ಮಂಗಳೂರು : ಹದಿನಾಲ್ಕಕ್ಕೂ ಹೆಚ್ಚು ಮಂದಿಯ ತಂಡವೊಂದು ಯುವಕನೋರ್ವನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಶನಿವಾರ ರಾತ್ರಿ ಅಡ್ಯಾರ್ ಕಣ್ಣೂರಿನಲ್ಲಿ ನಡೆದಿದ್ದು, ಮರಳು ಮಾಫಿಯಾಕ್ಕೆ ಸಂಬಂಧಿಸಿದ ತಂಡ ಈ ಹಲ್ಲೆ ನಡೆಸಿರಬೇಕೆಂದು ಶಂಕಿಸಲಾಗಿದೆ.
ಹಲ್ಲೆಗೊಳಗಾದವರನ್ನು ಕಣ್ಣೂರು ಕುಂಡಾಲ ನಿವಾಸಿ ಮುಹಮ್ಮದ್ ಇರ್ಷಾದ್ (26) ಎನ್ನಲಾಗಿದೆ.ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ಇರ್ಷಾದ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಬೆಳಗ್ಗೆ ಈತ ಮನೆಯ ಕಡೆಗೆ ತೆರಳುತ್ತಿದ್ದ ಸಂದರ್ಭ ಕಣ್ಣೂರು ವೃತ್ತದಲ್ಲಿ ಸ್ನೇಹಿತನೋರ್ವನ ಮೇಲೆ ತಂಡವೊಂದು ಹಲ್ಲೆಗೆ ಮುಂದಾಗಿದ್ದುದನ್ನು ಪ್ರಶ್ನಿಸಿದ್ದ. ಈ ವಿಷಯದಲ್ಲಿ ಇರ್ಷಾದ್ ಹಾಗೂ ತಂಡದೊಂದಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ವಿಷಯದಲ್ಲಿ ತಂಡದ ಸದಸ್ಯರು ರಾತ್ರಿ ಹೊತ್ತಿನಲ್ಲಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ತನ್ನನ್ನು ಕಣ್ಣೂರು ವೃತ್ತದಲ್ಲಿ ಬಸ್ಸಿನಿಂದ ಎಳೆದು ರಾಡ್, ಪಂಚ್ ಹಾಗೂ ಚೈನ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಇರ್ಷಾದ್ ಆರೋಪಿಸಿದ್ದಾರೆ.ಫಾರೂಕ್, ಮುತಾಲಿಕ್, ಪುತ್ತ, ಬಶೀರ್ ಮತ್ತಿತರ ಸುಮಾರು 15 ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ಇರ್ಷಾದ್ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಮರಳು ಮಾಫಿಯಾಕ್ಕೆ ಸಂಬಂಧಿಸಿದ ತಂಡವೊಂದು ಈ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಫ್‌ಐ ಖಂಡನೆ : ಆರೋಪಿಗಳ ಬಂಧನಕ್ಕೆ ಆಗ್ರಹ
ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಹಲ್ಲೆಗೊಳಗಾಗಿರುವ ಯುವಕನಿಗೆ ಗಂಭೀರ ಪ್ರಮಾಣದ ಗಾಯಗಳಾಗಿದ್ದು, ಆತ ತುಂಬಾ ಕ್ಲಿಷ್ಟಕರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆದರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 104ರ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಸುಲಭವಾಗಿ ಜಾಮೀನು ಲಭಿಸುವ ಸಾಧ್ಯತೆ ಇದೆ. ಇದೊಂದು ಮಾರಣಾಂತಿಕ ಹಲ್ಲೆ ಪ್ರಕರಣವಾಗಿರುವುದರಿಂದ ಇದನ್ನು ಕೊಲೆ ಯತ್ನ (attempt to murder) ಅಡಿಯಲ್ಲಿ ಕೇಸು ದಾಖಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮರಳು ಮಾಫಿಯದ ತಂಡ ಈ ಹಲ್ಲೆ ನಡೆಸಿದೆ ಎಂಬ ಅನುಮಾನಗಳಿದ್ದು, ಇಂಥಹ ಧಂಧೆಕೋರರ ಜೊತೆ ಕೆಲವು ಪೊಲೀಸರು ಕೈಮಿಲಾಯಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಕೂಲಂಕೂಂಶ ತನಿಖೆಗೆ ಒತ್ತಾಯಿಸಿ ದಕ್ಷ ಹಾಗೂ ಪ್ರಾಮಾಣಿಕರೆಂದೆ ಹೆಸರು ಪಡೆದಂತಹ ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಸೂಕ್ತವಾದ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
Updated News..
ಮಂಗಳೂರು: ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಯುವಕನೋರ್ವನನ್ನು ಬಸ್ಸಿನಿಂದ ಕೆಳಕ್ಕಿಳಿಸಿದ ಗೂಂಡಾಪಡೆ ಆತನ ಮೇಲೆ ಮಾರಣಾಂತಿಕ ಹಲ್ಲೆಗೈದ ಘಟನೆ ನಗರದ ಹೊರವಲಯದ ಕಣ್ಣೂರು ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಗಂಭೀರ ಗಾಯಕ್ಕೊಳಗಾದ ಕಣ್ಣೂರು ನಿವಾಸಿ ಇರ್ಷಾದ್(26) ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಡ್ಯಾರ್, ಕಣ್ಣೂರು ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಿತ್ಯ ನಿರಂತರ ನಡೆಯುತ್ತಲೇ ಇದ್ದು, ನದಿಯ ಒಡಲನ್ನು ಬಗೆದು ಲೋಡ್‌ಗಟ್ಟಲೆ ಮರಳನ್ನು ಸಾಗಾಟ ಮಾಡಲಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರೂ ಇಲಾಖೆ ಸೂಕ್ತ ಕ್ರಮ ಜರುಗಿಸುವಲ್ಲಿ ಮಾತ್ರ ಎಡವುತ್ತಲೇ ಇದೆ. ಕಣ್ಣೂರು ಪರಿಸರದಲ್ಲಿ ಮರಳು ದಂಧೆಕೋರರ ಗೂಂಡಾಗಿರಿ ಮಿತಿಮೀರಿದ್ದು, ಈ ಬಗ್ಗೆ ಇರ್ಷಾದ್ ಪ್ರಶ್ನಿಸಿದ್ದ ಮಾತ್ರವಲ್ಲದೆ ದಂಧೆಕೋರರ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ. ಇದರಿಂದ ಕೆರಳಿದ್ದ ಮರಳು ದಂಧೆಕೋರರು ಇರ್ಷಾದ್ ಮೇಲೆ ಹಲ್ಲೆಗೈದಿದ್ದಾರೆ.
ಇರ್ಷಾದ್ ಖಾಸಗಿ ಬಸ್ಸಿನಲ್ಲಿ ಕಣ್ಣೂರು ಬಳಿ ಬರುತ್ತಿದ್ದಾಗ ತಡೆದು ನಿಲ್ಲಿಸಿದ 10ರಿಂದ 14 ಮಂದಿಯಿದ್ದ ಗೂಂಡಾಗಳ ಗುಂಪು ಬಸ್ಸಿನೊಳಕ್ಕೆ ನುಗ್ಗಿದ್ದು, ಪ್ರಯಾಣಿಕರು ನೋಡುತ್ತಿದ್ದಂತೆಯೇ ಇರ್ಷಾದ್‌ನನ್ನು ಹೊರಕ್ಕೆಳೆದು ನಡುಮಾರ್ಗದಲ್ಲಿ ನಿಲ್ಲಿಸಿ ರಾಡ್, ಪಂಚ್ ಹಾಗೂ ದೊಣ್ಣೆಯಿಂದ ಆತನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಬಸ್ಸಿನಲ್ಲಿದ್ದವರು ಹಲ್ಲೆಯನ್ನು ತಡೆಯಲು ಬಂದಿದ್ದು, ಅವರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಬೆನ್ನು, ಹೊಟ್ಟೆ, ಮುಖದ ಭಾಗಕ್ಕೆ ಗಂಭೀರ ಗಾಯಗೊಂಡ ಇರ್ಷಾದ್‌ನನ್ನು ಸ್ಥಳದಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇರ್ಷಾದ್‌ನನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಕೊಲೆಯತ್ನ ಪ್ರಕರಣವನ್ನು ‘ಕಾಣದ ಕೈ’ಗಳ ಒತ್ತಡಕ್ಕೆ ಮಣಿದು ಪೊಲೀಸರು ಸುಲಭವಾಗಿ ಜಾಮೀನು ದೊರಕುವ ಸೆ.104ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗೆ ವರದಾನವಾಗಿದೆ. ಗೂಂಡಾಗಳು ಪೊಲೀಸ್ ಠಾಣೆಯಲ್ಲಿ ರಾಜಮರ್ಯಾದೆ ಪಡೆಯುವುದು ಬಯಲಾಗಿದ್ದು, ಸಂತ್ರಸ್ತ ಯುವಕನಿಗೆ ನ್ಯಾಯ ಸಿಗದಂತಾಗಿದೆ ಎಂಬ ಆರೋಪ ಕೂಡಾ ಕೇಳಿಬಂದಿದೆ.
ಪೊಲೀಸ್ ವಿರುದ್ಧ ಪ್ರತಿಭಟನೆಗೆ ಸಿದ್ಧತೆ
ಅಕ್ರಮ ಮರಳುಗಾರಿಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿದ್ದು, ಇತ್ತೀಚೆಗೆ ತುಂಬೆ ವೆಂಟೆಡ್ ಡ್ಯಾಂ ಸಮೀಕ್ಷೆಗೆ ತೆರಳಿದ್ದ ಜಿಲ್ಲಾಧಿಕಾರಿ ಅವರು ಮರಳುಗಾರಿಕೆ ನಡೆಯುತ್ತಿದ್ದುದನ್ನು ಕಣ್ಣಾರೆ ಕಂಡಿದ್ದಾರೆ. ಆದರೂ ದಂಧೆಯನ್ನು ಹತ್ತಿಕ್ಕಲು ಮುಂದಾಗಿಲ್ಲ. ಅಕ್ರಮ ದಂಧೆಯ ವಿರುದ್ಧ ದೂರು ನೀಡಲು ಮುಂದಾಗುವವರನ್ನು ಕೊಲೆಗೈಯುವ ಮಟ್ಟಕ್ಕೆ ಗೂಂಡಾಗಳು ಮುಂದಾಗಿರುವುದು ಪೊಲೀಸ್ ಇಲಾಖೆಯ ಮೇಲೆ ನಾಗರಿಕರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ.
ಇರ್ಷಾದ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದೂ ಪ್ರಕರಣ ಬದಲಾಯಿಸಿರುವ ಪೊಲೀಸ್ ಅಧಿಕಾರಿ ಷರೀಫ್ ಹಾಗೂ ಒ.ಒ.ಮಡ್ಡಿ ಅವರು ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಡಿವೈಎಫ್‌ಐ ಮುಖಂಡ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ. ಪೊಲೀಸರ ಇಂತಹ ಕ್ರಿಮಿನಲ್ ಒಡನಾಟ, ಅನ್ಯಾಯದ ವಿರುದ್ದ ಕಮಿಷನರ್ ಅವರಿಗೆ ಮನವಿ ಸಲ್ಲಿಸಿರುವ ಡಿವೈಎಫ್‌ಐ ಮುಂದಿನ ದಿನಗಳಲ್ಲಿ ಕ್ರಿಮಿನಲ್ ಸಖ್ಯ ಹೊಂದಿರುವ, ಭ್ರಷ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.
Comments are closed.