ಲಂಡನ್: ಒಂದು ಕಾಲದಲ್ಲಿ ರಾಜನಂತೆ ಜೀವನ ನಡೆಸುತ್ತಿದ್ದ ಉದ್ಯಮಿ ವಿಜಯ್ ಮಲ್ಯ ಇದೀಗ ಸಾಲ ತೀರಿಸುವುದಕ್ಕಾಗಿ ತಮ್ಮ ಪತ್ನಿ, ಮಕ್ಕಳು ಹಾಗೂ ವ್ಯಾವಹಾರಿಕ ಪಾಲುದಾರರ ದುಡ್ಡಿನಲ್ಲಷ್ಟೇ ಬದುಕು ಸಾಗಿಸುತ್ತಿದ್ದಾರೆ.
ಮಲ್ಯ ಅವರ ಜತೆಗಾರ್ತಿ ಪಿಂಕಿ ಲಾಲ್‌ವಾನಿ ವರ್ಷಕ್ಕೆ 1.35 ಕೋಟಿ ರೂ.ಗಳಷ್ಟು ಸಂಪಾದನೆ ಮಾಡುತ್ತಿದ್ದಾರೆ. ಬಿಲಿಯನೇರ್ ಆಗಿದ್ದ ಮಲ್ಯ ಬಳಿ ಈಗ 328 ಮಿಲಿಯ ಪೌಂಡ್ (ಸುಮಾರು 2,956 ಕೋಟಿ ರೂ.) ಮಾತ್ರ ಉಳಿದಿದೆ. ಇವೆಲ್ಲವನ್ನೂ ಅವರು ಕರ್ನಾಟಕ ಹೈಕೋರ್ಟ್ ಸಾಲ ತೀರಿಸುವ ಕೊಡುಗೆಯಾಗಿ ಪ್ರಸ್ತಾಪ ಮುಂದಿಟ್ಟಿದ್ದಾರೆ. ಹೀಗಾಗಿ ಜೀವನಕ್ಕಾಗಿ ಅವರು ಮಕ್ಕಳು, ಜತೆಗಾರ್ತಿಯನ್ನೇ ಅವಲಂಬಿಸಿದ್ದಾರೆ ಎಂದು ಯುಕೆ ನ್ಯಾಯಾಲಯಕ್ಕೆ ಬುಧವಾರ ತಿಳಿಸಲಾಯಿತು.
13 ಭಾರತೀಯ ಬ್ಯಾಂಕುಗಳು 2018ರ ಸೆ.11ರಂದು ಸಲ್ಲಿಸಿದ್ದ ದಿವಾಳಿ ಅರ್ಜಿಗೆ ಪ್ರತಿಕ್ರಿಯೆಗಾಗಿ ಮಲ್ಯ ಅವರು ಈ ಮಾಹಿತಿ ನೀಡಿದ್ದು, ಸದ್ಯ ಲಾಲ್‌ವಾನಿ ಮತ್ತು ಮಕ್ಕಳು ತನ್ನ ಜೀವನಕ್ಕೆ ಆಧಾರವಾಗಿದ್ದಾರೆ ಎಂದಿದ್ದಾರೆ. ಅರ್ಜಿಯ ವಿಚಾರಣೆಯು 2019ರ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ.
ಅವರ ಆಪ್ತ ಸಹಾಯಕಿ ಮಹಲ್, ವ್ಯಾವಹಾರಿಕ ಪಾಲುದಾರಳಾದ ಬೇಡಿ ಎಂಬವರು ಅನುಕ್ರಮವಾಗಿ 84 ಸಾವಿರ ಪೌಂಡ್ (ಸುಮಾರು 75.5 ಲಕ್ಷ ರೂ.) ಹಾಗೂ 1.28 ಲಕ್ಷ ಪೌಂಡ್ (ಸುಮಾರು 1.15 ಕೋಟಿ ರೂ.) ಅನ್ನು ತಮಗೆ ಸಾಲವಾಗಿ ಕೊಟ್ಟಿದ್ದಾರೆ. ಇದರಲ್ಲೇ ಜೀವನ ಸಾಗಿಸುತ್ತಿರುವುದಾಗಿ 13 ಬ್ಯಾಂಕುಗಳ ಪರವಾಗಿ ವಾದಿಸುತ್ತಿರುವ ನಿಗೆಲ್ ಟೋಜಿ ಅವರಿಗೆ ನೀಡಲಾದ ದಾಖಲೆಯಲ್ಲಿ ತಿಳಿಸಲಾಗಿದೆ. 13 ಬ್ಯಾಂಕುಗಳಿಗೆ ಮಲ್ಯ ಅವರು 11 ಸಾವಿರ ಕೋಟಿ ರೂ. ಸಾಲ ತೀರಿಸಬೇಕಿದೆ.
ಮಲ್ಯ ಅವರು, ನ್ಯಾಯಾಲಯವು ಅನುಮತಿ ನೀಡಿರುವ ತಮ್ಮ ವಾರದ ಭತ್ಯೆಯನ್ನು 16.21 ಲಕ್ಷ ರೂಪಾಯಿ ಬದಲಾಗಿ ತಿಂಗಳಿಗೆ 26.57 ಲಕ್ಷ ರೂ.ಗೆ ಇಳಿಸಲು ನಿರ್ಧರಿಸಿದ್ದಾರೆ ಎಂದು ಮಲ್ಯರ ವಕೀಲರಾದ ಜಾನ್ ಬ್ರಿಸ್ಬಿ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. 1.1 ಶತಕೋಟಿ ಪೌಂಡ್ (ಸುಮಾರು 7600 ಕೋಟಿ ರೂ.) ಪಾವತಿಸಬೇಕೆಂದು ನೀಡಿದ ತೀರ್ಪನ್ನು ಪಾಲಿಸುವ ಸ್ಥಿತಿಯಲ್ಲಿ ಅವರಿಲ್ಲ. ಅವರೀಗ ದಿವಾಳಿಯಾಗಿದ್ದಾರೆ ಎಂದು ಬ್ರಿಸ್ಬಿ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
63 ವರ್ಷದ ಮಲ್ಯ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ 1.6 ಶತಕೋಟಿ ಪೌಂಡ್‌ನಷ್ಟು ಸಾಲ ಮರುಪಾವತಿಯ ಕೊಡುಗೆ ಮುಂದಿರಿಸಿದ್ದಾರೆ ಎಂದೂ ತಿಳಿಸಲಾಗಿದೆ
ಮಲ್ಯ ಅವರು ಈಗಲೂ ಐಷಾರಾಮದ ಬದುಕು ನಡೆಸುತ್ತಿದ್ದಾರೆ. ತಮ್ಮ ವಕೀಲರಿಗಾಗಿ ಅವರು ಎಲ್ಲಿಂದಲೋ ಹಣ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ಸಂಕಷ್ಟಗಳಿಲ್ಲ. ವಾರಕ್ಕೆ 18 ಸಾವಿರ ಪೌಂಡ್ ಖರ್ಚು ಮಾಡುತ್ತಿದ್ದಾರೆ, ಜತೆಗೆ ಕಾನೂನಿನ ವೆಚ್ಚಗಳನ್ನೂ ಭರಿಸುತ್ತಿದ್ದಾರೆ ಎಂದು ಟೋಜಿ ಅವರು ವಾದಿಸಿದ್ದರು.
Comments are closed.