ಮಾಸ್ಕೋ (ರಷ್ಯಾ): ಕೊರೊನಾ ವಿರುದ್ಧದ ಹೋರಾಟದ ನೇತೃತ್ವ ವಹಿಸಿರುವ ಭಾರತ ಅಗತ್ಯ ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ರವಾನಿಸುತ್ತಿದೆ. ಭಾರತದ ಈ ಸಹಾಯಕ್ಕೆ ಅನೇಕ ದೇಶಗಳು ಧನ್ಯವಾದ ಹೇಳುತ್ತಿದ್ದು, ಈಗ ಈ ಸಾಲಿಗೆ ರಷ್ಯಾ ಕೂಡ ಸೇರಿದೆ. ತಾನೂ ಕೂಡ ಕೊರೊನಾ ಸಂಕಷ್ಟದಲ್ಲಿದ್ದರೂ ಕೊರೊನಾ ವೈರಸ್ ವಿರುದ್ಧ ಹೋರಾಡಲು ತನ್ನ ದೇಶಕ್ಕೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪೂರೈಸಿದ್ದಕ್ಕೆ ರಷ್ಯಾ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ರಷ್ಯಾಗೆ ಸಹಾಯ ಮಾಡಲು ಔಷಧಿ ಪೂರೈಸುವ ಭಾರತದ ನಾಯಕರ ನಿರ್ಧಾರ ಅಭಿನಂದನಾರ್ಹ. ಇದರಿಂದ ಎರಡು ದೇಶಗಳ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವಾಡ್ಲಿಮರ್ ಪುಟೀನ್ ಅವರ ವಕ್ತಾರ ಡ್ಮಿಟ್ರಿ ಪೆಸ್ಕೋವ್ ಹೇಳಿದ್ದಾರೆ.
ರಷ್ಯಾಗೆ ಔಷಧಿ ಕಳುಹಿಸುವ ಭಾರತ ಸರಕಾರದ ನಿರ್ಧಾರಕ್ಕೆ ಮಾಸ್ಕೋ ಅಭಿನಂದನೆ ಸಲ್ಲಿಸಿದೆ. ಭಾರತದ ಈ ತೀರ್ಮಾನ ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಕಾರದ ಒಪ್ಪಂದಕ್ಕೆ ದಾರಿಯಾಗಿದೆ. ಈ ಬಗ್ಗೆ ಮಾರ್ಚ್ 25 ರಂದು ರಷ್ಯಾ ಅಧ್ಯಕ್ಷ ವಾಲ್ಡಿಮರ್ ಪುಟೀನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಟೆಲಿಫೋನ್‌ನಲ್ಲಿ ಚರ್ಚಿಸಿದ್ದರು ಎಂದು ವಕ್ತಾರರು ಹೇಳಿದ್ದಾರೆ.
ಈ ಮೊದಲು ಭಾರತದಿಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪಡೆದಿದ್ದಕ್ಕೆ ಅಮೆರಿಕ, ಬ್ರೆಜಿಲ್, ಇಸ್ರೇಲ್ ಹಾಗೂ ಮಾರಿಷಸ್ ಸೇರಿ ಅನೇಕ ರಾಷ್ಟ್ರಗಳು ಇಂಡಿಯಾಗೆ ಸಲಾಂ ಹೇಳಿದ್ದವು. ಕೊರೊನಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮುಂದಾಳತ್ವ ವಹಿಸಿಕೊಂಡಿರುವ ಭಾರತ ಅಗತ್ಯವಿರುವ ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸುವ ಕೆಲಸವನ್ನು ಮಾಡುತ್ತಿದೆ.
Comments are closed.