ನವದೆಹಲಿ: ಮಾರಣಾಂತಿಕ ಕೊರೋನಾ ವೈರಸ್ ದಾಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ವಿಶ್ವಾದ್ಯಂತ ಹರಡಿರುವ ಈ ಕೊರೋನಾ ಸೋಂಕಿಗೆ ಅನೇಕ ದೇಶಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಸುಮಾರು 183 ದೇಶಗಳಲ್ಲಿ ಕೊರೋನಾ ವೈರಸ್ ಹರಡಿದೆ. ಜಗತ್ತಿನಾದ್ಯಂತ 12,73,794 ಜನರಿಗೆ ಕೊರೋನಾ ಸೋಂಕು ಹರಡಿರುವುದು ದೃಢಪಟ್ಟಿದೆ. ವಿಶ್ವಾದ್ಯಂತ ಈವರೆಗೆ ಒಟ್ಟು 69,419 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.
ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡಿರುವ ಪೈಕಿ ಮೊದಲ ಸ್ಥಾನದಲ್ಲಿರುವುದು ವಿಶ್ವದ ದೊಡ್ಡಣ್ಣ ಅಮೆರಿಕ. ಹೌದು, ಇಲ್ಲಿ 3,37,274 ಮಂದಿಗೆ ಕೊರೋನಾ ವೈರಸ್ ತಗುಲಿದೆ. ಇನ್ನು ಅದರ ನಂತರ ಸ್ಪೇನ್ನಲ್ಲಿ 1,31,646 ಜನರಿಗೆ ಕೊರೋನಾ ಸೋಂಕು ಹರಡಿದೆ. ಇಟಲಿಯಲ್ಲಿ ಈವರೆಗೆ 1,28,948 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜರ್ಮನಿಯಲ್ಲಿ 1,00,123 ಜನರಿಗೆ ಕೊರೋನಾ ತಗುಲಿದೆ. ಫ್ರಾನ್ಸ್ನಲ್ಲಿ 93,780 ಮಂದಿಗೆ ಕೊರೋನಾ ಸೋಂಕು ಹರಡಿದೆ.
ಇನ್ನು, ಕೊರೋನಾ ಸೋಂಕಿನ ಮೂಲ ಸ್ಥಾನವಾದ ಚೀನಾದಲ್ಲಿ ಈವರೆಗೆ 82,602 ಜನರಿಗೆ ವೈರಸ್ ತಗುಲಿದೆ. ಇರಾನ್ನಲ್ಲಿ ಒಟ್ಟು 58,226 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್ನಲ್ಲಿ 48,440 ಮಂದಿಗೆ ಕೊರೋನಾ ವೈರಸ್ ಹರಡಿದೆ. ಟರ್ಕಿಯಲ್ಲಿ 27,069 ಕೊರೋನಾ ಪ್ರಕರಣಗಳು ದೃಢಪಟ್ಟಿವೆ.
ಅಮೆರಿಕದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ನ್ಯೂಯಾರ್ಕ್ನಲ್ಲಿ 1,23,160 ಮಂದಿಗೆ ಸೋಂಕು ತಗುಲಿದ್ದು, 4159 ಜನರು ಸಾವನ್ನಪ್ಪಿದ್ದಾರೆ. ನ್ಯೂಜರ್ಸಿಯಲ್ಲಿ 37,505 ಜನರಿಗೆ ಕೊರೋನಾ ಸೋಂಕು ಹರಡಿದ್ದು, 917 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಿಚಿಗನ್ನಲ್ಲಿ 15,718 ಜನರಿಗೆ ಕೊರೋನಾ ತಗುಲಿದ್ದು, 617 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 15,151 ಪ್ರಕರಣಗಳು ಪತ್ತೆಯಾದರೆ 349 ಮಂದಿ ಸಾವನ್ನಪ್ಪಿದ್ದಾರೆ.
ಇಟಲಿಯಲ್ಲಿ ಕಳೆದ ಎರಡು ವಾರಕ್ಕೆ ಹೋಲಿಸಿದರೆ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಅಲ್ಲಿ ಈವರೆಗೆ ಒಟ್ಟು 15,877 ಜನರು ಕೊರೋನಾಗೆ ಸಾವನ್ನಪ್ಪಿದ್ದಾರೆ. ಇದೇ ಮೊದಲ ಬಾರಿಗೆ ಕಳೆದ 24 ಗಂಟೆಯಲ್ಲಿ 525 ಜನರು ಮೃತಪಟ್ಟಿದ್ದು, ಇದು ಕಡಿಮೆ ಪ್ರಮಾಣದ್ದಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ಇಟಲಿ 2ನೇ ಹಂತಕ್ಕೆ ಇಳಿಯುತ್ತಿದೆ ಎನ್ನಲಾಗುತ್ತಿದೆ.
Comments are closed.