ಕರಾವಳಿ

ಮಂಗಳೂರಿನ ಎರಡು ಲಾಡ್ಜ್‌ಗಳಿಗೆ ಪೊಲೀಸರ ದಾಳಿ : ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ನಾಲ್ವರ ಸೆರೆ

Pinterest LinkedIn Tumblr

prost

ಮಂಗಳೂರು, ಜೂ. 10: ನಗರದ ಹೊಟೇಲ್ ಲಾಡ್ಜ್‌ಗಳಿಗೆ ದಾಳಿ ನಡೆಸಿರುವ ಉತ್ತರ ಠಾಣಾ ಪೊಲೀಸರು ವೇಶ್ಯಾವಾಟಿಕೆ ಜಾಲಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ.

ಗುರುವಾರ ನಗರದ ಮೈದಾನ ರಸ್ತೆಯಲ್ಲಿರುವ ಮೈತ್ರಿ ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಬಂದರು ಠಾಣಾ ಪೊಲೀಸರು ದಾಳಿ ನಡೆಸಿ ಹೋಟೆಲ್‌ನಲ್ಲಿ ಯುವತಿಯೊಂದಿಗಿದ್ದ ಕುಂದಾಪುರ ತ್ರಾಸಿಯ ನಾಗಪ್ಪಯ್ಯ (40) ಮತ್ತು ವೇಶ್ಯಾವಾಟಿಕೆಗೆ ಸಹಕರಿಸಿದ ಲಾಡ್ಜ್‌ನ ಮ್ಯಾನೇಜರ್ ಲಕ್ಷ್ಮೀಕಾಂತ್ ಎಂಬಿಬ್ಬರನ್ನು ಬಂಧಿಸಿದ್ದಾರೆ.

ಮಂಗಳೂರಿನ ನೆಹರೂ ಮೈದಾನ ಸಮೀಪದ ಒಂದನೇ ಆಡ್ಡ ರಸ್ತೆಯಲ್ಲಿ ಕಾರ್ಯಾಚರಿಸುತ್ತಿರುವ ಮೈತ್ರಿ ಲಾಡ್ಜ್‌‌ನ 110 ನೇ ನಂಬರಿನ ಕೊಠಡಿಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರ್ಯಚರಣೆಯಲ್ಲಿ ಬಂದರು ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ್, ಎಎಸ್ಸೈ ಶೋಭಾ, ಹೆಡ್‌ಕಾನ್‌ಸ್ಟೇಬಲ್ ಪುಷ್ಪರಾಣಿ, ಸಿಬ್ಬಂದಿಯಾದ ರೇಷ್ಮಾ ಮತ್ತು ಮೋಹನ್ ಪಾಲ್ಗೊಂಡಿದ್ದರು. ಈ ಬಗ್ಗೆ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇನ್ನೊಂದು ಪ್ರಕರಣದಲ್ಲಿ ನಗರದ ಪಾಂಡೇಶ್ವರದ ಕರುಣಾ ಲಾಡ್ಜ್‌‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪಾಂಡೇಶ್ವರ ಪೊಲೀಸರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ನಿರತರಾಗಿದ್ದ ಕೇರಳದ ಕ್ಯಾಲಿಕಟ್ ನಿವಾಸಿ ಶಿವಾನಂದನ್ (45) ಮತ್ತು ಪುತ್ತೂರಿನ ಅಲಂಗಾರು ಗ್ರಾಮದ ನೆಕ್ಕಿಲಾಡಿ ನಿವಾಸಿ ಮಾಧವ (31) ಎಂಬವರನ್ನು ಬಂಧಿಸಿದ್ದಾರೆ.

ನಗರದ ಆರ್ ಟಿಓ ಕಚೇರಿ ಸಮೀಪದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್‌‌ಗೆ ಗುರುವಾರ ಮಧ್ಯಾಹ್ನ 12:30ರ ಸುಮಾರಿಗೆ ದಾಳಿ ನಡೆಸಿದ ಪಾಂಡೇಶ್ವರ ಠಾಣಾ ಪೊಲೀಸರು ಅಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಜಾಲವನ್ನು ಪತ್ತೆಹಚ್ಚಿ ಇಬ್ಬರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆರೋಪಿಗಳಿಂದ ರೂ. ೧.೩೫೦ನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಉತ್ತರ ಠಾಣಾ ಇನ್‌ಸ್ಪೆಕ್ಟರ್ ಶಾಂತರಾಮ್, ಪಾಂಡೇಶ್ವರ ಠಾಣಾ ಎಸ್ಸೈ ಮೊಹಮ್ಮದ್ ಶರೀಫ್, ಎ‌ಎಸೈ ಆನಂತ ಮುರ್ಡೆಶ್ವರ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರನ್ನು ಜೈಲಿಗಟ್ಟಿದ್ದ ಕೋರ್ಟ್ :

ವೇಶ್ಯಾವಾಟಿಕೆ ಜಾಲಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟ ನಾಲ್ವರನ್ನು ನ್ಯಾಯಾಲಕ್ಕೆ ಹಾಜಾರುಪಡಿಸಲಾಗಿದ್ದು, ನಾಲ್ಕು ಆರೋಪಿಗಳಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Comments are closed.