ವಾಷಿಂಗ್ಟನ್: ಕರೊನಾ ವೈರಸ್ ಲಸಿಕೆಯ ಅಭಿವೃದ್ಧಿಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಅಧ್ಯಯನಗಳಲ್ಲಿ ತೊಡಗಿಸಿಕೊಂಡಿದೆ. ಇಡೀ ವಿಶ್ವವನ್ನೇ ದಂಗಾಗಿಸಿರುವ ಈ ಲಸಿಕೆಯನ್ನು ಪ್ರತಿಯೊಂದು ದೇಶಕ್ಕೂ ಹಂಚಬೇಕು ಎನ್ನುವುದು ಆರೋಗ್ಯ ಸಂಸ್ಥೆಯ ಆಶಯ.
ಇದೇ ಕಾರಣದಿಂದ ಲಸಿಕೆ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ 170 ದೇಶಗಳ ಜತೆಗೆ ಮಾತುಕತೆ ನಡೆಸಿದ್ದು, ಪ್ರಯೋಗದಲ್ಲಿ ನಿರತವಾಗಿದೆ.
ಜಪಾನ್, ಜರ್ಮನಿ ಮತ್ತು ಯುರೋಪಿಯನ್ ಕಮಿಷನ್ ಸೇರಿದಂತೆ ಅಮೆರಿಕದ ಸಾಂಪ್ರದಾಯಿಕ ಮಿತ್ರರಾಷ್ಟ್ರಗಳೂ ವಿಶ್ವಸಂಸ್ಥೆಯ ಈ ಪ್ರಯತ್ನವನ್ನು ಬೆಂಬಲಿಸಿವೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ ಸದಾ ಚೀನಾದ ಪರವಾಗಿದೆ ಎಂದು ದೂಷಿಸುತ್ತಿರುವ ಅಮೆರಿಕ ಈಗಲೂ ಕ್ಯಾತೆ ತೆಗೆದಿದ್ದು, ಕರೊನಾ ಲಸಿಕೆ ಅಭಿವೃದ್ಧಿಪಡಿಸಿ ವಿತರಿಸುವ ಜಾಗತಿಕ ಪ್ರಯತ್ನದಲ್ಲಿ ತಾನು ಭಾಗಿಯಾಗುವುದಿಲ್ಲ ಎಂದು ಹೇಳಿದೆ.
ಕರೊನಾ ಲಸಿಕೆ ಅಭಿವೃದ್ಧಿಯು ಚೀನಾ ಪ್ರೇರಿತವಾಗಿದ್ದು, ಇದು ಚೀನಾದಿಂದ ಹೆಚ್ಚು ಪ್ರಭಾವಿತವಾಗಿದೆ ಎಂದು ಜರಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಕ್ಕೂಟದಿಂದ ಹೊರ ನಡೆಯುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ವರದಿಯಾಗಿದೆ.
‘ನಾವು ವೈರಸ್ ವಿರುದ್ಧ ಹೋರಾಡಲು ಸದಾ ಸಿದ್ಧ. ಆದರೆ ಭ್ರಷ್ಟಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಸೇರಲು ಬಯಸುವುದಿಲ್ಲ’ ಎಂದು ಅಮೆರಿಕ ಹೇಳಿದೆ.
ಟ್ರಂಪ್ ಈ ಕ್ರಮಕ್ಕೆ ಹಲವಾರು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಜಾರ್ಜ್‌ಟೌನ್ ವಿಶ್ವವಿದ್ಯಾಲಯದ ಜಾಗತಿಕ ಆರೋಗ್ಯ ಕಾನೂನಿನ ಪ್ರಾಧ್ಯಾಪಕರಾದ ಲಾರೆನ್ಸ್ ಗೋಸ್ಟಿನ್ ಅಮೆರಿಕದ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಗೋ-ಇಟ್-ಅಲೋನ್ ತಂತ್ರವನ್ನು (ಎಲ್ಲವನ್ನೂ ಒಬ್ಬರೇ ಎದುರಿಸುವುದು) ಅನುಸರಿಸುವ ಮೂಲಕ ಅಮೆರಿಕ ದೇಶವು ಬಹುದೊಡ್ಡ ಜೂಜಾಟಕ್ಕೆ ತನ್ನನ್ನು ತೊಡಗಿಸಿಕೊಳ್ಳುತ್ತಿದೆ ಎಂದಿದ್ದಾರೆ.
Comments are closed.