ನ್ಯೂಯಾರ್ಕ್: ಅಪ್ಪಾ ಅಂದ್ರೆ ಆಕಾಶ, ಅದ್ರಲ್ಲೂ ಹೆಣ್ಣು ಮಕ್ಕಳಿಗೆ ತಂದೆ ಅಂದ್ರೆ ಅವರ ಬಾಳಲ್ಲಿನ ಮೊದಲ ಸೂಪರ್ ಹೀರೋ, ಮೊದಲ ಮೇಷ್ಟ್ರು. ಅಂತಹ ಅಪ್ಪ ದಿಢೀರನೇ ಅಗಲಿ ಹೋದಾಗ ಆಗುವ ವೇದನೆ ಯಾರ ಬದುಕಿಗೂ ಬೇಡ. ಹೀಗೆ ಬಾಳ ಹಾದಿಯಲ್ಲಿ ಮಗಳನ್ನು ತೊರೆದು ಹೋದ ಅಪ್ಪನನ್ನು ಸತತ ನಾಲ್ಕು ವರ್ಷ ಮಗಳು ನೆನೆದ ಭಾವುಕತೆಯೇ ತುಂಬಿ ತುಳುಕಿರುವ ಕಥೆಯಿದು.
ಅಮೆರಿಕಾದ ಅರ್ಕನ್ಸಾಸ್ನ 23 ವರ್ಷದ ಚಾಸ್ತಿತ್ಯ ಪೀಟರ್ಸನ್ ಅನ್ನೋ ಯುವತಿ ನಾಲ್ಕು ವರ್ಷದ ಹಿಂದೆ ಅಂದ್ರೆ 2015ರಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.
ಅಂದಿನಿಂದಲೂ ಇಂದಿನವರೆಗೆ ಸತತವಾಗಿ ತನ್ನ ತಂದೆಯ ಹಳೆಯ ಮೊಬೈಲ್ ನಂಬರ್ಗೆ ಮೆಸೇಜ್ ಮಾಡುತ್ತಲೇ ಇದ್ದಳು. ತನ್ನ ದೈನಂದಿನ ಬದುಕಿನ ಬಗ್ಗೆ, ತಾನು ಪದವಿ ಗಳಿಸಿದ ಬಗ್ಗೆ, ಹಾಗೆಯೇ ಕ್ಯಾನ್ಸರ್ ಗೆದ್ದು ಬದುಕು ನೂಕುತ್ತಿರುವ ಬಗ್ಗೆ ಮೆಸೇಜ್ನಲ್ಲಿ ಹೇಳುತ್ತಾ ಅತ್ಯಂತ ಭಾವುಕ ಪತ್ರವೆನ್ನುವಂತೆ ತನ್ನ ತಂದೆಯೊಂದಿಗೆ ಏಕಮುಖಿ ಸಂವಹನ ನಡೆಸುತ್ತಿದ್ದಳು.
ಆಕೆಯ ತಂದೆ ತೀರಿ ಹೋಗಿ ನಾಲ್ಕು ವರ್ಷ ಸಂದಿದ್ದವು. ಈ ಬಗ್ಗೆ ತೀವ್ರ ಭಾವುಕಳಾಗಿ ಒಂದು ಸಂದೇಶವನ್ನು ಕಳುಹಿಸಿದ್ದಳು. ‘ಹಲೋ ಡ್ಯಾಡ್, ಇದು ನಾನು, ನಾಳೆ ಮತ್ತೊಂದು ಭೀಕರ ದಿನದ ನೆನಪನ್ನು ನೆನಪಿಸಿಕೊಳ್ಳುವ ದಿನ, ನೀನು ನಮ್ಮನ್ನು ಅಗಲಿ ನಾಳೆಗೆ ನಾಲ್ಕು ವರ್ಷವಾಯ್ತು, ಈ ನಾಲ್ಕು ವರ್ಷ ಅನ್ನೋ ಪುಟ್ಟ ಸಮಯದಲ್ಲಿ ಬದುಕಿನಲ್ಲಿ ದೊಡ್ಡ ದೊಡ್ಡ ಘಟನೆಗಳು ನಡೆದಿವೆ. ಈಗಾಗಲೇ ನಾನು ಹಲವು ಬಾರಿ ಹೇಳಿದಂತೆ ಗ್ರಾಜುಯೇಷನ್ ಮುಗಿಸಿದ್ದೇನೆ, ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದು ಬಂದಿದ್ದೇನೆ. ಪ್ರೀತಿಯಲ್ಲಿ ಬಿದ್ದು ಹೃದಯವನ್ನು ಘಾಸಿ ಮಾಡಿಕೊಂಡಿದ್ದೇನೆ. ಆದ್ರೆ ಎಲ್ಲದಕ್ಕೂ ಎದೆಗೊಟ್ಟು ನಿಂತು ಗಟ್ಟಿ ಮಹಿಳೆಯಾಗಿ ಪರಿವರ್ತಿತಗೊಂಡಿದ್ದೇನೆ. ಕ್ಷಮಿಸು ನಿನಗೆ ನನ್ನ ಅತ್ಯವಶ್ಯಕತೆಯಿದ್ದಾಗ ನಾನು ನಿನ್ನ ಜೊತೆ ಇರಲಿಲ್ಲ. ಒಂದು ದಿನ ನಾವು ಜೊತೆಗೆ ಇರಲಿದ್ದೇವೆ ನನ್ನ ಸರದಿ ಬರೋವರೆಗೂ ಈ ಬದುಕಿನ ಆಟವನ್ನು ನೋಡಬೇಕಿದೆ ’
ಒಂದು ದೀರ್ಘವಾದ ಪತ್ರವನ್ನ ಚಾಸ್ತಿತ್ಯ ಬರೆದು ಒಂದು ನಿಟ್ಟುಸಿರು ಬಿಟ್ಟು, ಸಣ್ಣದಾಗಿ ಬಿಕ್ಕಳಿಸಿದ್ದಳೇನೋ..ಕೆಲವೇ ಗಂಟೆಗಳಲ್ಲಿ ಅದೇ ನಂಬರ್ನಿಂದ ಒಂದು ರಿಪ್ಲೈ ಬಂದದ್ದು ಚಾಸ್ತಿತ್ಯಳನ್ನ ಅಚ್ಚರಿಗೆ ನೂಕಿತ್ತು.
ಈ ಕಡೆ ತಂದೆಯನ್ನು ಕಳೆದುಕೊಂಡ ಹತಭಾಗ್ಯಳಾದ ಚಾಸ್ತಿತ್ಯ ಮೆಸೇಜ್ ಮಾಡಿದ್ದರೇ. ಆ ಕಡೆಯಿಂದ ಮಗಳನ್ನು ಕಳೆದುಕೊಂಡ ತಂದೆಯ ಹೃದಯವೊಂದು ಚಾಸ್ತಿತ್ಯಳ ದೀರ್ಘ ಸಂದೇಶಕ್ಕೆ ಅಷ್ಟೇ ಭಾವುಕವಾಗಿ ಪ್ರತಿಕ್ರಿಯೆ ನೀಡಿದ್ರು. ಅವರ ಹೆಸರು ಬ್ರಾಡ್, ಚಾಸ್ತಿತ್ಯಳಂತೆ ಸಮಾನ ದುಃಖಿ, 2014 ರಲ್ಲಿಯೇ ಆತ ತನ್ನ ಮಗಳನ್ನು ಕಳೆದುಕೊಂಡಿದ್ದರು. ಅದ್ಯಾವ ವಿಧಿ ಬೆಸೆದ ಬಂಧವೋ ಏನೋ ಚಾಸ್ತಿತ್ಯ ಕಳೆದ ನಾಲ್ಕು ವರ್ಷಗಳಿಂದ ಕಳುಹಿಸುತ್ತಿದ್ದ ಮೆಸೇಜ್ಗಳೆಲ್ಲ ಅವರ ಮೊಬೈಲ್ನಲ್ಲಿ ಸೇವ್ ಆಗಿದ್ದವು. ನಾಲ್ಕು ವರ್ಷದಿಂದ ಆ ಬದಿಯ ಭಾವುಕ ಸಂದೇಶಗಳನ್ನು ಓದುತ್ತಿದ್ದ ಬ್ರಾಡ್, ನಿನ್ನೆ ಬಂದ ಮೆಸೇಜ್ ನೋಡಿ ಕರಳು ತಡೆಯಲಿಲ್ಲವೋ ಏನೋ? ವಾಪಸ್ ಪ್ರತಿಕ್ರಿಯಿಸಿ ಅಷ್ಟೇ ದೀರ್ಘವಾದ ಸಂದೇಶವನ್ನ ಚಾಸ್ತಿತ್ಯಳಿಗೆ ಬರೆದಿದ್ದಾರೆ.
‘ಹಲೋ ಸ್ವೀಟ್ ಹಾರ್ಟ್, ನಾನು ನಿನ್ನ ತಂದೆಯಲ್ಲ, ಆದ್ರೆ ಕಳೆದ ನಾಲ್ಕು ವರ್ಷಗಳಿಂದ ನಿನ್ನಿಂದ ನಾನು ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ. ನನ್ನ ಹೆಸರು ಬ್ರಾಡ್, ಆಗಸ್ಟ್ 2014ರಲ್ಲಿ ಕಾರ್ ಅಪಘಾತದಲ್ಲಿ ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ಹತಾಶಗೊಂಡಿದ್ದ ನನ್ನನ್ನು ನಿನ್ನ ಸಂದೇಶಗಳು ಜೀವಂತವಾಗಿಟ್ಟಿವೆ. ಈ ನಾಲ್ಕು ವರ್ಷಗಳಲ್ಲಿ ನಿನ್ನೆಲ್ಲ ಏಳುಬೀಳುಗಳನ್ನು ನಾನು ನೋಡಿದ್ದೇನೆ. ಅನೇಕ ಬಾರಿ ನಿನಗೆ ಪ್ರತಿಕ್ರಿಯೆ ನೀಡಬೇಕು ಅಂದುಕೊಂಡಿದ್ದೆ. ಆದ್ರೆ ನಿನ್ನ ಹೃದಯ ಚೂರಾದೀತು ಅಂತ ಆ ಧೈರ್ಯ ಮಾಡಲಿಲ್ಲ. ನೀನು ಅಸಾಮಾನ್ಯ ಯುವತಿ ಮಗು. ನನ್ನ ಮಗಳು ಕೂಡ ನಿನ್ನಂತೆಯೇ ಇರಬೇಕು ಅಂತ ಬಯಸಿದ್ದೆ. ನಿನ್ನ ಪ್ರತಿದಿನದ ಸಮಾಚಾರಗಳಿಗೆ ಧನ್ಯವಾದ. ನನ್ನ ಮಗಳನ್ನು ಕಿತ್ತುಕೊಂಡ ದೇವರದ್ದು ತಪ್ಪಲ್ಲ ಅನ್ನೋ ಮನವರಿಕೆ ಮಾಡಿಕೊಟ್ಟಿದ್ದೀಯಾ. ದೇವರು ನಿನ್ನ ರೂಪದಲ್ಲಿ ನನಗೆ ನನ್ನ ಪುಟ್ಟ ದೇವತೆಯನ್ನು ವಾಪಸ್ ನೀಡಿದ್ದಾನೆ. ಎಲ್ಲವೂ ಸರಿಯಾಗಲಿದೆ. ನಿನ್ನ ಬಗ್ಗೆ ಹೆಮ್ಮೆಯಿದೆ ನನಗೆ, ನಾಳೆಯೂ ನಿನ್ನ ಸಂದೇಶಗಳಿಗಾಗಿ ಕಾಯುವೇ ಅಂತ ಮೆಸೇಜ್ ಮಾಡಿದ್ದಾರೆ.
ಅಪ್ಪ ಮಗಳ ಭಾವುಕ ಲೋಕದ ಅಕ್ಷರ ವಿನಿಮಯವನ್ನ ಚಾಸ್ತಿತ್ಯ ತನ್ನ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು. ಅವರ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಾರು 1,41,00 ಲೈಕ್ಸ್ಗಳು ಬಂದಿದ್ದು, 2,72,000 ಬಾರಿ ಶೇರ್ ಆಗಿದೆ.
Comments are closed.