ಕ್ವೀನ್‌ಸ್ಟೌನ್, ನ್ಯೂಜಿಲೆಂಡ್ : ಬೃಹತ್ ಹೆಬ್ಬಾವೊಂದು ಆಸ್ಟ್ರೇಲಿಯಾದಿಂದ ನ್ಯೂಜಿಲೆಂಡಿಗೆ ವಿಮಾನದಲ್ಲೇ ಪ್ರಯಾಣಿಸಿದೆ. ಆದರೆ, ಪ್ರಯಾಣಿಕರ ಅದೃಷ್ಟ ಚೆನ್ನಾಗಿತ್ತು ಈ ಹೆಬ್ಬಾವು ವಿಮಾನದ ಒಳಗೆ ಬಂದಿರಲಿಲ್ಲ. ವಿಮಾನದ ಅಂಡರ್‌ಕ್ಯಾರೇಜ್‌ನಲ್ಲಿ ಕುಳಿತು ಇದು ಹಾಯಾಗಿ ಬಹುದೂರ ಪ್ರಯಾಣ ಮಾಡಿತ್ತು. ಆದರೆ, ಎಷ್ಟೇ ದೂರ ವಿಮಾನದಲ್ಲಿ ಪ್ರಯಾಣಿಸಿದ್ದರೂ ಈ ಹೆಬ್ಬಾವಿನ ಕತೆ ದುರಂತದಲ್ಲೇ ಮುಗಿದಿತ್ತು.
ಆಸ್ಟ್ರೇಲಿಯಾದಿಂದ ಬಂದಿದ್ದ ಈ ಹೆಬ್ಬಾವು ಕ್ವೀನ್‌ಸ್ಟೌನ್‌ನ ಏರ್‌ಪೋರ್ಟಿನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ರನ್ ವೇನಲ್ಲಿ ಬಿದ್ದಿತ್ತು. ಇದನ್ನು ಇನ್ನೊಂದು ವಿಮಾನದ ಪೈಲಟ್ ಗಮನಿಸಿ ಈ ವಿಮಾನದವರ ಗಮನಕ್ಕೆ ತಂದಿದ್ದರು. ರನ್ ಮೇಲೆ ಬಿದ್ದಾಗಲೇ ಹೆಬ್ಬಾವಿಗೆ ತುಂಬಾ ಗಾಯಗಳಾಗಿತ್ತು. ಬಹುತೇಕ ಈ ಹಾವು ಉಳಿಯುವುದೇ ಕಷ್ಟವಾಗಿತ್ತು.
ಬಳಿಕ ಈ ವಿಷಯ ಅಧಿಕಾರಿಗಳ ಕಿವಿಗೂ ಬಿದ್ದಿತ್ತು. ಹೀಗಾಗಿ ನ್ಯೂಜಿಲೆಂಡ್ ಏರ್‌ಪೋರ್ಟಿನ ಬಯೋಸೆಕ್ಯೂರಿಟಿ ಅಧಿಕಾರಿಗಳು ಹೆಬ್ಬಾವಿನ ವಿಷಯವನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದು, ಅಧಿಕಾರಿಗಳು ಬಂದು ಹೆಬ್ಬಾವನ್ನು ಹಿಡಿದಿದ್ದರು. ಅಧಿಕಾರಿಗಳು ಹೆಬ್ಬಾವನ್ನು ಹಿಡಿದ ವೇಳೆ ಅದಿನ್ನೂ ಬದುಕಿತ್ತು. ಆದರೆ, ನಂತರ ಈ ಹಾವು ಸಾವನ್ನಪ್ಪಿತ್ತು.
ಹಾಗಂತ, ವಿಮಾನದಲ್ಲಿ ಹಾವು ಪ್ರಯಾಣಿಸುವುದು ಇದೇ ಮೊದಲೇನು ಅಲ್ಲ. ಫೆಬ್ರವರಿಯಲ್ಲಿ ಹೆಬ್ಬಾವೊಂದು ಕ್ವೀನ್ಸ್‌ಲ್ಯಾಂಡ್‌ನಿಂದ ಗ್ಲ್ಯಾಸ್ಗೋಗೆ 14,900 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸಿತ್ತು. ಪ್ರಯಾಣಿಕರೊಬ್ಬರು ತನ್ನ ಇತರ ಬ್ಯಾಗಿನೊಂದಿಗೆ ಇಟ್ಟಿದ್ದ ಶೂನೊಳಗೆ ಕುಳಿತು ಈ ಸಣ್ಣ ಹೆಬ್ಬಾವು ಸಂಚರಿಸಿತ್ತು. ಈ ಹೆಬ್ಬಾವನ್ನು ಕಂಡ ಆ ಮಹಿಳೆ ಅಂದು ದಿಗಿಲುಗೊಂಡಿದ್ದರು. ಆರಂಭದಲ್ಲಿ ತನ್ನ ಮಗಳು ಮತ್ತು ಅಳಿಯ ಆಟಿಕೆಯ ಹೆಬ್ಬಾವನ್ನು ತನ್ನ ಶೂನೊಳಗೆ ಇಟ್ಟು ತಮಾಷೆ ಮಾಡುತ್ತಿದ್ದಾರೆ ಎಂದು ಇವರು ಅನುಮಾನಗೊಂಡಿದ್ದರು. ಆದರೆ, ಶೂ ಒಳಗೆ ಇದ್ದದ್ದು ಅಸಲಿ ಹಾವು ಎಂದು ಗೊತ್ತಾದ ತಕ್ಷಣ ಇವರ ಎದೆಯೊಡೆದಂತಾಗಿತ್ತು. ಬಳಿಕ ಸ್ಕಾಟ್‌ಲ್ಯಾಂಡಿನಲ್ಲಿ ಈ ಹಾವನ್ನು ರಕ್ಷಿಸಲಾಗಿತ್ತು.
ಇದಕ್ಕೂ ಮೊದಲು ಈ ವರ್ಷದ ಆರಂಭದಲ್ಲಿ ಜಕಾರ್ತಾಗೆ ಪ್ರಯಾಣ ಬೆಳೆಸಿದ್ದ ಲಯನ್ ಏರ್ ವಿಮಾನದಲ್ಲಿ ವಿಷಕಾರಿ ಚೇಳು ಕಾಣಿಸಿಕೊಂಡು ಆತಂಕ ಮೂಡಿಸಿತ್ತು.
Comments are closed.