ಬಾಗ್ದಾದ್: ಇರಾಕ್ ನಲ್ಲಿರುವ ಅಮೆರಿಕ ಸೇನಾ ಕ್ಯಾಂಪ್ ಗಳ ಮೇಲೆ ಇರಾನ್ ಸೇನೆ ರಾಕೆಟ್ ದಾಳಿ ನಡೆಸಿದ ಕೇವಲ 24 ಗಂಟೆಗಳ ಒಳಗೆ ಮತ್ತೊಂದು ಕ್ಷಿಪಣಿ ದಾಳಿ ವರದಿಯಾಗಿದ್ದು, ರಾಜಧಾನಿ ಬಾಗ್ದಾದ್‌ನ ಸುರಕ್ಷಿತ ಪ್ರದೇಶವಾದ ಹಸಿರು ವಲಯದಲ್ಲಿ ಎರಡು ರಾಕೆಟ್‌ಗಳನ್ನು ಹಾರಿಸಲಾಗಿದೆ.
ಈ ಪ್ರದೇಶದಲ್ಲಿ ಅಮೆರಿಕ ಸೇರಿದಂತೆ ವಿಶ್ವದ ವಿವಿಧ ದೇಶಗಳ ರಾಯಭಾರ ಕಚೇರಿಗಳಿದ್ದು, ಇದೇ ಪ್ರದೇಶವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ಮಾಡಲಾಗಿದೆ. ಈ ಪ್ರದೇಶವನ್ನು ಇರಾಕ್‌ನ ಸುರಕ್ಷಿತ ಸ್ಥಳವೆಂದು ಪರಿಗಣಿಸಲಾಗಿದೆ. ವಿಶೇಷವೆಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ ನಂತರ ಈ ರಾಕೆಟ್ ದಾಳಿ ನಡೆದಿದೆ. ಇನ್ನು ರಾಕೆಟ್ ದಾಳಿಯಲ್ಲಿ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಇದಕ್ಕೂ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ದಾಳಿಯ ನಂತರ ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದರು. ಅಮೆರಿಕದ ನೆಲೆಯ ಮೇಲೆ ಇರಾನ್ ದಾಳಿ ನಡೆಸಿದ್ದರೂ, ಎಲ್ಲಾ ಸೈನಿಕರು ಸುರಕ್ಷಿತರಾಗಿದ್ದಾರೆ ಮತ್ತು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಿದ್ದರು. ಜೊತೆಗೆ ನಾನು ಅಮೆರಿಕದ ಅಧ್ಯಕ್ಷರಾಗಿ ಇರುವವರೆಗೂ ಇರಾನ್ ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದರು.
“ಕಳೆದ ರಾತ್ರಿಯ ದಾಳಿಯಲ್ಲಿ ಎಲ್ಲಾ ನಾಗರಿಕರು ಮತ್ತು ಸೈನಿಕರು ಸುರಕ್ಷಿತರಾಗಿದ್ದಾರೆ. ನಮ್ಮ ಮಿಲಿಟರಿ ಪಡೆ ಯಾವುದೇ ಸವಾಲಿಗೂ ಸಿದ್ಧವಾಗಿದೆ. ಇರಾನ್‌ನ ಹಿಮ್ಮೆಟ್ಟುವಿಕೆ ಇಡೀ ಜಗತ್ತಿಗೆ ಉತ್ತಮ ಸಂಕೇತವಾಗಿದೆ” ಎಂದು ಟ್ರಂಪ್ ರಾಷ್ಟ್ರಕ್ಕೆ ನೀಡಿದ ಸಂದೇಶದಲ್ಲಿ ತಿಳಿಸಿದ್ದಾರೆ.
Comments are closed.