ಅಂತರಾಷ್ಟ್ರೀಯ

ದಿವಾಳಿಯತ್ತ ವಿಶ್ವದ ಅತ್ಯಂತ ಶ್ರೀಮಂತ ತೈಲ ಉತ್ಪಾದನಾ ರಾಷ್ಟ್ರ …

Pinterest LinkedIn Tumblr

ಕುವೈತ್‌: 2016ರಲ್ಲಿ ಕುವೈತ್‌ನ ಅಂದಿನ ಹಣಕಾಸು ಸಚಿವ ಅನಸ್ ಅಲ್-ಸಲೇಹ್ ಅವರು ತಮ್ಮ ದೇಶದ ಖರ್ಚುಗಳನ್ನು ಕಡಿತಗೊಳಿಸಿ ತೈಲದ ನಂತರ ಜೀವನಕ್ಕೆ ತಯಾರಿ ಮಾಡುವ ಕುರಿತು ಹೇಳಿಕೆ ನೀಡಿದ್ದರು. ತಾವು ಏನೇನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಎಚ್ಚರಿಕೆಯ ಮಾತುಗಳನ್ನೂ ಆಡಿದ್ದರು.

ಆದರೆ ತೈಲ ಉತ್ಪಾದನಾ ರಾಷ್ಟ್ರಗಳಲ್ಲಿಯೇ ಅತ್ಯಂತ ಸಿರಿವಂತ ಎಂಬ ಹೆಗ್ಗಳಿಕೆ ಪಡೆದಿರುವ ಕುವೈತ್‌ನ ಅಧಿಕಾರಿಗಳು ಸೇರಿದಂತೆ ಕೆಲ ವರ್ಗದ ಜನರು ಸಚಿವರಿಗೇ ಅಪಹಾಸ್ಯ ಮಾಡಿದರು.

ಆದರೆ ಅವರ ಹೇಳಿಕೆ ಈಗ ಕೇವಲ ನಾಲ್ಕೇ ವರ್ಷಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಕರೊನಾ ವೈರಸ್‌, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತತ್ತರಿಸಿ ಹೋಗಿರುವ ಇತರ ದೇಶಗಳಂತೆ ಈ ಸಿರಿವಂತ ತೈಲ ದೇಶ ಕೂಡ ಅಕ್ಷರಶಃ ನಲುಗಿ ಹೋಗಿದೆ. ತೈಲ ಬೆಲೆಯಲ್ಲಿ ವಿಪರೀತ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ, ಮುಂದಿನ ದಾರಿ ಕಾಣದೇ ಇದೀಗ ದಿವಾಳಿ ಅಂಚಿನಲ್ಲಿ ಬಂದು ನಿಂತಿದೆ.

ಪೆಟ್ರೋಲಿಯಂ ರಫ್ತು ದೇಶಗಳ ಸಂಘಟನೆ (ಒಪೆಕ್) ಐತಿಹಾಸಿಕ ಕುಸಿತದಿಂದ ಕಂಗೆಟ್ಟು ಹೋಗಿರುವ ಹಿನ್ನೆಲೆಯಲ್ಲಿ, ತನ್ನ ಸಿಬ್ಬಂದಿಗೆ ಸಂಬಳವನ್ನೂ ಕೊಡದ ಪರಿಸ್ಥಿತಿ ಈಗ ಕುವೈತ್‌ಗೆ ಬಾಧಿಸಿದೆ. ಸೌದಿ ಅರೇಬಿಯಾ, ಇರಾನ್, ಇರಾಕ್, ಕುವೈತ್, ಲಿಬಿಯಾ, ಕತಾರ್, ಯುಎಇ, ವೆನಿಜುವೆಲಾ ಮುಂತಾದ ಒಟ್ಟು 15 ಸದಸ್ಯ ರಾಷ್ಟ್ರಗಳಿರುವ ಒಪೆಕ್‌ನಲ್ಲಿ ಸೌದಿ ಅರೇಬಿಯಾದ ಪ್ರಭಾವವೇ ಹೆಚ್ಚು.

ಕರೊನಾ ಬಿಕ್ಕಟ್ಟಿನ ಪರಿಣಾಮ ಬೇಡಿಕೆ ಕುಸಿದಿರುವುದರಿಂದ ಉತ್ಪಾದನೆಯನ್ನು ತಗ್ಗಿಸಿ ದರ ಹೆಚ್ಚಿಸಬೇಕು ಎಂದು ಸೌದಿ ಅರೇಬಿಯಾ, ರಷ್ಯಾಗೆ ಮನವಿ ಸಲ್ಲಿಸಿತ್ತು. ಆದರೆ ಒಪೆಕ್ ಸದಸ್ಯನಲ್ಲದ ರಷ್ಯಾ ಈ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಪ್ರತಿಯಾಗಿ ಸೌದಿ ಅರೇಬಿಯಾ ತನ್ನ ಉತ್ಪಾದನೆಯನ್ನು ಹೆಚ್ಚಿಸಿತ್ತು. ಇದರ ಪರಿಣಾಮ ತೈಲ ದರ ಇಳಿಯತೊಡಗಿತ್ತು. ಕರೊನಾ ಬಿಕ್ಕಟ್ಟಿನ ಬಳಿಕ ಇದೀಗ ದರ ನೆಲಕಚ್ಚಿದೆ.

ಸುಮಾರು 40 ವರ್ಷಗಳ ಹಿಂದೆ ಪ್ರಪಾತಕ್ಕಿಳಿದಿದ್ದ ಆರ್ಥಿಕತೆಯನ್ನು ಮೇಲಕ್ಕೇಳಿಸುವಷ್ಟರಲ್ಲಿಯೇ ಕರೊನಾ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 1982ರಲ್ಲಿ ಕುವೈತ್‌ನ ಆರ್ಥಿಕತೆ ಕುಸಿದುಹೋಗಿತ್ತು. ಇರಾನ್-ಇರಾಕ್ ದೇಶಗಳ ನಡುವೆ ಯುದ್ಧದಿಂದಾಗಿ ಆರ್ಥಿಕತೆ ಪಾತಾಳ ತಲುಪಿತ್ತು. ಅದಾದ ನಂತರ ಸದ್ದಾಂ ಹುಸೇನ್‌ನ ಆಕ್ರಮಣವು 1991ರ ಕೊಲ್ಲಿ ಯುದ್ಧಕ್ಕೆ ಕಾರಣವಾದ ನಂತರ ಕುವೈತ್ ಪುನರ್‌ ನಿರ್ಮಾಣಕ್ಕಾಗಿ ಸಾಕಷ್ಟು ಹೆಣಗಾಡಬೇಕಾಯಿತು. ತೈಲವು ಮತ್ತೆ ಮುಕ್ತವಾಗಿ ಹರಿಯಲು ವರ್ಷಗಳೇ ಬೇಕಾಗಿದ್ದವು.

ಇದೀಗ ಪ್ರಪಂಚದ ಅತ್ಯಂತ ಸಿರಿವಂತ ತೈಲ ಉತ್ಪನ್ನ ದೇಶ ಎಂಬ ಹೆಗ್ಗಳಿಕೆ ಪಡೆಯುವ ನಡುವೆಯೇ ಕರೊನಾ ಬಿಕ್ಕಟ್ಟಿನಿಂದ ಮತ್ತೊಮ್ಮೆ ಆರ್ಥಿಕ ಹಿಂಜರಿತ ಉಂಟಾಗಿದೆ.

 

Comments are closed.