ಇಸ್ಲಾಮಾಬಾದ್: ಭಾರತೀಯ ವಾಯುಪಡೆಯ ವೈಮಾನಿಕ ದಾಳಿಯಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್, ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧರಾಗಿರುವಂತೆ ಆ ದೇಶದ ಸೈನಿಕರು ಹಾಗೂ ಜನರಿಗೆ ಸೂಚನೆ ನೀಡಿದ್ದಾರೆ.
ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದಲ್ಲಿ ಇಂದು ನಡೆದ ರಾಷ್ಟ್ರೀಯ ಭದ್ರತಾ ಸಮಿತಿಯ ವಿಶೇಷ ಸಭೆ ಬಗ್ಗೆ ಇಮ್ರಾನ್ ಖಾನ್ ಅವರ ಅಧಿಕೃತ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಪಾಕಿಸ್ತಾನದ ವಿದೇಶಾಂಗ, ರಕ್ಷಣಾ ಹಾಗೂ ಮಿಲಿಟರಿ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಾಲಕೋಟ್ ಬಳಿಯ ಉಗ್ರರ ಅಡಗು ತಾಣಗಳ ಮೇಲಿನ ಭಾರತೀಯ ವಾಯುಪಡೆಯಿಂದ ದಾಳಿಯಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂಬುದನ್ನು ಸಭೆಯಲ್ಲಿ ನಿರಾಕರಿಸಲಾಗಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತನ್ನನ್ನು ರಕ್ಷಿಸಿಕೊಳ್ಳಲು ಈ ರೀತಿಯ ಸುಳ್ಳು ಹೇಳಿಕೆ ನೀಡುತ್ತಿದೆ ಎಂದು ಹೇಳಲಾಗಿದೆ.
ಭಾರತ ಆಕ್ರಮಣಕಾರಿ ನೀತಿ ಅನುಸರಿಸಿದರೆ ಪಾಕಿಸ್ತಾನ ಪ್ರತಿದಾಳಿ ನಡೆಸಲು ಸಿದ್ಧರಾಗಿರುವಂತೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ನಾಳೆ ವಿಶೇಷ ಸಭೆ ನಡೆಸಲು ಪ್ರಧಾನಿ ಇಮ್ರಾನ್ ಖಾನ್ ನೋಟಿಸ್ ನೀಡಿದ್ದಾರೆ.
ಏನೇ ಪರಿಸ್ಥಿತಿ ಬಂದರೂ ಎದುರಿಸಲು ಸಿದ್ಧರಾಗಿರುವಂತೆ ಸೈನಿಕರು ಹಾಗೂ ಪಾಕಿಸ್ತಾನದ ಜನರಿಗೆ ಪ್ರಧಾನಿ ಇಮ್ರಾನ್ ಖಾನ್ ಸೂಚನೆ ನೀಡಿದ್ದಾರೆ. ಅಲ್ಲದೇ, ಗಡಿಯಲ್ಲಿನ ಭಾರತದ ನೀತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೋರಿಸಬೇಕಾಗಿದೆ ಎಂದಿದ್ದಾರೆ.
ಸೂಕ್ತ ಸಂದರ್ಭದಲ್ಲಿ ಭಾರತೀಯ ಸೈನಿಕರಿಗೆ ಸೂಕ್ತ ಪ್ರತ್ಯುತ್ತರ ನೀಡಿ ಯಾವುದೇ ಹಾನಿಯಾಗದಂತೆ ನೋಡಿಕೊಂಡಿರುವ ಪಾಕಿಸ್ತಾನ ಸೈನಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ.
Comments are closed.