ಅಮೆರಿಕದಲ್ಲಿ ಕೋವಿಡ್ 19 ವೈರಸ್ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 264ಕ್ಕೆ ಏರಿಕೆಯಾಗಿದ್ದು, ಸೋಂಕು ಪೀಡಿತರ ಸಂಖ್ಯೆ 19,658 ಆಗಿದೆ. ಇದರಿಂದಾಗಿ ಅಲ್ಲಿನ ಸರಕಾರ ಮತ್ತು ರಾಜಕೀಯ ನಾಯಕರನ್ನು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಬಗ್ಗೆ ಗಮನ ಹರಿಸುವಂತೆ ಮಾಡಿದೆ. ಜತೆಗೆ ಸೋಂಕಿನಿಂದ ಬಳಲುತ್ತಿರುವ ಆರನೇ ಅತಿದೊಡ್ಡ ರಾಷ್ಟ್ರ ಎಂಬ ಕುಖ್ಯಾತಿಯನ್ನೂ ಪಡೆದುಕೊಂಡಿದೆ.
ಇದೇ ವೇಳೆ, ಕ್ಯಾಲಿಫೋರ್ನಿಯಾದ 4 ಕೋಟಿ ನಾಗರಿಕರು ಮನೆಯ ಒಳಗೇ ಇರುವಂತೆ ಪ್ರಾಂತೀಯ ಸರಕಾರ ಮನವಿ ಮಾಡಿಕೊಂಡಿದೆ. 2.5 ಕೋಟಿ ಮಂದಿಗೆ ಸೋಂಕು ತಗುಲಬಹುದು ಎಂಬ ಎಚ್ಚರಿಕೆ ನಡುವೆಯೇ ಪ್ರಾಂತೀಯ ಗವರ್ನರ್ ಗ್ಯಾವಿನ್ ನ್ಯೂಸಾಮ್ ಈ ಘೋಷಣೆ ಮಾಡಿದ್ದಾರೆ. 8 ವಾರಗಳವರೆಗೆ ಇದು ಜಾರಿಯಲ್ಲಿರುವ ಸಾಧ್ಯತೆ ಇದೆ.
ಮಲೇರಿಯಾ ವಿರೋಧಿ ಲಸಿಕೆ: ಮತ್ತೊಂದು ಮಹತ್ವದ ಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್, ಮಲೇರಿಯಾ ನಿರೋಧಕ ಲಸಿಕೆಯನ್ನು ಕೊರೊನಾ ಚಿಕಿತ್ಸೆಗೆ ಬಳಕೆ ಮಾಡಲು ಅನುಮತಿ ನೀಡಿದ್ದಾರೆ. ಈ ಬೆಳವಣಿಗೆಗಳಿಗೆ ಪೂರಕವಾಗಿ ಅಮೆರಿಕದ ಪ್ರಜೆಗಳು ಸದ್ಯದ ಮಟ್ಟಿಗೆ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವುದು ಬೇಡ ಎಂಬ ಸಲಹೆಯನ್ನೂ ನೀಡಿದ್ದಾರೆ.
Comments are closed.