ಲಿಥುಯೇನಿಯಾ ಮೂಲದ ವ್ಯಕ್ತಿಯೊಬ್ಬ ಗೂಗಲ್, ಫೇಸ್‌ಬುಕ್‌ಗೆ 840ಕೋಟಿ ರೂ. ಅನ್ನು ವಂಚಿಸಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ. ಕಂಪನಿಗಳಿಂದ ನಕಲಿ ಬಿಲ್ ಸೃಷ್ಟಿಸಿ ಟೆಕ್‌ನ ಪ್ರಮುಖ ಕಂಪನಿಗಳಾದ ಫೇಸ್‌ಬುಕ್ ಹಾಗೂ ಗೂಗಲ್‌ಗೆ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಇವಾಲ್ಡಾಸ್ ರಿಮಾಸೌಸ್ಕಾಸ್ 2013ರಿಂದ 2015ರ ನಡುವೆ ಗೂಗಲ್‌ನಿಂದ 23 ಮಿಲಿಯನ್ ಡಾಲರ್ ಹಾಗೂ ಫೇಸ್‌ಬುಕ್‌ನಿಂದ 99 ಮಿಲಿಯನ್ ಡಾಲರ್ ಹಣವನ್ನು ವಂಚನೆ ಮೂಲಕ ತೆಗೆದುಕೊಂಡಿದ್ದರು. ಇನ್ನು, ಫೇಸ್‌ಬುಕ್ ಹಾಗೂ ಗೂಗಲ್ ಸಂಸ್ಥೆಗಳು ಸಹ ವ್ಯವಹಾರದ ಬಗ್ಗೆ ಯಾವುದೇ ಕ್ರಾಸ್ ಚೆಕ್ ಮಾಡದೆ ಹಣ ನೀಡಿದ್ದರು ಎಂದು ತಿಳಿದುಬಂದಿದೆ.
ಲ್ಯಾಟ್ವಿಯಾ, ಸೈಪ್ರಸ್, ಲಿಥುಯೇನಿಯಾ, ಹಂಗೇರಿ, ಸ್ಲೊವೇಕಿಯಾ ದೇಶಗಳಲ್ಲಿ ತೆರೆದಿದ್ದ ಬ್ಯಾಂಕ್ ಅಕೌಂಟ್‌ಗಳಿಗೆ ಪಾವತಿ ಮಾಡಲಾಗಿತ್ತು. ಇನ್ನು, ಇವಾಲ್ಡಾಸ್ ಎಂಬಾತ ತಮ್ಮ ಕಂಪನಿಗಳ ನ್ಯಾಯಸಮ್ಮತತೆಯನ್ನು ಸಾಬೀತುಪಡಿಸಲು ನಕಲಿ ದಾಖಲೆಗಳನ್ನು ಒದಗಿಸಿದ್ದರು. ಅಲ್ಲದೆ, ಆತ ಇತರೆ ವ್ಯಕ್ತಿಗಳ ಜತೆ ಸೇರಿಕೊಂಡು ಕ್ವಾಂಟಾ ಕಂಪ್ಯೂಟರ್ ಇಂಕ್ ಎಂಬ ನಕಲಿ ಕಂಪನಿಯನ್ನು ಆರಂಭಿಸಿದ್ದರು. ಬಳಿಕ ಸೇವೆ ಪಾವತಿ ವಿಚಾರದಲ್ಲಿ ಗೂಗಲ್ ಹಾಗೂ ಫೇಸ್‌ಬುಕ್ ತಮಗೆ 122 ಮಿಲಿಯನ್ ಡಾಲರ್ ಹಣ ಬಾಕಿ ತೀರಿಸಬೇಕಿದೆ ಎಂದು ಹೇಳಿದ್ದರು.
ಆದರೆ, ವಂಚನೆ ನಡೆದು 4 ವರ್ಷಗಳ ಬಳಿಕ ಇವಾಲ್ಡಾಸ್ ಇತ್ತೀಚೆಗೆ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ ಅವರಿಗೆ, 30 ವರ್ಷಗಳ ಕಾಲ ಶಿಕ್ಷೆಯಾಗಲಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಇನ್ನು, ಈ ಸಂಬಂಧ ಮಾಹಿತಿ ನೀಡಿರುವ ಫೇಸ್‌ಬುಕ್ ಘಟನೆ ಮೊದಲ ಬಾರಿಗೆ ಬೆಳಕಿಗೆ ಬಂದು ಕೆಲ ತಿಂಗಳ ಬಳಿಕ ನಾವು ಹಣ ವಾಪಸ್ ಪಡೆದುಕೊಂಡಿದ್ದೇವೆ ಎಂದು ತಿಳಿಸಿದೆ. ಇನ್ನೊಂದೆಡೆ, ಗೂಗಲ್ ಸಹ ವಂಚನೆ ಬಗ್ಗೆ ಅರಿವಿಗೆ ಬಂದಿದೆ ಎಂದು ತಿಳಿಸಿದ್ದು, ಆದರೆ, ಹಣ ವಾಪಸ್ ಪಡೆದುಕೊಂಡಿರುವ ಬಗ್ಗೆ ಇನ್ನೂ ಗೂಗಲ್ ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದೆ.
Comments are closed.