ನ್ಯೂಯಾರ್ಕ್: ಹಾಂಕಾಂಗ್‌ನಲ್ಲಿ ಎರಡು ನಾಯಿಗಳಿಗೆ ಕೊರೋನಾ ಸೋಂಕು ತಗುಲಿದ್ದು ಸುದ್ದಿಯಾದ ಬೆನ್ನಿಗೆ ಇದೀಗ ಅಮೆರಿಕದ ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಗಳಿಗೂ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.
ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, “ಇಲ್ಲಿನ ಹುಲಿಯೊಂದನ್ನು ಪರೀಕ್ಷಿಸಲಾಗಿದ್ದು, ಅದರ ದೇಹದಲ್ಲಿ COVID-19 ಸೋಂಕು ಇರುವುದು ಪತ್ತೆಯಾಗಿದೆ. ಮೃಗಾಲಯದಲ್ಲಿ ಹುಲಿಗಳ ಉಸ್ತುವಾರಿ ಹೊಂದಿದ್ದ ಪಾಲಕನಿಂದ ಈ ಸೋಂಕು ಹುಲಿಗೆ ತಗುಲಿರುವ ಸಾಧ್ಯತೆ ಇದೆ” ಎಂದು ಸ್ಪಷ್ಟೀಕರಣ ನೀಡಿದೆ.
ಇದಲ್ಲದೆ, ನಾಡಿಯ ಎಂಬ ನಾಲ್ಕು ವರ್ಷದ ಮಲಯನ್ ಹುಲಿ ಮತ್ತು ಅವಳ ಸಹೋದರಿ ಅಜುಲ್ ಮತ್ತು ಎರಡು ಅಮುರ್ ಹುಲಿಗಳು ಹಾಗೂ ಮೂರು ಆಫ್ರಿಕನ್ ಸಿಂಹಗಳು ಸಹ ಒಣ ಕೆಮ್ಮಿನಿಂದ ಬಳಲಿದ್ದು, ಶೀಘ್ರದಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಪ್ರಾಣಿಸಂಗ್ರಹಾಲಯದ ವನ್ಯಜೀವಿ ಸಂರಕ್ಷಣಾ ಸೊಸೈಟಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
“ನಾವು ಮೃಗಾಲಯದಲ್ಲಿರುವ ಹುಲಿ ಮತ್ತು ಸಿಂಹಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಅವುಗಳನ್ನು ಪಾಲನೆ ಮಾಡುತ್ತೇವೆ. ಅವುಗಳ ತೂಕದಲ್ಲಿ ಸ್ವಲ್ಪ ಇಳಿಕೆಯಾದರೂ ಸಹ ಚಿಕಿತ್ಸೆ ನೀಡಲೆಂದೆ ವಿಶೇಷ ತಂಡ ಇದೆ. ಆದರೆ, ಪ್ರಸ್ತುತ ಮೃಗಾಲಯದಲ್ಲಿ ಒಂದು ಹುಲಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಪ್ರಾಣಿಗಳಲ್ಲಿ ಈ ಸೋಂಕು ಯಾವ ರೀತಿ ವರ್ತಿಸುತ್ತದೆ ಎಂಬ ಕುರಿತು ಈವರೆಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ಶೀಘ್ರದಲ್ಲಿ ಹುಲಿ ಸಂಪೂರ್ಣ ಗುಣಮುಖವಾಗುವ ನಿರೀಕ್ಷೆ ಇದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಅಮೆರಿಕದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ನ್ಯೂಯಾರ್ಕ್ನಲ್ಲಿ 1,23,160 ಮಂದಿಗೆ ಸೋಂಕು ತಗುಲಿದ್ದು, 4159 ಜನರು ಸಾವನ್ನಪ್ಪಿದ್ದಾರೆ. ನ್ಯೂಜರ್ಸಿಯಲ್ಲಿ 37,505 ಜನರಿಗೆ ಕೊರೋನಾ ಸೋಂಕು ಹರಡಿದ್ದು, 917 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಮಿಚಿಗನ್ನಲ್ಲಿ 15,718 ಜನರಿಗೆ ಕೊರೋನಾ ತಗುಲಿದ್ದು, 617 ಜನರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ 15,151 ಪ್ರಕರಣಗಳು ಪತ್ತೆಯಾದರೆ 349 ಮಂದಿ ಸಾವನ್ನಪ್ಪಿದ್ದಾರೆ.
Comments are closed.