ಅಂತರಾಷ್ಟ್ರೀಯ

ಕೊರೊನಾ: ಇಂಗ್ಲೆಂಡ್‌ನಲ್ಲಿ 492 ಭಾರತೀಯ ಮೂಲದವರ ಸಾವು

Pinterest LinkedIn Tumblr


ಲಂಡನ್‌: ಇಡೀ ವಿಶ್ವದಲ್ಲಿಯೇ ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಮಾರಣಾಂತಿಕವಾಗಿ ಕಾಡುತ್ತಿದೆ. ಅದರಂತೆ ಇಂಗ್ಲೆಂಡ್‌ನಲ್ಲಿ ಇದುವರೆಗೂ 1,38,078 ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 18,738 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಭಾರತ ಮೂಲದ 492 ಮಂದಿ ಮಾರಣಾಂತಿಕ ವೈರಸ್‌ಗೆ ಬಲಿಯಾಗಿದ್ದಾರೆ.

ಬೋರಿಸ್ ಜಾನ್ಸನ್ ಸರ್ಕಾರವು ಗುರುವಾರ ಸುಮಾರು 3 ಲಕ್ಷ ಜನರನ್ನು ಒಳಗೊಂಡ ಪ್ರತಿಕಾಯ ಪರೀಕ್ಷೆಗೆ ‘ಪ್ರಮುಖ ದೀರ್ಘಕಾಲೀನ ಅಧ್ಯಯನ’ ಎಂದು ಘೋಷಿಸಿದೆ. ಈ ಅಧ್ಯಯನದ ಪ್ರಕಾರ ಭಾರತೀಯ ಮೂಲದವರು ಹೆಚ್ಚು ನೆಲೆಸಿರುವ ಬ್ರೆಂಟ್, ಬರ್ನೆಟ್, ಹಾರೋ ಮತ್ತು ಈಲಿಂಗ್‌ನಂತಹ ಲಂಡನ್ ಬರೋಗಳಲ್ಲಿ ಕೊರೊನಾ ವೈರಸ್‌ ಹೆಚ್ಚು ಪರಿಣಾಮ ಬೀರಿದೆ.

ಕೋವಿಡ್ -19 ರ ಹರಡುವಿಕೆಯನ್ನು ಪತ್ತೆಹಚ್ಚಲು ಉದ್ದೇಶಿಸಿರುವ ಈ ಅಧ್ಯಯನವು ಒಂದು ವರ್ಷದವರೆಗೆ ಮುಂದುವರಿಯಲಿದೆ. ಇದು ಪ್ರಸ್ತುತ ಸೋಂಕಿನ ದರದ ಬಗ್ಗೆ ತಿಳುವಳಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

“ಯುಕೆಯಲ್ಲಿ ಜನತೆ ಕನಿಷ್ಠ ವರ್ಷವಿಡೀ ಸಾಮಾಜಿಕ ಅಂತರದೊಂದಿಗೆ ಜೀವಿಸಬೇಕಾಗುತ್ತದೆ. ಜೀವನವು ಇದ್ದಕ್ಕಿದ್ದಂತೆ ಸಹಜ ಸ್ಥಿತಿಗೆ ಮರಳುತ್ತದೆ ಎಂದು ನಿರೀಕ್ಷಿಸುವುದು ‘ಸಂಪೂರ್ಣವಾಗಿ ಅವಾಸ್ತವಿಕ’ ಎಂದು ಇಂಗ್ಲೆಂಡ್‌ನ ಮುಖ್ಯ ವೈದ್ಯಾಧಿಕಾರಿ ಕ್ರಿಸ್ ವಿಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ಲಸಿಕೆಗಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮಾನವ ಪ್ರಯೋಗವು ಗುರುವಾರ ಪ್ರಾರಂಭವಾಗುತ್ತಿದ್ದಂತೆ, ಸಾಂಕ್ರಾಮಿಕ ರೋಗದಿಂದ ಹೊರಬರಲು ಸೂಕ್ತವಾದ ಮಾರ್ಗವೆಂದರೆ ಹೆಚ್ಚು ಪರಿಣಾಮಕಾರಿಯಾದ ಲಸಿಕೆ ಅಥವಾ ಔಷಧಿಗಳನ್ನು ಕಂಡು ಹಿಡಿಯುವುದು ಎಂದು ವಿಟ್ಟಿ ಹೇಳಿದ್ದಾರೆ. ಇದನ್ನು ಪತ್ತೆ ಹಚ್ಚಲು ಕನಿಷ್ಠ ಒಂದು ವರ್ಷವಾದರೂ ಸಮಯ ಅಗತ್ಯವಿದೆ,” ಎಂದು ಅವರು ಎಚ್ಚರಿಸಿದ್ದಾರೆ.

Comments are closed.