ಅಂತರಾಷ್ಟ್ರೀಯ

ಇಂಡಿಯಾದ ದೆಹಲಿ ದಾಳಿಗೆ ನೆರವು ನೀಡಿದ್ದ ಸುಲೈಮನಿ ಹತ್ಯೆ – ಡೊನಾಲ್ಡ್ ಟ್ರಂಪ್

Pinterest LinkedIn Tumblr


ಲಾಸ್ ಏಂಜಲೀಸ್: ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸುಲೈಮನಿಯನ್ನು ಅಮೆರಿಕ ಏರ್ ಸ್ಟ್ರೈಕ್ ನಡೆಸಿ ಕೊಂದಿರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮರ್ಥಿಸಿಕೊಂಡಿದ್ದು, ಹತ್ಯೆಯಾದ ಖಾಸೀಂ ಸುಲೈಮನಿ, ಲಂಡನ್ ಸೇರಿದಂತೆ ಭಾರತದ ನವದೆಹಲಿಯಲ್ಲಿ ಭಯೋತ್ಪಾದನ ದಾಳಿ ನಡೆಸಲು ನೆರವು ನೀಡಿದ್ದ ಎಂದು ಹೇಳಿದ್ದಾರೆ.

ಅಮೆರಿಕ ಶುಕ್ರವಾರ ನಡೆಸಿದ್ದ ವೈಮಾನಿಕ ದಾಳಿಯಲ್ಲಿ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಬಿಗಿ ಭದ್ರತೆಯಲ್ಲಿದ್ದ ಸುಲೈಮನಿಯನ್ನು ಹತ್ಯೆ ಮಾಡಲಾಗಿತ್ತು. ಇರಾಕ್‍ನ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್ ಮುಹಾಂದಿಸ್ ಜೊತೆ ಇರಾಕ್ ರಾಜಧಾನಿ ಬಾಗ್ದಾದ್‍ನ ಏರ್‍ಪೋರ್ಟಿಗೆ ಇರಾನ್ ಸೇನಾ ಮುಖ್ಯಸ್ಥರಾಗಿದ್ದ ಸುಲೈಮನಿ ಕಾರಿನಲ್ಲಿ ತೆರಳುತ್ತಿದ್ದರು. ಈ ಇಬ್ಬರು ತೆರಳುತ್ತಿದ್ದ ಕಾರನ್ನು ಟಾರ್ಗೆಟ್ ಮಾಡಿದ ಅಮೆರಿಕ ಸೇನೆಗಳು ಡ್ರೋನ್ ಮೂಲಕ ಕ್ಷಿಪಣಿಯನ್ನು ಉಡಾವಣೆ ಮಾಡಿ ಏರ್ ಸ್ಟ್ರೈಕ್ ಮಾಡಿತ್ತು. ದಾಳಿಯ ತೀವ್ರತೆಗೆ ಇಬ್ಬರು ತೆರಳುತ್ತಿದ್ದ ಕಾರುಗಳು ಛಿದ್ರ-ಛಿದ್ರವಾಗಿದ್ದವು.

ಘಟನೆಯ ಕುರಿತು ಫ್ಲೋರಿಡಾದಲ್ಲಿ ಮಾತನಾಡಿದ್ದ ಟ್ರಂಪ್, ಇತ್ತೀಚೆಗೆ ಅಮೆರಿಕವನ್ನು ಟಾರ್ಗೆಟ್ ಮಾಡಿ ಇರಾಕ್ ನಡೆಸಿದ ದಾಳಿಗಳಲ್ಲಿ ದೇಶದ ಸೈನಿಕ ಸಾವನ್ನಪ್ಪಿದ್ದರು. ಅಲ್ಲದೇ ರಾಕೆಟ್ ದಾಳಿಯಲ್ಲಿ ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದರು. ಬಾಗ್ದಾದ್‍ನ ನಮ್ಮ ವಿದೇಶಾಂಗ ಕಚೇರಿಯ ಮೇಲೆ ಸುಲೈಮನಿ ನಿರ್ದೇಶನದಂತೆ ದಾಳಿ ನಡೆಸಲಾಗಿತ್ತು ಎಂದು ಹೇಳಿದ್ದಾರೆ.

ಸುಲೈಮನಿನ ಕ್ರೂರ ಮನಸ್ಸಿನ ಕಾರಣ ಅಮಾಯಕ ಜನರು ಸಾವನ್ನಪ್ಪಿದ್ದಾರೆ. ಲಂಡನ್ ಸೇರಿದಂತೆ ಭಾರತದ ದೆಹಲಿವರೆಗೂ ಭಯೋತ್ಪಾದಕ ದಾಳಿಗಳಿಗೆ ಸುಲೈಮನಿ ನೆರವು ನೀಡಿದ್ದಾನೆ. ಇಂದು ನಾವು ಸುಲೈಮನಿ ದೌರ್ಜನ್ಯಗಳಿಂದ ಉಂಟಾದ ಸಂತ್ರಸ್ತರನ್ನು ಗೌರವದಿಂದ ನೆನಪಿಸಿಕೊಳ್ಳಬೇಕಿದೆ. ಸುಲೈಮನಿ ಭಯೋತ್ಪಾದನೆಯ ಆಳ್ವಿಕೆ ಅಂತ್ಯವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ 20 ವರ್ಷದಗಳಿಂದ ಸುಲೇಮನಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಭಯೋತ್ಪಾದನ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಟ್ರಂಪ್ ಆರೋಪ ಮಾಡಿದ್ದು, ಅಮೆರಿಕ ಸೇನಾಪಡೆ ಇಂತಹ ದಾಳಿ ಬಹಳ ಹಿಂದೆಯೇ ನಡೆಸಬೇಕಿತ್ತು. ಇದರಿಂದ ಸಾವಿರಾರು ಜನರ ಜೀವವನ್ನು ರಕ್ಷಿಸಬಹುದಿತ್ತು. ಇತ್ತೀಚೆಗಷ್ಟೇ ಸುಲೇಮನಿ ಇರಾನ್ ನಲ್ಲಿ ಕ್ರೂರ ಪ್ರತಿಭಟನೆಗಳನ್ನು ನಡೆಸಲು ಕಾರಣನಾಗಿದ್ದ. ಈ ಪ್ರತಿಭಟನೆಗಳಲ್ಲಿ ಸಾವಿರಕ್ಕೂ ಹೆಚ್ಚು ಮಂದಿಯನ್ನು ಕ್ರೂರವಾಗಿ ಹಿಂಸಿಸಿ ಕೊಲೆ ಮಾಡಿದ್ದಾನೆ. ಆದರೆ ಸುಲೇಮನಿ ಹತ್ಯೆಯೂ ಯುದ್ಧಕ್ಕೆ ದಾರಿ ಮಾಡಿಕೊಡುವುದಿಲ್ಲ. ಯುದ್ಧವನ್ನು ನಿಲ್ಲಿಸಲು ನಾವು ದಾಳಿಯನ್ನು ನಡೆಸಿದ್ದೇವೆ. ಇರಾನಿನ ಜನರ ಬಗ್ಗೆ ನನಗೆ ಅಪಾರ ಗೌರವಿದ್ದು, ಅವರು ವೈಭವದ ಪರಂಪರೆ ಹಾಗೂ ಸಾಮಥ್ರ್ಯವನ್ನು ಹೊಂದಿದ್ದಾರೆ. ಅಮೆರಿಕ ಅಲ್ಲಿನ ಆಡಳಿತ ಬದಲಾವಣೆಯನ್ನು ಬಯಸುವುದಿಲ್ಲ ಎಂದು ದಾಳಿಗೆ ತಮ್ಮ ಸಮರ್ಥನೆಗಳನ್ನು ಟ್ರಂಪ್ ಬಲವಾಗಿ ಮುಂದಿಟ್ಟಿದ್ದಾರೆ.

ಅಮೆರಿಕದ ಈ ದಾಳಿಯಿಂದ ವಿಶ್ವದಲ್ಲಿ 3ನೇ ಮಹಾಸಮರದ ಕಾರ್ಮೋಡ ಆವರಿಸಿದೆ. ಅಮೆರಿಕದ ದಾಳಿಯನ್ನು ಇರಾನ್ ಉಗ್ರವಾಗಿ ಖಂಡಿಸಿ, ನಿಮ್ಮ ದುಸ್ಸಾಹಸಗಳಿಗೆ ತಕ್ಕ ಬೆಲೆ ತೆರಲಿದ್ದೀರಿ. ಕಟು ಪ್ರತೀಕಾರ ನಿಮಗೆ ಕಾದಿದೆ ಎಂದು ಎಚ್ಚರಿಕೆಯನ್ನು ರವಾನಿಸಿದೆ. ಇದರ ಬೆನ್ನಲ್ಲೇ ಇರಾನ್, ಇರಾಕ್‍ನಲ್ಲಿ ಪ್ರಕ್ಷುಬ್ಧ ವಾತಾವರಣದಿಂದ ಅಮೆರಿಕ ತನ್ನ ಪ್ರಜೆಗಳಿಗೆ ವಾಪಸ್ ಬರುವಂತೆ ಸೂಚನೆ ನೀಡಿದೆ. ಇರಾಕ್‍ನಲ್ಲಿರುವ ತನ್ನ ಸೇನಾಪಡೆಗಳಿಗೂ ಎಚ್ಚರಿಕೆ ವಹಿಸಲು ಸೂಚಿಸಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ವಿಶ್ವ ರಾಷ್ಟ್ರಗಳ ಮೇಲೆ ಬೀರುವ ಸಾಧ್ಯತೆ ಹೆಚ್ಚಿದೆ. ಇರಾನ್-ಇರಾಕ್‍ನಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಭಾರತದಲ್ಲೂ ತೈಲ ದರ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ ಎಂಬಾಂತೆ ನಿನ್ನೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಒಂದೇ ದಿನ 760 ರೂ. ಏರಿಕೆಯಾಗಿತ್ತು. ಪರಿಣಾಮ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 41,130 ರೂ. ಗಾಡಿ ದಾಟ್ಟಿತ್ತು.

2012ರ ದೆಹಲಿಯಲ್ಲಿ ದಾಳಿ:
ನವದೆಹಲಿಯ ಪ್ರಧಾನಮಂತ್ರಿಗಳ ನಿವಾಸ ಬಳಿ ಕಾರಿನಲ್ಲಿ ಸ್ಫೋಟ ನಡೆಸಲಾಗಿತ್ತು. ಈ ಕಾರು ಇಸ್ರೇಲ್ ರಾಯಭಾರಿ ಕಚೇರಿಗೆ ಸೇರಿದಾಗಿತ್ತು. ಘಟನೆಯಲ್ಲಿ ಇಸ್ರೇಲ್‍ನ ರಾಯಭಾರಿ ಕಚೇರಿಯ ಅಧಿಕಾರಿಯ ಪತ್ನಿ ಸೇರಿದಂತೆ ಇಬ್ಬರು ಭಾರತೀಯರು ಗಾಯಗೊಂಡಿದ್ದರು. ಇಸ್ರೇಲ್ ಅಧಿಕಾರಿಗಳಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಮೇಟಾರು ಸೈಕಲ್‍ನಲ್ಲಿ ಸ್ಫೋಟಕ ಇರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ ಭಾರತದ ಗುಪ್ತಚರ ಇಲಾಖೆಗೆ ಮಾಹಿತಿ ನೀಡಿದ್ದ ಅಮೆರಿಕ ದಾಳಿಯ ಹಿಂದೆ ಇರಾನ್ ಪಾತ್ರವಿರುವ ಬಗ್ಗೆ ತಿಳಿಸಿತ್ತು. ದೆಹಲಿಯ ದಾಳಿಯ ದಿನವೇ ಜಾರ್ಜಿಯಾದಲ್ಲಿ ನಡೆದ ದಾಳಿಯಲ್ಲಿ ಇಸ್ರೇಲ್ ಅಧಿಕಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಮರುದಿನ ಥೈಲ್ಯಾಂಡ್‍ನಲ್ಲಿ ನಡೆದ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು. ಈ ವೇಳೆ ಪೊಲೀಸರು ಇಬ್ಬರು ಇರಾನ್ ಪ್ರಜೆಗಳನ್ನು ಬಂಧಿಸಿತ್ತು. 2013ರಲ್ಲಿ ಇಬ್ಬರಿಗೂ ಶಿಕ್ಷೆ ವಿಧಿಸಲಾಗಿತ್ತು.

ಇಸ್ರೇಲ್ ಉಪ ಪ್ರಧಾನಿ ಅಂದು ಸುಲೈಮನಿ ದೆಹಲಿಯ ದಾಳಿ ಹಿಂದಿನ ಪ್ರಮುಖ ವ್ಯಕ್ತಿ ಎಂದು ತಿಳಿಸಿದ್ದರು. ಅಲ್ಲದೇ ಥೈಲ್ಯಾಂಡ್, ಜಾರ್ಜಿಯಾ ಹಾಗೂ ದೆಹಲಿಯಲ್ಲಿ ನಡೆದ ಸ್ಫೋಟಕಗಳು ಒಂದೇ ಮಾದರಿಯಾದ್ದು ಎಂದು ತನಿಖೆಯ ವೇಳೆ ಬಯಲಾಗಿತ್ತು. ಅಂದು ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿದ್ದ ಯದ್ಧದ ಹಿನ್ನೆಲೆಯಲ್ಲಿ ಸುಲೈಮನ್ ದೆಹಲಿಯಲ್ಲಿ ದಾಳಿ ನಡೆಸುವ ಸಂಚು ರೂಪಿಸಿದ್ದ. ಇರಾನ್‍ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕುಡ್ಸ್ ಫೋರ್ಸ್ ಮೇಲೆ ಸುಲೈಮನ್ ನಿಯಂತ್ರಣ ಹೊಂದಿದ್ದ. ಈ ಪಡೆ ಇರಾನ್ ಸೇರಿದಂತೆ ವಿಶ್ವದ ವಿವಿಧ ಸ್ಥಳಗಳಲ್ಲಿ ಭಯೋತ್ಪಾದನ ದಾಳಿ ನಡೆಸುವುದು ಸೇರಿದಂತೆ, ಇತರೆ ಸಂಘಟನೆಗಳಿಗೆ ನೆರವು ನೀಡುತ್ತಿತ್ತು. ಇಸ್ರೇಲ್ ಈ ಸಂಘಟನೆಯ ಪ್ರಮುಖ ಟಾರ್ಗೆಟ್ ಆಗಿತ್ತು.

Comments are closed.