ಟೋಕಿಯೊ: ಟೋಕಿಯೊ ಬಳಿ ಸಮುದ್ರದಲ್ಲೇ ನಿಲ್ಲಿಸಲಾಗಿರುವ ಕ್ರೂಸ್ ಹಡಗಿನಲ್ಲಿ(ಪ್ರವಾಸಿ ಹಡಗು) ಇನ್ನೂ 70 ಜನರಿಗೆ ಕರೋನವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಮಾರಕ ಸೋಂಕಿಗೆ ಒಳಗಾದವರ ಸಂಖ್ಯೆ 355 ಕ್ಕೆ ಏರಿದೆ ಎಂದು ಜಪಾನ್ ಆರೋಗ್ಯ ಸಚಿವ ಕಟ್ಸುನೊಬು ಕ್ಯಾಟೊ ಭಾನುವಾರ ತಿಳಿಸಿದ್ದಾರೆ.
70 ಜನರ ಪೈಕಿ 38 ಜನರಲ್ಲಿ ಜ್ವರ ಮತ್ತು ಕೆಮ್ಮಿನಂತಹ ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ರಕ್ತ ಪರೀಕ್ಷೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ ಎಂದು ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯ ತಿಳಿಸಿದೆ.
3,700 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಒಟ್ಟು 1,219 ಜನರನ್ನು ಸಚಿವಾಲಯ ಇದುವರೆಗೆ ಪರೀಕ್ಷಿಸಿದೆ ಎಂದು ಜಪಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಎನ್‌ಎಚ್‌ಕೆ ಗೆ ಕ್ಯಾಟೊ ತಿಳಿಸಿದ್ದಾರೆ.
68,000ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ಚೀನಾದಲ್ಲಿ ಕೊರೋನಾ ವೈರಸ್ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇದೀಗ ಚೀನಾದಲ್ಲಿ ಸೋಂಕು ಪೀಡಿತರ ಸಂಖ್ಯೆ 68,000ಕ್ಕೇರಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಓ)ಯ ಮಹಾ ನಿರ್ದೇಶಕ ಡಾ|| ಟೆಡ್ರೋಸ್ ಗೆಬ್ರೆಯೆಸಸ್, ‘ಚೀನಾದಲ್ಲಿ ಕೊರೋನಾ ವೈರಾಣು ಸೋಂಕು ಇನ್ನೂ ತುರ್ತು ಪರಿಸ್ಥಿತಿಯೇ ಆಗಿದ್ದು, ಸೋಂಕು ಎಲ್ಲಿ ಹರಡಲಿದೆ ಎಂದು ಹೇಳಲು ಸಾಧ್ಯವಿಲ್ಲ. ವೈರಾಣು ಸೋಂಕು ಹರಡುವುದನ್ನು ತಡೆಗಟ್ಟಲು ಚೀನಾ ಕೈಗೊಂಡ ಉಪಕ್ರಮಗಳು ಸ್ಫೂರ್ತಿದಾಯಕ ಎಂದೂ ಅವರು ಹೇಳಿದ್ದಾರೆ.
Comments are closed.