ಅಂತರಾಷ್ಟ್ರೀಯ

ಅಮೆರಿಕದಲ್ಲಿ ಹೆಚ್-4 ವೀಸಾ ಹೊಂದಿರುವವರು ಲಕ್ಷದಷ್ಟು ಭಾರತೀಯ ಮಹಿಳೆಯರಿಗೆ ಸಂಕಷ್ಟ

Pinterest LinkedIn Tumblr


ವಾಷಿಂಗ್ಟನ್: ಅಮೆರಿಕದ ಹೆಚ್-4 ವೀಸಾ ಹೊಂದಿರುವ ಭಾರತೀಯರಿಗೆ ನೀಡಲಾಗುವ ವರ್ಕ್ ಪರ್ಮಿಟ್ ಅನ್ನು ರದ್ದುಗೊಳಿಸಲು ಟ್ರಂಪ್ ಸರಕಾರ ಮುಂದಾಗಿದೆ. ಇದರೊಂದಿಗೆ 70 ಸಾವಿರದಿಂದ 1 ಲಕ್ಷದಷ್ಟು ಭಾರತೀಯರು ಕೆಲಸ ಕಳೆದುಕೊಳ್ಳಲಿದ್ದಾರೆ ಅಥವಾ ನಿರುದ್ಯೋಗಿಗಳಾಗಿ ಉಳಿಯಲಿದ್ದಾರೆನ್ನಲಾಗಿದೆ. ಹೆಚ್-1ಬಿ ವೀಸಾ ಪಡೆದು ಅಮೆರಿಕಕ್ಕೆ ಕೆಲಸಕ್ಕೆ ಹೋಗುವ ಭಾರತೀಯರ ಸಂಗಾತಿಗೆ ಹೆಚ್-4 ವೀಸಾ ನೀಡಲಾಗುತ್ತದೆ. ಹಿಂದಿನ ಒಬಾಮ ಸರಕಾರವು ಹೆಚ್-4 ವೀಸಾದಾರರಿಗೂ ಅಮೆರಿಕದಲ್ಲಿ ಕೆಲಸ ಮಾಡುವ ಅವಕಾಶ ಕೊಡುವ ವರ್ಕ್ ಪರ್ಮಿಟ್ ನೀಡಿತ್ತು. ಇದೀಗ ಟ್ರಂಪ್ ಸರಕಾರ ಈ ಪರ್ಮಿಟನ್ನು ರದ್ದುಗೊಳಿಸುವುದು ಬಹುತೇಕ ನಿಶ್ಚಿತವಾಗಿದೆ. ಅಮೆರಿಕದ ಸ್ಥಳೀಯ ಜನರಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವ ಕಾರಣವೊಡ್ಡಿ ಅಲ್ಲಿನ ಸರಕಾರ ಇಂಥ ಕಠಿಣ ನೀತಿ ಅನುಸರಿಸುತ್ತಿದೆ.

ಹೆಚ್-1ಬಿ ವೀಸಾ ಹೊಂದಿರುವ ಭಾರತೀಯರಲ್ಲಿ ಬಹುತೇಕ ಮಂದಿ ಪುರುಷರೇ ಆಗಿದ್ಧಾರೆ. ಹೀಗಾಗಿ, ಹೆಚ್-4 ವೀಸಾ ಹೊಂದಿರುವವರು ಹೆಚ್ಚಿನ ಪಾಲು ಮಹಿಳೆಯರೇ. ಒಂದು ಅಂದಾಜಿನ ಪ್ರಕಾರ ಅಮೆರಿಕ ಸರಕಾರವೇನಾದರೂ ಹೆಚ್-4 ವೀಸಾದಾರರಿಗೆ ಉದ್ಯೋಗದ ಪರವಾನಗಿ ಹಿಂಪಡೆದರೆ 70 ಸಾವಿರಕ್ಕೂ ಹೆಚ್ಚು ಭಾರತೀಯ ನಾರಿಯರು ಮನೆಯಲ್ಲೇ ಕೆಲಸ ಮಾಡಿಕೊಂಡಿರಬೇಕಾಗುತ್ತದೆ.

ಇದೇ ವಿಚಾರವನ್ನು ಮುಂದಿಟ್ಟುಕೊಂಡು ಭಾರತೀಯ ಮೂಲದ ಡೆಮಾಕ್ರಟ್ ಪಕ್ಷದ ಜನಪ್ರತಿನಿಧಿ ಕಮಲಾ ಹ್ಯಾರಿಸ್ ಮತ್ತು ಕರ್ಸ್ಟನ್ ಗಿಲ್ಲಿಬ್ರ್ಯಾಂಡ್ ಅವರು ಹೆಚ್-4 ವೀಸಾದಾರರ ವರ್ಕ್ ಪರ್ಮಿಟ್ ರದ್ದು ಮಾಡಬಾರದೆಂದು ಮನವಿ ಮಾಡಿದ್ದರು. ಅಮೆರಿಕ ಸರಕಾರದ ಈ ನೀತಿಯಿಂದ 1 ಲಕ್ಷದಷ್ಟು ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಉದ್ಯೋಗವಿಲ್ಲದೆ ಮಹಿಳೆಯರು ಏಕಾಂಗಿಯಾಗಿ, ಖಿನ್ನತೆ, ಆತಂಕಕ್ಕೊಳಗಾಗಿ ಬಳಲುತ್ತಾರೆ. ಅಲ್ಲದೇ, ಸ್ವಂತ ದುಡಿಮೆ ಸಾಧ್ಯವಾಗದೆ ಆಕೆ ತನ್ನ ಗಂಡನ ಆದಾಯದ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಇದು ಆಕೆಯ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರಬಹುದು ಎಂದು ಇವರಿಬ್ಬರು ಬಲವಾಗಿ ವಾದ ಮುಂದಿಟ್ಟಿದ್ದರು. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯಾವ ಮಾತಿಗೂ ಸೊಪ್ಪು ಹಾಕದೇ ತನ್ನ ನಿರ್ಧಾರದಲ್ಲಿ ಅಚಲವಾಗಿದ್ದಾರೆಂಬ ಸುದ್ದಿ ಇದೆ.

ಅಮೆರಿಕದಲ್ಲಿ ಕೆಲಸ ಮಾಡಬೇಕೆಂದರೆ ಅಲ್ಲಿಯ ಉದ್ಯೋಗ ಮಾರುಕಟ್ಟೆಯಲ್ಲಿ ನೊಂದಣಿ ಮಾಡಿಸಬೇಕಾಗುತ್ತದೆ. ವರ್ಕ್ ಪರ್ಮಿಟ್ ಇಲ್ಲದೇ ಲೇಬರ್ ಮಾರ್ಕೆಟ್​ನಲ್ಲಿ ನೊಂದಣಿ ಮಾಡಿಸಲು ಆಗುವುದಿಲ್ಲ. ಹೆಚ್-4 ವೀಸಾದಾರರಿಗೆ ವರ್ಕ್ ಪರ್ಮಿಟ್ ಕೊಡದಿದ್ದರೆ ಅಮೆರಿಕದಲ್ಲಿ ಅವರು ಎಲ್ಲಿಯೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

Comments are closed.