ಸಿಡ್ನಿ: ಸತತವಾಗಿ ಹರಡುತ್ತಿರುವ ಕಾಳ್ಗಿಚ್ಚಿನ ನಡುವೆಯೇ ಆಸ್ಟ್ರೇಲಿಯಾ 10,000 ಒಂಟೆಗಳ ಮಾರಣಹೋಮ ನಡೆಸಲು ಸಿದ್ಧತೆ ನಡೆಸಿದೆ.
ಒಂಟೆಗಳ ಹತ್ಯೆಗಾಗಿ ಆಸ್ಟ್ರೇಲಿಯಾ 5 ದಿನಗಳ ಕಾರ್ಯಾಚರಣೆ ನಡೆಸಲಿದ್ದು ಹೆಲಿಕಾಫ್ಟರ್ ಗಳ ಮೂಲಕ ಗುಂಡಿಕ್ಕಿ ಒಂಟೆಗಳನ್ನು ಹತ್ಯೆ ಮಾಡಲಾಗುತ್ತದೆ.
‘‘ವಿಪರೀತ ಸೆಖೆ ಹಾಗೂ ಅನಾನುಕೂಲ ವಾತಾವರಣದಿಂದ ತತ್ತರಿಸಿಹೋಗಿದ್ದೇವೆ. ನಮಗೆ ಅನಾರೋಗ್ಯವೂ ಕಾಡುತ್ತಿದೆ. ಈ ಮಧ್ಯೆ ಒಂಟೆಗಳು ಬೇಲಿಗಳನ್ನು ಮುರಿದು ನಮ್ಮ ಮನೆಗಳಿಗೆ ಪ್ರವೇಶಿಸಿ, ಏರ್‌ಕಂಡೀಶನ್‌ಗಳ ನೀರನ್ನು ಹೀರಲು ಪ್ರಯತ್ನಿಸುವೆ. ಒಂಟೆಗಳಿಂದಾಗಿ ಕನಿಪಿ ಸಮುದಾಯ ತೀವ್ರ ತೊಂದರೆ ಅನುಭವಿಸುತ್ತಿದೆ’’ ಎಂದು ಆಸ್ಟ್ರೇಲಿಯದ ಮೂಲ ನಿವಾಸಿ ಸಮುದಾಯದ ಕಾರ್ಯನಿರ್ವಾಹಕ ಮಂಡಳಿಯ ಸದಸ್ಯೆ ಮರಿಟಾ ಬೇಕರ್ ಸರಕಾರಕ್ಕೆ ದೂರು ಸಲ್ಲಿಸಿದ್ದಾರೆ.
ಕಳೆದ ವರ್ಷದ ನವೆಂಬರ್‌ನಿಂದ ದಟ್ಟ ಕಾಡ್ಗಿಚ್ಚಿನಿಂದ ತತ್ತರಿಸಿರುವ ಆಸ್ಟ್ರೇಲಿಯ ಇದೀಗ ಒಂಟೆಗಳನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದೆ. ದೇಶದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚಿನಿಂದ 12ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 480 ಮಿಲಿಯನ್‌ಗೂ ಅಧಿಕ ಪ್ರಾಣಿಗಳನ್ನು ಬೇರಡೆಗೆ ಸ್ಥಳಾಂತರಿಸಲಾಗಿದೆ ಅಥವಾ ಸಾವನ್ನಪ್ಪಿವೆ ಎಂದು ಯುನಿವರ್ಸಿಟಿ ಆಫ್ ಸಿಡ್ನಿ ರಿಸರ್ಚಸ್ ತಿಳಿಸಿದೆ.
Comments are closed.