್ತು.

ಮಾತುಕತೆ ರದ್ದಾಗಿರುವುದು ದುರದೃಷ್ಟಕರ, ಭಾರತದಿಂದ ಇಂತಹ ನಡೆ ಸರಿಯಲ್ಲ ಎಂದು ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ.

ಪಾಕಿಸ್ತಾನ ಭಾರತದ ಜತೆಗೆ ಮಾತುಕತೆಗೆ ಸಿದ್ಧವಿದೆ ಎಂದು ಇಮ್ರಾನ್ ಖಾನ್ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಂಡಿದ್ದರಿಂದ ಮಾತುಕತೆ ನಡೆಸಲು ವಿದೇಶಾಂಗ ಸಚಿವಾಲಯ ಸಮ್ಮತಿಸಿತ್ತು.

Comments are closed.