ಅಂತರಾಷ್ಟ್ರೀಯ

46,000 ವರ್ಷ ಹಿಂದಿನ ಹಕ್ಕಿಯ ಮೃತದೇಹ ಹಿಮದಲ್ಲಿ ಪತ್ತೆ!

Pinterest LinkedIn Tumblr


ಪುರಾತನ ಕಾಲದ ಹಕ್ಕಿಯ ದೇಹವೊಂದು ಸೈಬೀರಿಯಾದಲ್ಲಿ ಪತ್ತೆಯಾಗಿದೆ. ಈ ಹಕ್ಕಿಯ ಕಾಲಮಾನ ಒಂದೆರಡು ಸಾವಿರ ವರ್ಷ ಅಲ್ಲ, ಬರೋಬ್ಬರಿ 46,000 ವರ್ಷ…! ಈಶಾನ್ಯ ಸೈಬೀರಿಯಾದ ಬೆಲಾಯ ಗೋರಾ ಗ್ರಾಮದಲ್ಲಿ ಹಿಮದೊಳಗಿದ್ದ ಈ ಹಕ್ಕಿಯ ದೇಹ 2018ರಲ್ಲಿ ಪತ್ತೆಯಾಗಿತ್ತು.

ಈ ಹಕ್ಕಿ ದೇಹವನ್ನು ಕಂಡ ಬೇಟೆಗಾರರು ಇದನ್ನು ತಜ್ಞರಿಗೆ ಒಪ್ಪಿಸಿದ್ದರು. ಇದಾದ ಬಳಿಕ ಸ್ಟಾಕ್ಹೋಮ್ ವಿಶ್ವವಿದ್ಯಾಲಯ ಮತ್ತು ಸ್ವೀಡಿಷ್ ನ್ಯಾಚುರಲ್ ಹಿಸ್ಟರಿ ಸಂಶೋಧಕರು ಈ ಹಕ್ಕಿಯ ಬಗೆಗಿನ ಅಧ್ಯಯನ ಆರಂಭಿಸಿದ್ದರು. ರೇಡಿಯೋ ಕಾರ್ಬನ್ ಡೇಟಿಂಗ್‌ನಲ್ಲಿ ಈ ಹಕ್ಕಿಯ ಕಾಲಮಾನ ಸುಮಾರು 46,000 ವರ್ಷ ಮತ್ತು ಇದರ ಹೆಸರು ಹಾರ್ನ್‌ಡ್‌ ಲಾರ್ಕ್ ಎಂದೂ ತಮ್ಮ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ.

ಈ ರೀತಿಯ ಹಕ್ಕಿಗಳು ಭೂಮಿ ಮೇಲೆ ಸುಮಾರು 44 ರಿಂದ 49 ಸಾವಿರ ವರ್ಷಗಳ ಹಿಂದೆ ಬದುಕಿದ್ದವು. ಪ್ರಸ್ತುತ ಇಷ್ಟು ಸಾವಿರ ವರ್ಷಗಳ ಬಳಿಕ ಸಿಕ್ಕರೂ ಈ ಹಕ್ಕಿಯ ಮೃತದೇಹದ ಇದ್ದಿಲು ಬಣ್ಣದ ಗರಿಗಳು ಇನ್ನೂ ಹಾಗೆಯೇ ಇದ್ದವು. ಹಿಮದ ಆಳದಲ್ಲಿ ಈ ಹಕ್ಕಿಯ ದೇಹ ಇದ್ದುದರಿಂದ ಅದು ಸಂರಕ್ಷಿಸಲ್ಪಟ್ಟಂತೆ ಪತ್ತೆಯಾಗಿತ್ತು.

ಇದು ಹೆಣ್ಣು ಹಕ್ಕಿಯಾಗಿದ್ದು, ನಶಿಸಿ ಹೋಗಿರುವ ಈ ಹಕ್ಕಿಗಳ ಅಧ್ಯಯನಕ್ಕೆ ಇದೊಂದು ಒಳ್ಳೆಯ ಬೆಳವಣಿಗೆಯಾಗಿದೆ.

Comments are closed.