ಉತ್ತರ ಕೊರಿಯಾ.. ಇಡೀ ಪ್ರಪಂಚವೇ ಕೊರೊನಾ ವೈರಸ್ ಕೂಪದಿಂದ ಪಾರಾಗಲು ಪರದಾಡುತ್ತಿದ್ದರೆ ಇದೊಂದು ರಾಷ್ಟ್ರದಲ್ಲಿ ಮಾತ್ರ ಮಹಾಮಾರಿಯ ಭೀತಿಯೂ ಇಲ್ಲ ಆತಂಕವೂ ಇಲ್ಲ. ಬದಲಿಗೆ ಸಾಲು ಸಾಲು ಕ್ಷಿಪಣಿ ಪ್ರಯೋಗವನ್ನು ನಡೆಸುತ್ತಿದೆ.
ಮಂಗಳವಾರ ಉತ್ತರ ಕೊರಿಯಾ ಅತ್ಯಾಧುನಿಕ ಕ್ಷಿಪಣಿಗಳ ಪ್ರಯೋಗವನ್ನು ನಡೆಸಿರುವ ಬಗ್ಗೆ ದಕ್ಷಿಣ ಕೊರಿಯಾ ಮಿಲಿಟರಿ ತಿಳಿಸಿದೆ. ಉತ್ತರ ಕೊರಿಯಾ ಸಿಡಿಸಿದ ಕ್ಷಿಪಣಿಗಳು ಜಪಾನ್ ಸಮುದ್ರದಲ್ಲಿ ಪತನಗೊಂಡಿವೆ ಎಂದು ಹೇಳಲಾಗುತ್ತಿದೆ.
ಉತ್ತರ ಕೊರಿಯಾದ ಪೂರ್ವ ಕರಾವಳಿ ಭಾಗ ಕಂಗ್ವೊನ್ ಪ್ರದೇಶದ ಮಂಚೋನ್ ನಗರದ ಸಮೀಪದಲ್ಲಿ ಮೊದಲು ಕೆಲವು ಸ್ಫೋಟಕಗಳನ್ನು ಸಿಡಿಸಿದ್ದು, ಅದಾಗ ಕೆಲವೇ ಹೊತ್ತಿನಲ್ಲಿ ಮಂಗಳವಾರ ಬೆಳಗಿನ ವೇಳೆಯಲ್ಲಿ ಕ್ಷಿಪಣಿಗಳನ್ನು ಉಡಾವಣೆ ಮಾಡಲಾಗಿದೆ ಎಂದು ದಕ್ಷಿಣ ಕೊರಿಯಾ ಸಿಬ್ಬಂದಿಯ ಜಂಟಿ ಮುಖ್ಯಸ್ಥರ(ಜಸಿಎಸ್) ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಉತ್ತರ ಕೊರಿಯಾದಿಂದ 150 ಕಿ.ಮೀ ದೂರದಲ್ಲಿ ಕ್ಷಿಪಣಿ
ಮಂಗಳವಾರ ಉತ್ತರ ಕೊರಿಯಾದ ಪೂರ್ವ ಕರಾವಳಿ ಭಾಗದಿಂದ ಹಾರಿಸಿದ ಕ್ಷಿಪಣಿಯು 150 ಕಿಲೋ ಮೀಟರ್ ದೂರ ಸಂಚರಿಸಿದ ಜಪಾನ್ ಸಮುದ್ರದಲ್ಲಿ ಪತನಗೊಂಡಿದೆ. ಇದು ಖಾತ್ರಿಯಾದಲ್ಲಿ 2017ರ ಜೂನ್ ನಿಂದ ಈವರೆಗೆ ನಡೆಸಿದ ಕ್ಷಿಪಣಿ ಪ್ರಯೋಗದಲ್ಲಿ ಇದು ಪ್ರಭಾವಶಾಲಿ ಕ್ಷಿಪಣಿ ಎನಿಸುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಕೊರಿಯಾ ಮೇಲೆ ಲಕ್ಷ್ಯ ವಹಿಸಿದ ಅಮೆರಿಕಾ
ಉತ್ತರ ಕೊರಿಯಾದ ಪೂರ್ವ ಕರಾವಳಿ ಭಾಗದಲ್ಲಿರುವ ವೋನ್ಸನ್ ಪ್ರದೇಶದಲ್ಲಿ ಸುಖೋಯ್ ಹಾಗೂ MiG ಫೈಟರ್ ಜೆಟ್ ಗಳು ಹಾರಾಟ ನಡೆಸಿವೆ ಎಂದು ದಕ್ಷಿಣ ಕೊರಿಯಾ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ. ಅಲ್ಲದೇ ಉತ್ತರ ಕೊರಿಯಾ ಮಿಲಿಟರಿ ಮೇಲೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಹಾಗೂ ದಕ್ಷಿಣ ಕೊರಿಯಾ ಗುಪ್ತಚರ ಇಲಾಖೆ ಅಧಿಕಾರಿಗಳು ನಿಗಾ ವಹಿಸಿದ್ದಾರೆ ಎನ್ನಲಾಗಿದೆ.
ಉತ್ತರ ಕೊರಿಯಾ ನಡೆಸಿದ ಕ್ಷಿಪಣಿ ಉಡಾವಣೆ ಹಿಂದಿನ ಉದ್ದೇಶ
ಏಪ್ರಿಲ್.15ರಂದು ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರ ಅಜ್ಜ ಹಾಗೂ ಉತ್ತರ ಕೊರಿಯಾದ ಸಂಸ್ಥಾಪಕ ಅಧ್ಯಕ್ಷ ಕಿಮ್ ಲಿ ಸಂಗ್ 108ನೇ ಜನ್ಮ ದಿನಾಚರಣೆಯಿದೆ. ಇದಕ್ಕೂ ಮುನ್ನ ದಿನವಾದ ಮಂಗಳವಾರ ಕ್ಷಿಪಣಿ ಪ್ರಯೋಗವನ್ನು ನಡೆಸಲಾಗಿದೆ. ಅಲ್ಲದೇ ದಕ್ಷಿಣ ಕೊರಿಯಾ ಸಂಸದೀಯ ಚುನಾವಣೆ ಹೊಸ್ತಿಲಲ್ಲಿ ಈ ರೀತಿ ಕ್ಷಿಪಣಿ ಪ್ರಯೋಗ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
9 ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗಿಸಿದ್ದ ಉತ್ತರ ಕೊರಿಯಾ
ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಜೊತೆಗೆ ಇತ್ತೀಚಿಗಷ್ಟೇ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಣ್ವಸ್ತ್ರ ನಿಶಸ್ತ್ರೀಕರಣದ ಕುರಿತು ಮಾತುಕತೆ ನಡೆಸಿದ್ದರು. ಅದಾಗಿಯೂ ಕಳೆದ ತಿಂಗಳು ಉತ್ತರ ಕೊರಿಯಾ 9 ಬ್ಯಾಲೆಸ್ಟಿಕ್ ಮಿಸೈಲ್ ಗಳನ್ನು ನಾಲ್ಕು ಸುತ್ತು ಪ್ರಯೋಗ ನಡೆಸಿತ್ತು ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಉತ್ತರ ಕೊರಿಯಾದಿಂದ ವಿನಾಶಕಾರಿ ಮಿಸೈಲ್ ಪ್ರಯೋಗ
ಬ್ಯಾಲಿಸ್ಟಿಕ್ ಮಿಸೈಲ್ ಗಳು ಮೊದಲು ಪ್ರಯೋಗಿಸಿದ ಕ್ಷಿಪಣಿಗಿಂತಲೂ ಅಸಮಾನ್ಯ ಹಾಗೂ ವಿನಾಶಕಾರಿ ಶಕ್ತಿಯೊಂದು ಹೊಂದಿವೆ. ನಿರ್ದಿಷ್ಟ ಗುರಿಯ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಈ ಮಿಸೈಲ್ ಗಳು ಹೊಂದಿರುತ್ತವೆ.
Comments are closed.