ವಾಶಿಂಗ್ಟನ್: ಜಪಾನಿನಲ್ಲಿ ನಡೆಯಲಿರುವ ಜಿ-20 ಸಮಾವೇಶದ ಸಮಯದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಕಿಡಿ ಕಾರಿದ್ದಾರೆ. ಶೃಂಗಸಭೆಗೆ ಆಗಮಿಸುವ ಮುನ್ನ ಅವರು ಅಮೆರಿಕಾದ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಅದರಲ್ಲಿ ಮಾತನಾಡಿರುವ ಟ್ರಂಪ್ “ಭಾರತ ದೇಶ ಅಮೆರಿಕಾದ ಸರಕುಗಳ ಮೇಲೆ ಹೇರಿರುವ ಸುಂಕದ ಭಾರವನ್ನು ಇಳಿಸಬೇಕು, ಈ ಬಗ್ಗೆ ನರೇಂದ್ರ ಮೋದಿಯವರನ್ನು ಭೇಟಿಯಾದಾಗ ಶುಕ್ರವಾರ ಮಾತನಾಡಲಿದ್ದೇನೆ,” ಎಂದು ಹೇಳಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲೂ ಬರೆದುಕೊಂಡಿರುವ ಟ್ರಂಪ್, “ಶೃಂಗಸಭೆ ವೇಳೆ ಮೋದಿಯವರ ಜತೆ ಮಾತನಾಡುತ್ತೇನೆ. ಈ ಹಿಂದಿನಿಂದಲೂ ಭಾರತ ಅಮೆರಿಕಾದ ಸರಕುಗಳ ಮೇಲೆ ಭಾರೀ ಸುಂಕವನ್ನು ವಿಧಿಸುತ್ತಿದೆ. ಇತ್ತೀಚೆಗಂತೂ ಸುಂಕವನ್ನು ಇಮ್ಮಡಿಯಾಗಿಸಿದೆ. ಸುಂಕವನ್ನು ಶತಾಯಗತಾಯ ಭಾರತ ಕಡಿಮೆ ಗೊಳಿಸಲೇ ಬೇಕು,” ಎಂದಿದ್ಧಾರೆ.
ಈ ಹಿಂದೆಯೂ ಭಾರತವನ್ನು ಖಂಡಿಸಿದ್ದ ಡೊನಾಲ್ಡ್ ಟ್ರಂಪ್ “ಸುಂಕಗಳ ರಾಜ,” ಎಂದು ಬಣ್ಣಿಸಿದ್ದರು. ಅಮೆರಿಕಾದ ಮೋಟರ್ ಬೈಕ್ಗಳ ಮೇಲಿನ ಆಮದು ಸುಂಕ ಶೇಕಡ 50ರಿಂದ ಶೇ. 100ಕ್ಕೆ ಇತ್ತೀಚೆಗೆ ಏರಿಸಲಾಗಿತ್ತು. ಇದನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಟ್ರಂಪ್, “ಅಮೆರಿಕಾ ಮೂರ್ಖರ ದೇಶವಲ್ಲ. ಎಲ್ಲಿಯವರೆಗೂ ನೀವು ನಮ್ಮನ್ನು ಮೂರ್ಖರಾಗಿಸಲು ಪ್ರಯತ್ನಿಸುತ್ತೀರಿ. ಭಾರತ ನಮ್ಮ ಉತ್ತಮ ಮಿತ್ರ ರಾಷ್ಟ್ರ. ಪ್ರಧಾನಿ ಮೋದಿಯವರು ಈ ಸುಂಕ ಹೆಚ್ಚಳವನ್ನು ಗಮನಿಸಬೇಕು. ನೀವು ವಿಧಿಸುತ್ತಿರುವ ಸುಂಕವನ್ನು ಇಳಿಸಲೇಬೇಕು,” ಎಂದು ವಾಹಿನಿಯ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕಾ ಅಲ್ಯುಮಿನಿಯಂ ಸೇರಿದಂತೆ ಇತರೆ ಕೆಲ ಸರಕುಗಳ ಸುಂಕವನ್ನು ಇಳಿಸುವಂತೆ ಭಾರತ ಕೂಡ ಮನವಿ ಮಾಡಿತ್ತು. ಆದರೆ ಅಮೆರಿಕಾ ಭಾರತದ ಮನವಿಗೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಕೂಡ ಅಮೆರಿಕಾದ ಮೇಲೆ ಸುಂಕ ಏರಿಸುವ ಮೂಲಕ ಛಾಟಿ ಬೀಸಿತ್ತು. ಇದೀಗ ಎರಡೂ ದೇಶದ ನಾಯಕರು ಜಪಾನಿನ ಜಿ-20 ಶೃಂಗಸಭೆಯಲ್ಲಿ ಭೇಟಿಯಾಗಲಿದ್ದು, ಸುಂಕ ಇಳಿಕೆಯ ಬಗ್ಗೆ ಚರ್ಚಿಸಲಿದ್ದಾರೆ.
Comments are closed.