ವಾಷಿಂಗ್ಟನ್: ಹೊಸ ನಿಯಮಗಳ ಅಡಿಯಲ್ಲಿ ಆಹಾರ ಮತ್ತು ನಗದು ನೆರವು ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ ವಲಸಿಗರಿಗೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ ಗ್ರೀನ್ ಕಾರ್ಡನ್ನು ನಿರಾಕರಿಸುವ ಸಾಧ್ಯತೆಯಿದ್ದು ಇದರಿಂದ ಅಮೆರಿಕಾದಲ್ಲಿ ನೆಲೆಸಿರುವ ಸಾವಿರಾರು ಮಂದಿ ಭಾರತೀಯರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಉದ್ದೇಶಿತ ಕಾನೂನಿಗೆ ಮೊನ್ನೆ 21ರಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಸಹಿ ಹಾಕಿದ್ದು ಇದನ್ನು ಹೋಮ್ ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಇದಕ್ಕೆ ರಾಜಕೀಯ ಮುಖಂಡರು ಮತ್ತು ಟೆಕ್ಕಿ ಉದ್ಯಮಿಗಳಿಂದ ನಿಂದನೆ ವ್ಯಕ್ತವಾಗಿದೆ.
ನಿಯಮದ ಪ್ರಕಾರ, ವಿದೇಶಿ ವಲಸಿಗರು ತಮ್ಮ ನೆಲೆಯ ಸ್ಥಿತಿಗತಿ ಅಥವಾ ವೀಸಾ ಅಥವಾ ಪ್ರವೇಶ ಅರ್ಜಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಬಾರದು,ಒಂದು ವೇಳೆ ಪಡೆಯಲು ಅರ್ಹವಾಗಿದ್ದರೆ ಅದನ್ನು ಅಮೆರಿಕಾ ಕಾಂಗ್ರೆಸ್ ನಿರ್ಧರಿಸಬೇಕು ಎಂದು ಹೇಳಲಾಗಿದೆ.
ಹೆಚ್ -4 ವೀಸಾ ಬಳಕೆದಾರರಿಗೆ ಕೆಲಸದ ಅವಕಾಶ ನೀಡುವ ನಿರ್ಧಾರವನ್ನು ರದ್ದುಗೊಳಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಸರ್ಕಾರ ಅಲ್ಲಿನ ಫೆಡರಲ್ ಕೋರ್ಟ್ ಗೆ ಹೇಳಿಕೆ ನೀಡಿದ ಬೆನ್ನಲ್ಲೇ ವಲಸಿಗರ ಸಂಖ್ಯೆಯನ್ನು ತಡೆಯಲು ಅಮೆರಿಕಾ ಸರ್ಕಾರ ತಂದಿರುವ ಈ ಹೊಸ ನಿಯಮ ಬಂದಿದೆ.
ಅಮೆರಿಕಾದ ದೀರ್ಘಾವಧಿಯ ಫೆಡರಲ್ ಕಾನೂನು ಪ್ರಕಾರ ಅಮೆರಿಕಾಕ್ಕೆ ವಲಸೆ ಹೋಗಲು ಇಚ್ಛಿಸುವವರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ತಾವೇ ನೋಡಿಕೊಳ್ಳುವಷ್ಟು ಸಮರ್ಥರಾಗಿರಬೇಕೆ ಹೊರತು ಅಲ್ಲಿನ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಜೀವನ ಮಾಡುವಂತಹ ಸ್ಥಿತಿಯಲ್ಲಿರಬಾರದು ಎಂದು ಹೋಮ್ ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಕಿರ್ಸ್ಟ್ ಜೆನ್ ನೀಲ್ಸೆನ್ ತಿಳಿಸಿದ್ದಾರೆ.
ಇಲಾಖೆ ಈ ಕಾನೂನು ಜಾರಿಯನ್ನು ಗಂಭೀರವಾಗಿ ಪರಿಗಣಿಸಿದ್ದು ಉದ್ದೇಶಿತ ಕಾನೂನಿನ ಬಗ್ಗೆ ಸಾರ್ವಜನಿಕ ಹೇಳಿಕೆ ಮತ್ತು ಪ್ರತಿಕ್ರಿಯೆಯನ್ನು ಕೇಳಿದೆ. ಉದ್ದೇಶಿತ ಕಾನೂನು ಅಮೆರಿಕಾ ಕಾಂಗ್ರೆಸ್ ಅನುಮೋದಿಸಿದ ನಂತರ ಜಾರಿಗೆ ಬರಲಿದೆ. ವಲಸಿಗರು ಆರ್ಥಿಕವಾಗಿ ಹೆಚ್ಚು ಸ್ವಾವಲಂಬಿಗಳಾಗಿರಬೇಕು ಮತ್ತು ಅಮೆರಿಕಾದ ಸ್ಥಳೀಯ ತೆರಿಗೆ ಪಾವತಿದಾರರಿಗೆ ಹೊರೆಯಾಗಬಾರದು ಎಂಬುದು ಉದ್ದೇಶವಾಗಿದೆ ಎಂದು ಕಾರ್ಯದರ್ಶಿ ತಿಳಿಸಿದ್ದಾರೆ.
ಉದ್ದೇಶಿತ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ ಫೇಸ್ ಬುಕ್, ಮೈಕ್ರೊಸಾಫ್ಟ್, ಡ್ರಾಪ್ ಬಾಕ್ಸ್, ಯಾಹೂ, ಗೂಗಲ್ ಮೊದಲಾದ ಕಂಪೆನಿಗಳನ್ನು ಪ್ರತಿನಿಧಿಸುವ ಎಫ್ ಡಬ್ಲ್ಯುಡಿ.ಯುಎಸ್, ಹಿಂಬಾಗಿಲಿಂದ ತರಲು ಉದ್ದೇಶಿಸಿರುವ ಈ ಕಾನೂನಿನಿಂದ ಇಡೀ ದೇಶಕ್ಕೆ ತೊಂದರೆಯಾಗಲಿದೆ ಎಂದು ಟೀಕಿಸಿದೆ.
Comments are closed.