ವಾಷಿಂಗ್ಟನ್: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಎಲ್ಲಾ ದೇಶಗಳಿಂದ ವಲಸೆ ಹೋಗುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಆದೇಶ ಹೊರಡಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಸದ್ಯದ ಪರಿಸ್ಥಿತಿಯಲ್ಲಿ ಕಣ್ಣಿಗೆ ಕಾಣದಿರುವ ಶತ್ರುಗಳ ದಾಳಿಯ ಹಿನ್ನೆಲೆಯಲ್ಲಿ ಮತ್ತು ಅಮೆರಿಕಾದ ಪ್ರಜೆಗಳ ಉದ್ಯೋಗಗಳನ್ನು ಕಾಪಾಡುವ ಅಗತ್ಯವಿರುವುದರಿಂದ ಅಮೆರಿಕಕ್ಕೆ ಹೊರದೇಶಗಳಿಂದ ವಲಸೆ ಬರುವವರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರುವ ಆದೇಶಕ್ಕೆ ಸಹಿ ಹಾಕುತ್ತೇನೆ ಎಂದು ತಿಳಿಸಿದ್ದಾರೆ.
In light of the attack from the Invisible Enemy, as well as the need to protect the jobs of our GREAT American Citizens, I will be signing an Executive Order to temporarily suspend immigration into the United States!
— Donald J. Trump (@realDonaldTrump) April 21, 2020
ಈ ಆದೇಶ ಯಾವ ದಿನದಿಂದ ಜಾರಿಗೆ ಬರಲಿದೆ ಮತ್ತು ಎಲ್ಲಿಯವರೆಗೆ ಇರುತ್ತದೆ ಎಂಬ ಬಗ್ಗೆ ಮಾಹಿತಿಯಿಲ್ಲ. ಆದರೆ ಇದರಿಂದ ಅಮೆರಿಕಾದ ಕಾನೂನಾತ್ಮಕ ಮತ್ತು ರಾಜಕೀಯ ವಿಷಯಗಳಿಗೆ ಹಿನ್ನಡೆಯಾಗಲಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಬಗ್ಗೆ ಶ್ವೇತಭವನದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.ಅಧ್ಯಕ್ಷ ಟ್ರಂಪ್ ತಮ್ಮ ವಿಶೇಷ ಆಡಳಿತಾತ್ಮಕ ಅಧಿಕಾರವನ್ನು ಬಳಸಿ ಈ ಆದೇಶ ತರುತ್ತಿದ್ದಾರೆ. ಈ ಹಿಂದೆ ಅವರು ಕೆಲವು ರಾಷ್ಟ್ರಗಳು ಮತ್ತು ಪ್ರದೇಶಗಳಿಗೆ ಪ್ರಯಾಣ ನಿರ್ಬಂಧ ಹೇರಿದ್ದ ಸಂದರ್ಭದಲ್ಲಿ ವಿದೇಶಗಳಲ್ಲಿ ಮತ್ತು ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ವಿರೋಧ ವ್ಯಕ್ತವಾಗಿ ತೀವ್ರ ಗಲಭೆ ಉಂಟಾಗಿತ್ತು.
ಈ ಹೊಸ ಆದೇಶ ಯಾವ ರೀತಿ ಅಲ್ಲಿನ ಸರ್ಕಾರ ಮತ್ತು ದೇಶದ ಒಟ್ಟಾರೆ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂಬುದನ್ನು ನೋಡಬೇಕಾಗಿದೆ.
Comments are closed.