ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ 19 ವೈರಸ್ ಜಾಗತಿಕವಾಗಿ ಅತೀ ವೇಗವಾಗಿ ಹರಡುತ್ತಿರುವುದು ಅಪಾಯದ ಕರೆಗಂಟೆಯಾಗಿದೆ. ಕಳೆದ ಏಳು ದಿನಗಳಲ್ಲಿ ಕೋವಿಡ್ ಪೀಡಿತರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ವರದಿ ತಿಳಿಸಿದೆ.
ಜಗತ್ತಿನಾದ್ಯಂತ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ ಕಳೆದ ಒಂದು ವಾರದಲ್ಲಿ 8,58,785ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 42,151ಕ್ಕೆ ಏರಿಕೆಯಾಗಿದೆ ಎಂದು ಜಾನ್ಸ್ ಹೋಪ್ ಕಿನ್ಸ್ ಯೂನಿರ್ವಸಿಟಿ ಅಂಕಿಅಂಶ ತಿಳಿಸಿದೆ.
ಮಾರ್ಚ್ 24ರಂದು ವಿಶ್ವಾದ್ಯಂತ ಕೋವಿಡ್ 19 ಸೋಂಕಿತರ ಸಂಖ್ಯೆ 4 ಲಕ್ಷದಷ್ಟಿತ್ತು. ಸಾವಿನ ಸಂಖ್ಯೆ 18 ಸಾವಿರದಷ್ಟಿತ್ತು. ಅಮೆರಿಕದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ 19 ರೋಗಿಗಳಿದ್ದು, ಒಟ್ಟು 1,89,035 ಪ್ರಕರಣ ದಾಖಲಾಗಿದೆ. ಸಾವಿನ ಸಂಖ್ಯೆ 3,416ಕ್ಕೆ ದಾಟಿದೆ ಎಂದು ವರದಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶ್ವೇತ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಅಮೆರಿಕ ನಿವಾಸಿಗಳು ಮುಂದಿನ ಎರಡು ವಾರಗಳ ಕಾಲ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಕೋವಿಡ್ ವೈರಸ್ ನಿಂದ ಒಂದು ಲಕ್ಷ ಮಂದಿ ಸಾಯುವ ಸಾಧ್ಯತೆ ಇದೆ. ಮುಂದೆ ಕಠಿಣ ದಿನಗಳನ್ನು ಎದುರಿಸಲು ಅಮೆರಿಕನ್ನರು ಸಿದ್ಧರಾಗಿರಬೇಕು ಎಂದು ತಿಳಿಸಿದ್ದರು.
Comments are closed.