ಅಂತರಾಷ್ಟ್ರೀಯ

ಅಮೆರಿಕದ ವಾಷಿಂಗ್ಟನ್‍ನಲ್ಲಿರುವ ಮಹಾತ್ಮ ಗಾಂಧಿಯ ಪ್ರತಿಮೆಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳು

Pinterest LinkedIn Tumblr

ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಹೊರಗಿನ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಕೆಲ ಕಿಡಿಗೇಡಿಗಳು ವಿರೂಪಗೊಳಿಸಿದ್ದಾರೆ.

ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರೇ ಈ ಕೃತ್ಯ ಎಸೆಗಿದ್ದಾರೆ ಎನ್ನಲಾಗಿದೆ. ಅಮೆರಿಕದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.

ಕಪ್ಪು ವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ (45) ಅಮೆರಿಕದ ಮಿನ್ನೆಪೊಲಿಸ್‍ನಲ್ಲಿ ಮೇ 25ರಂದು ಒಂದು ಅಂಗಡಿಯಲ್ಲಿ 20 ಡಾಲರ್ ನೀಡಿ ಸಿಗರೇಟ್ ಖರೀದಿಸಿದ್ದ. ಅಂಗಡಿಯವರು ಆ ನೋಟು ನಕಲಿ ಎಂದು ಗೊತ್ತಾಗಿ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಬಂದಾಗ ಫ್ಲಾಯ್ಡ್ ಇನ್ನೂ ಅಂಗಡಿಯ ಹೊರಗೆ ಆತನ ಕಾರಿನಲ್ಲಿ ಕುಳಿತಿದ್ದ. ಪೊಲೀಸರು ಬಂದವರೇ ಅನಾಮತ್ತಾಗಿ ಆತನನ್ನು ಹಿಡಿದು ಹೊರಗೆಳೆದು, ತಮ್ಮ ಕಾರಿನ ಬಳಿ ಎಳೆದುಕೊಂಡು ಹೋದರು. ಇದನ್ನು ಜಾರ್ಜ್ ಫ್ಲಾಯ್ಡ್ ಪ್ರತಿಭಟಿಸಿದಾಗ ಓರ್ವ ಪೊಲೀಸ್ ಆತನನ್ನು ನೆಲಕ್ಕೆ ಒತ್ತಿಹಿಡಿದು, ಕುತ್ತಿಗೆಯ ಮೇಲೆ ತಮ್ಮ ಮೊಣಕಾಲೂರಿ ನಿಂತಿದ್ದ. ಸುಮಾರು ಎಂಟು ನಿಮಿಷ ಕುತ್ತಿಗೆಯನ್ನು ಒತ್ತಿ ಹಿಡಿದಿದ್ದ ಪರಿಣಾಮ ಜಾರ್ಜ್ ಫ್ಲಾಯ್ಡ್ ಸ್ಥಳದಲ್ಲೇ ಸಾವನ್ನಪ್ಪಿದ್ದ.

ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಅಮೆರಿಕ ಅಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಬೃಹತ್ ಪ್ರತಿಭಟನೆಗಳು ಸ್ಫೋಟಗೊಂಡಿವೆ. ಪ್ರತಿಭಟನಾಕಾರರು ಪ್ಯಾರಿಸ್, ಸಿಡ್ನಿ, ಅರ್ಜೆಂಟೀನಾ, ಬ್ರೆಜಿಲ್, ಕೆನಡಾ ಮತ್ತು ನ್ಯೂಜಿಲೆಂಡ್‍ಗಳಲ್ಲಿ ಬೀದಿಗಿಳಿದಿದ್ದಾರೆ.

Comments are closed.