ಅಂತರಾಷ್ಟ್ರೀಯ

ಅಮೆರಿಕ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ

Pinterest LinkedIn Tumblr


ವಾಷಿಂಗ್ಟನ್ (ಜ.8)​: ಇರಾನ್​ ಮೇಜರ್​ ಜನರಲ್​ ಖಾಸಿಂ ಸೊಲೆಮನಿಯ ಅಮೆರಿಕ ಹತ್ಯೆ ಮಾಡಿದ ನಂತರ ಎರಡೂ ದೇಶಗಳ ಸಂಬಂಧ ಮತ್ತಷ್ಟು ಹಳಸಿದೆ. ಮೂರನೇ ಮಹಾಯುದ್ಧ ನಡೆಯಲಿದೆ ಎನ್ನುವ ಮಾತುಗಳೂ ಕೇಳಿ ಬರುತ್ತಿರುವಾಗಲೇ ಇರಾಕ್​ನಲ್ಲಿನ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಮೂಲಕ ಅಮೆರಿಕದ ಸಿಟ್ಟನ್ನು ಮತ್ತಷ್ಟು ಹೆಚ್ಚಿಸಿದೆ.

“ಜನವರಿ 7ರಂದು ಸಂಜೆ 5.30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಇರಾನ್​ 12ಕ್ಕೂ ಹೆಚ್ಚು ಮಿಸೈಲ್​ಗಳನ್ನು ಹಾರಿಸಿದೆ. ಇರಾಕ್​ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಈ ಕ್ಷಿಪಣಿಗಳು ಇರಾಕ್​ ನೆಲೆಯಿಂದ ಹಾರಿರುವುದು ಖಚಿತವಾಗಿದೆ. ಇರಾಕ್​ ಹಾಗೂ ಅಮೆರಿಕ ಜಂಟಿಯಾಗಿ ಬಳಕೆ ಮಾಡುವ ವಾಯುನೆಲೆಯನ್ನು ಇರಾನ್​ ಗುರಿಯಾಗಿಸಿಕೊಂಡಿದೆ,” ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ಈ ದಾಳಿಯಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ, ಎಷ್ಟು ಹಾನಿಯಾಗಿದೆ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಶುಕ್ರವಾರ ಮುಂಜಾನೆ ಬಾಗ್ದಾದ್​​ನಲ್ಲಿ ರಾಕೆಟ್​ ದಾಳಿ ನಡೆಸುವ ಮೂಲಕ ಇರಾನ್​ ಮೇಜರ್​ ಜನರಲ್​ ಖಾಸಿಂ ಸೊಲೆಮನಿಯನ್ನು ಅಮೆರಿಕ ಹತ್ಯೆ ಮಾಡಿತ್ತು. ಇದಾದ ಬೆನ್ನಲ್ಲೇ ಕೆಂಡಕಾರಿದ್ದ ಇರಾನ್, “ಅಮೆರಿಕ ಇಂತಹ ಅಪಾಯಕಾರಿ ಹಾಗೂ ಬುದ್ಧಿಹೀನ ಕೃತ್ಯಕ್ಕೆ ಕೈ ಹಾಕಬಾರದಿತ್ತು. ಇದರ ಮುಂದಿನ ಪರಿಣಾಮಗಳನ್ನು ಅಮೆರಿಕ ಖಂಡಿತವಾಗಿಯೂ ಅನುಭವಿಸಲಿದೆ,” ಎಂದು ಹೇಳಿತ್ತು. ಈ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಇರಾನ್​ ದಾಳಿ ನಡೆಸಿದೆ.

ಶುಕ್ರವಾರ ಬಾಗ್ದಾದ್​​ ವಿಮಾನ ನಿಲ್ದಾಣದಲ್ಲಿ ಅಮೆರಿಕ ರಾಕೆಟ್​ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸೊಲೆಮನಿ ಮೃತಪಟ್ಟಿದ್ದ. ಖಾಸಿಂ ಸೊಲೆಮನಿಯನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು. ಈತ ಇರಾನ್​ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ. ಸೊಲೆಮನಿ ಇರಾನ್​ ಗುಪ್ತಚರ ಇಲಾಖೆಯ ಮುಖ್ಯಸ್ಥ ಕೂಡ ಹೌದು. ಹೀಗಾಗಿ ಈತನನ್ನು ಹತ್ಯೆ ಮಾಡಲಾಗಿತ್ತು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಇರಾನ್​ ಸಜ್ಜಾಗಿದೆ ಎನ್ನಲಾಗಿದೆ.

Comments are closed.