ವಿಶ್ವಾದ್ಯಂತ ಕೊರೋನಾ ವೈರಸ್ ಅಟ್ಟಹಾಸ ಹೆಚ್ಚುತ್ತಿರುವುದರಿಂದ ಜನರು ನಾನಾ ಈತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಹುತೇಕ ದೇಶಗಳಲ್ಲಿ ಲಾಕ್ಡೌನ್ ಘೋಷಿಸಿರುವುದರಿಂದ ಮನೆಯಿಂದ ಹೊರಬಾರದ ಸ್ಥಿತಿ ಎದುರಾಗಿದೆ. ಇದರಿಂದಾಗಿ ದಿನನಿತ್ಯದ ವಸ್ತುಗಳಿಗೆ, ಊಟಕ್ಕೆ ಪರದಾಡುತ್ತಿರುವವರ ಸಂಖ್ಯೆ ಕಡಿಮೆಯೇನಿಲ್ಲ. ಆದರೆ, ದುಬೈನ ವ್ಯಕ್ತಿಯೋರ್ವನಿಗೆ ಲಾಕ್ಡೌನ್ನಿಂದಾಗಿ ಹೊಸ ಸಮಸ್ಯೆ ಶುರುವಾಗಿದೆ. ತನ್ನ ಇಕ್ಕಟ್ಟಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವಂತೆ ಆತ ಪೊಲೀಸರ ಮೊರೆ ಹೋಗಿದ್ದಾನೆ. ಅಷ್ಟಕ್ಕೂ ಆತನಿಗೆ ಆಗಿರುವ ತೊಂದರೆಯಾದರೂ ಏನು ಅಂತೀರಾ?
ದುಬೈನಲ್ಲಿ ಲಾಕ್ಡೌನ್ ಇರುವುದರಿಂದ ಸಾರ್ವಜನಿಕರಿಗೆ ಏನಾದರೂ ಸಮಸ್ಯೆಯಿದ್ದರೆ ನಾವು ಬಗೆಹರಿಸುತ್ತೇವೆ ಎಂದು ಅಲ್ಲಿನ ಪೊಲೀಸರು ರೇಡಿಯೋ ಕಾರ್ಯಕ್ರಮದಲ್ಲಿ ಲೈವ್ನಲ್ಲಿದ್ದರು. ಲೈವ್ನಲ್ಲಿದ್ದ ಪೊಲೀಸರ ಬಳಿ ಜನರು ತಮ್ಮ ಗೊಂದಲ, ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದರು. ಆಗ ಫೋನ್ ಮಾಡಿದ ವ್ಯಕ್ತಿಯೋರ್ವ ತನ್ನ ವಿಚಿತ್ರವಾದ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ.
ದುಬೈನ ವ್ಯಕ್ತಿಯೋರ್ವ ಇಬ್ಬರನ್ನು ಮದುವೆಯಾಗಿದ್ದ. ಲಾಕ್ಡೌನ್ನಿಂದಾಗಿ ಒಂದು ಹೆಂಡತಿಯ ಮನೆಯಿಂದ ಮತ್ತೊಬ್ಬಳ ಮನೆಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಫೋನ್ನಲ್ಲೇ ಪೊಲೀಸರ ಬಳಿ ಅನುಮತಿ ಕೇಳಿದ ಆ ವ್ಯಕ್ತಿ, ನಾನು ಇಬ್ಬರನ್ನು ಮದುವೆಯಾಗಿದ್ದೇನೆ. ಲಾಕ್ಡೌನ್ನಿಂದಾಗಿ ಇನ್ನೊಬ್ಬಳ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಆಕೆ ಮುನಿಸಿಕೊಂಡಿದ್ದಾಳೆ. ಹೀಗಾಗಿ, ನಾನು ಒಬ್ಬಳ ಮನೆಯಿಂದ ಮತ್ತೊಬ್ಬಳ ಮನೆಗೆ ಹೋಗಲು ಅನುಮತಿ ಕೊಡುತ್ತೀರಾ? ಎಂದು ಕೇಳಿದ್ದಾನೆ.
ಇದನ್ನು ಕೇಳಿದ ಜೋರಾಗಿ ನಕ್ಕ ಪೊಲೀಸ್ ಅಧಿಕಾರಿ ಬ್ರಿಗೇಡಿಯರ್ ಸೈಫ್ ಮುಹೇರ್ ಅಲ್ ಮಜರೋಯ್, ಲಾಕ್ಡೌನ್ನಿಂದ ಹೊರಗೆ ಬರುವಂತಿಲ್ಲ ಎಂಬ ಕಾರಣವನ್ನೇ ಬಳಸಿಕೊಂಡು ಒಬ್ಬಳು ಹೆಂಡತಿಯ ಜೊತೆ ಆರಾಮಾಗಿರಿ. ನಿಮಗೆ ಯಾವ ಹೆಂಡತಿ ಹೆಚ್ಚು ಇಷ್ಟವೋ ಆಕೆಯ ಜೊತೆ ಹೆಚ್ಚು ಸಮಯ ಕಳೆಯಲು ಇದಕ್ಕಿಂತ ಒಳ್ಳೆಯ ಕಾರಣ ಸಿಗಲಾರದು ಎಂದು ನಗೆಚಟಾಕಿ ಹಾರಿಸಿದ್ದಾರೆ.
Comments are closed.