ಅಂತರಾಷ್ಟ್ರೀಯ

ಪ್ರೇಯಸಿಗೆ ಸೇತುವೆ ಮೇಲೆಯೇ ಪ್ರಪೋಸ್ ಮಾಡಿದ ಸಿವಿಲ್ ಎಂಜಿನಿಯರ್

Pinterest LinkedIn Tumblr


ಲಂಡನ್: ಪ್ರೇಮಿಗಳ ದಿನಾಚರಣೆ ಹತ್ತಿರ ಬರುತ್ತಿದೆ. ಹೀಗಾಗಿ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಕಾಯುತ್ತಿದ್ದಾರೆ. ಅದರಲ್ಲೂ ಕೆಲವರು ಸುಂದರವಾದ ಸ್ಥಳದಲ್ಲೇ ಪ್ರಪೋಸ್ ಮಾಡಬೇಕೆಂಬ ಕನಸು ಕಂಡಿರುತ್ತಾರೆ. ಆದರೆ ಇಲ್ಲೊಬ್ಬ ಸಿವಿಲ್ ಎಂಜಿನಿಯರ್ ವಿಭಿನ್ನವಾಗಿ ತಮ್ಮ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾರೆ.

ಇಂಗ್ಲೆಂಡ್‍ನ ನ್ಯೂಹ್ಯಾಂಪ್‌ಶೈರ್‌ನಲ್ಲಿ ಡಾನ್ ಡೆಲ್ ತುಫೋ ತಮ್ಮ ಪ್ರಿಯತಮೆ ಜುಯಿಲಾ ಕಲ್ಮೆರ್ಟನ್‍ಗೆ ಪ್ರಪೋಸ್ ಮಾಡಿದ್ದಾರೆ. ಅದರಲ್ಲೂ ಬ್ರಿಡ್ಜ್ ಮೇಲೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿರುವುದು ವಿಶೇಷವಾಗಿದೆ. ಯಾಕೆಂದರೆ ಈ ಪ್ರೇಮಿಗಳು ಜೀವನದಲ್ಲಿ ಈ ಬ್ರಿಡ್ಜ್ ಗೆ ತುಂಬಾ ಮಹತ್ವದ ಸ್ಥಳವಾಗಿದೆ.

ಡಾನ್ ಮತ್ತು ಜುಯಿಲಾ ಇಬ್ಬರು ಸಿವಿಲ್ ಎಂಜಿನಿಯರ್ ಮಾಡಿದ್ದು, ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಯಾಗಿ ಡಾನ್ ತನ್ನ ಪ್ರೇಯಸಿ ಜುಯಿಲಾಗೆ ಪ್ರಮೋಸ್ ಮಾಡಲು ನ್ಯೂಹ್ಯಾಂಪ್‌ಶೈರ್‌ನಲ್ಲಿರುವ ಸ್ಮಾರಕ ಸೇತುವೆ ಬಳಿ ಬರುವಂತೆ ಹೇಳಿದ್ದಾರೆ. ಜುಯಿಲಾ ಬಂದ ತಕ್ಷಣ ಡಾನ್ ಸೇತುವೆ ಮೇಲೆ ಮಂಡಿಯೂರಿ ಕುಳಿತು, “ನನ್ನ ಮುಂದಿನ ಬದುಕನ್ನು ನಿನ್ನ ಜೊತೆ ಕಳೆಯಬೇಕೆಂದು ನಾನು ಬಯಸಿದ್ದೇನೆ. ಹೀಗಾಗಿ ನೀನು ನನ್ನನ್ನು ಮದುವೆಯಾಗುತ್ತೀಯಾ?” ಎಂದು ಕೇಳಿದ್ದಾರೆ.

ತಕ್ಷಣ ಜುಯಿಲಾ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಡಾನ್ ಪ್ರೀತಿಯ ಸಂಕೇತವಾಗಿ ಸೇತುವೆಯ ಮೇಲೆಯೇ ಜುಯಿಲಾಗೆ ರಿಂಗ್ ತೊಡಿಸಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲದೇ ತನ್ನ ಗೆಳತಿಗೆ ಸುರ್ಪ್ರೈಸ್ ಕೊಡಲು ಎರಡು ಕುಟುಂಬದವರನ್ನು ಸೇತುವೆ ಬಳಿ ಕರೆಸಿದ್ದರು. ಹೀಗಾಗಿ ಕುಟುಂಬದವರ ಮುಂದೆಯೇ ಪ್ರಪೋಸ್ ಮಾಡಿದ್ದಾರೆ.

ಈ ಪ್ರೇಮಿಗಳಿಗೆ ಈ ಸೇತುವೆ ಬರೀ ಸೇತುವೆಯಾಗಿರಲಿಲ್ಲ. ಯಾಕೆಂದರೆ ಡಾನ್ ಮತ್ತು ಜುಯಿಲಾ ನ್ಯೂ ಹ್ಯಾಂಪ್‍ಶೈರ್ ವಿಶ್ವವಿದ್ಯಾನಿಲಯದಲ್ಲಿ ಒಟ್ಟಾಗಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಇದಾದ ನಂತರ ನ್ಯೂಹ್ಯಾಂಪ್‌ಶೈರ್‌ನಲ್ಲಿ ಸ್ಮಾರಕ ಸೇತುವೆ ನಿರ್ಮಾಣದ ಕೆಲಸದಲ್ಲೂ ಜೊತೆಯಾಗಿ ಕೆಲಸ ಮಾಡಿದ್ದಾರೆ. ಈ ಸೇತುವೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಪ್ರೀತಿ ಮೂಡಿದೆ. ಹೀಗಾಗಿ ಡಾನ್ ಈ ಸೇತುವೆ ಮೇಲೆಯೇ ಪ್ರಿಯತಮೆ ಜುಯಿಲಾಗೆ ಪ್ರಪೋಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದರು.

ಡಾನ್ ಸೇತುವೆ ಮೇಲೆ ಪ್ರಪೋಸ್ ಮಾಡಲು ನ್ಯೂಹ್ಯಾಂಪ್‌ಶೈರ್‌ನ ಸಾರಿಗೆ ಇಲಾಖೆ ಅಧಿಕಾರಿಗಳ ಬಳಿ, ತಾತ್ಕಾಲಿಕವಾಗಿ ಸೇತುವೆಯ ಕೆಲಸವನ್ನು ನಿಲ್ಲಿಸಬೇಕು ಮನವಿ ಮಾಡಿಕೊಂಡಿದ್ದರು. ಅಧಿಕಾರಿಗಳು ಮೊದಲಿಗೆ ನಿರಾಕರಿಸಿದ್ದರು. ಆದರೆ ಈ ಸೇತುವೆ ನಿರ್ಮಾಣದಲ್ಲಿ ಡಾನ್ ಮತ್ತು ಜುಯಿಲಾ ತುಂಬಾ ಕೆಲಸ ಮಾಡಿದ್ದಾರೆ ಎಂದು ನಂತರ ಡಾನ್ ಮನವಿ ಒಪ್ಪಿಗೆ ಸೂಚಿಸಿದ್ದಾರೆ.

ಡಾನ್ ತನಗೆ ಪ್ರಪೋಸ್ ಮಾಡಲು ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡಿದ್ದ ಸಣ್ಣ ಸುಳಿವು ಜುಯಿಲಾಗೆ ಇರಲಿಲ್ಲ. ಆದರೆ ಸೇತುವೆ ಮೇಲೆ ಪ್ರಪೋಸ್ ಮಾಡಿದ್ದಕ್ಕೆ ತುಂಬಾ ಸಂತಸಪಟ್ಟಿದ್ದಾರೆ. ನ್ಯೂಹ್ಯಾಂಪ್‌ಶೈರ್‌ ವಿಶ್ವವಿದ್ಯಾನಿಲಯದ ಹಳೆ ವಿದ್ಯಾರ್ಥಿಗಳ ಟ್ವಿಟ್ಟರ್ ಖಾತೆಯಲ್ಲಿ ಈ ಜೋಡಿಗಳು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Comments are closed.