ಮೇಲ್ಬೊರ್ನ್ (ಆಸ್ಟ್ರೇಲಿಯಾ): ಇಬ್ಬರು ವ್ಯಕ್ತಿಗಳ ನಡುವಿನ ಜಗಳ ನಡೆದು ನಂತರ ಮೇಲ್ಬೊರ್ನ್ ನೈಟ್ಕ್ಲಬ್ ಹೊರಗೆ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಹಲವು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಆಸ್ಟ್ರೇಲಿಯಾದ ಎರಡನೇ ಅತಿದೊಡ್ಡ ನಗರದಲ್ಲಿ ಈ ಘಟನೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇವರಲ್ಲಿ ಮೂರು ಜನರ ವಯಸ್ಸು 29 ರಿಂದ 50 ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವಕ್ತಾರ ಮಾತನಾಡಿ, ಈ ಗುಂಡಿನ ದಾಳಿ ಯಾವುದೇ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮೋಟಾರ್ಸೈಕಲ್ ಗ್ಯಾಂಗ್ ಸುತ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮೇಲ್ಬೊರ್ನ್ನ ಏಜ್ ಸುದ್ದಿಪತ್ರಿಕೆ ವರದಿ ಮಾಡಿದೆ.
ಕಳೆದ ಮಾರ್ಚ್ನಲ್ಲಿ ಇದೇ ಮೇಲ್ಬೊರ್ನ್ನಲ್ಲಿ ನಡೆದ ನಾಲ್ಕು ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದರು. ಇದರಲ್ಲಿ ಎರಡು ದಾಳಿಗಳು ಗುಂಪು ಘರ್ಷಣೆಯಿಂದ ನಡೆದಿರುವಂತಹದ್ದು ಎಂದು ತನಿಖೆಯಿಂದ ತಿಳಿದುಬಂದಿತ್ತು.
ಗುಂಡಿನ ದಾಳಿ ಆಸ್ಟ್ರೇಲಿಯಾದಲ್ಲಿ ನಡೆಯುವುದು ಬಹಳ ವಿರಳ. ಪೋರ್ಟ್ ಆರ್ಥರ್ನಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ 35 ಜನರ ಮಾರಣಹೋಮ ನಡೆಸಿದ ಬಳಿಕ ಆಸ್ಟ್ರೇಲಿಯಾದಲ್ಲಿ ಬಂದೂಕು ವಿಚಾರದಲ್ಲಿ 1996ರಂದೇ ಕಠಿಣ ಕಾನೂನು ಜಾರಿಗೆ ತರಲಾಗಿದೆ.
ಆತ್ಮಾಹುತಿ ದಾಳಿಕೋರನೊಬ್ಬ ಕಳೆದ ವರ್ಷ ಕುಟುಂಬವೊಂದರ ಮೇಲೆ ದಾಳಿ ನಡೆಸಿ ಏಳು ಜನರನ್ನು ಕೊಂದಿದ್ದು, ಪೋರ್ಟ್ ಅರ್ಥರ್ ದಾಳಿ ಬಳಿಕ ದೇಶದ ಎರಡನೇ ಅತಿದೊಡ್ಡ ಬಂದೂಕು ದುಷ್ಕೃತ್ಯವಾಗಿದೆ.
Comments are closed.