ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ವೈರಸ್ ಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆದಿರುವ ನಡುವೆಯೇ ಅಮೆರಿಕ ಮೂಲದ ಲ್ಯಾಬೋರೇಟರಿ ಕೋವಿಡ್ 19 ಪರೀಕ್ಷಿಸಲು ಪೋರ್ಟೆಬಲ್ ಕಿಟ್ ಅನ್ನು ಬಿಡುಗಡೆಗೊಳಿಸಿದೆ. ಒಂದು ವೇಳೆ ಯಾರಾದರೂ ಕೋವಿಡ್19 ಪೀಡಿತರಾಗಿದ್ದರೆ ಐದು ನಿಮಿಷಗಳಲ್ಲಿ ರಿಸಲ್ಟ್ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅಬ್ಬೋಟ್ ಲ್ಯಾಬೋರೇಟರಿಸ್ ಹೇಳಿಕೆ ಪ್ರಕಾರ, ಮುಂದಿನ ವಾರದಿಂದ ಆರೋಗ್ಯ ಕೇಂದ್ರಗಳಲ್ಲಿ ಈ ಪೋರ್ಟೆಬಲ್ ಪರೀಕ್ಷಾ ಕಿಟ್ ವಿತರಿಸಲು ಅಮೆರಿಕದ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟೇಷನ್ (ಎಫ್ ಡಿಎ) ಅನುಮತಿ ನೀಡಿರುವುದಾಗಿ ಹೇಳಿದೆ.
“ಇದೊಂದು ಸಣ್ಣ ಎಲೆಕ್ಟ್ರಾನಿಕ್ ಉಪಕರಣವಾಗಿದೆ. ಇದರಲ್ಲಿ ಅಣುಸಂಬಂಧಿ ತಂತ್ರಜ್ಞಾನ ಉಪಯೋಗಿಸಲಾಗಿದೆ. ಆರೋಗ್ಯವಂತ ವ್ಯಕ್ತಿಯನ್ನು ಈ ಸಾಧನದಲ್ಲಿ ಪರೀಕ್ಷಿಸಿದಲ್ಲಿ ಕೇವಲ 13 ನಿಮಿಷಗಳಲ್ಲಿ ನೆಗೆಟೀವ್ ಫಲಿತಾಂಶವನ್ನು ನೀಡಬಲ್ಲದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದೆ.
ಒಂದು ವೇಳೆ ಕೋವಿಡ್ 19 ವೈರಸ್ ಸೋಂಕು ತಗುಲಿದ್ದರೆ ಈ ಪೋರ್ಟೆಬಲ್ ಸಾಧನ ಐದು ನಿಮಿಷಗಳಲ್ಲಿ ಫಲಿತಾಂಶ ನೀಡಲಿದೆ. ಅಲ್ಲದೇ ಇದರಿಂದ ವೈರಸ್ ಇದ್ದ ವ್ಯಕ್ತಿಗಳನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ ಎಂದು ಅಬ್ಬೋಟ್ ಅಧ್ಯಕ್ಷ ರೋಬರ್ಟ್ ಫೋರ್ಡ್ ತಿಳಿಸಿದ್ದಾರೆ.
ಇದೊಂದು ಪೋರ್ಟೆಬಲ್ ಸಾಧನವಾಗಿದ್ದು, ಇದನ್ನು ಹೊರಗೆ ಕೊಂಡೊಯ್ಯಬಹುದಾಗಿದೆ. ವೈರಸ್ ಕೇಂದ್ರ ಸ್ಥಳಗಳಿಗೆ ಈ ಸಾಧನ ಕಳುಹಿಸುವ ನಿಟ್ಟಿನಲ್ಲಿ ಅಬ್ಬೋಟ್ ಮತ್ತು ಎಫ್ ಡಿಎ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಪರೀಕ್ಷಾ ಸಾಧನವನ್ನು ಅಧಿಕೃತವಾಗಿ ಬಳಸಲು ಎಫ್ ಡಿಎ ಅನುಮತಿ ನೀಡಿಲ್ಲ. ಕೇವಲ ಅಧಿಕೃತ ಲ್ಯಾಬ್ ಮತ್ತು ಆರೋಗ್ಯ ಕೇಂದ್ರಗಳಲ್ಲಿ ತುರ್ತಾಗಿ ಬಳಸಲು ಅನುಮತಿ ನೀಡಿರುವುದಾಗಿ ಕಂಪನಿ ಹೇಳಿದೆ.
Comments are closed.