ಮಂಗಳೂರು, ಜೂ.10: ಕಂಟೈನರ್ ಲಾರಿಯೊಂದು ರಿಕ್ಷಾ ಮತ್ತು ಮಾರುತಿ 800 ಕಾರಿಗೆ ಢಿಕ್ಕಿ ಹೊಡೆದು ಉಂಟಾದ ಭೀಕರ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಮಂಗಳೂರು ಹೊರವಲಯದ ಫರಂಗಿಪೇಟೆ ಮತ್ತು ವಳಚ್ಚಿಲ್ ಮಧ್ಯದ ಅರ್ಕುಲದಲ್ಲಿ ಸಂಭವಿಸಿದೆ.
ಬಿ.ಸಿ.ರೋಡ್ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಲಾರಿಯು ವಳಚ್ಚಿಲ್ ಸಮೀಪದ ಯಶಸ್ವಿ ಹಾಲ್ ಬಳಿ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ನ ಮೇಲೇರಿ ವಿರುದ್ಧ ಬದಿಯ ರಸ್ತೆಯ ಮೂಲಕ ಆಗಮಿಸುತ್ತಿದ್ದ ಮಾರುತಿ 800 ಮತ್ತು ಆಟೊರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ರಿಕ್ಷಾ ಕಂಟೈನರ್‌ನಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ. ರಿಕ್ಷಾದಲ್ಲಿ ಬಂಟ್ವಾಳ ಸಮೀಪದ ನಂದಾವರದ 6 ಮಂದಿ ಪ್ರಯಾಣಿಸುತ್ತಿದ್ದು, ಈ ಪೈಕಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ರಿಕ್ಷಾ ಚಾಲಕ ಸಜಿಪ ಮುನ್ನೂರಿನ ಮುಹಮ್ಮದ್ ನಝೀರ್(24), ರಿಕ್ಷಾದಲ್ಲಿದ್ದ ಮುಹಮ್ಮದ್ ಹನೀಫ್ (21), ಬಂಟ್ವಾಳ ತಾಲೂಕು ಪುದು ಗ್ರಾಮದ ಪಾಡಿ ನಿವಾಸಿ 10ನೇ ತರಗತಿ ವಿದ್ಯಾರ್ಥಿ ಸಿನಾನ್ ಮಾರಿಪಳ್ಳ (16), ನಂದಾವರದ ಮೊಹಮ್ಮದ್ ಸಲಾಮ್ (24) ಹಾಗೂ ಕಾರುಚಾಲಕ ಹರೇಕಳ ಶಾಂತಿನಗರದ ಅಹ್ಮದ್ ಹುಸೈನ್( 32) ಮತ್ತು ಕಾರಿನಲ್ಲಿದ್ದ ಅಡ್ಯಾರ್ ಬೆರ್ಪುಗುಡ್ಡೆಯ ಮೊಹಮ್ಮದ್ ಉನ್ನೈಸ್, (20) ಎಂದು ಗುರುತಿಸಲಾಗಿದೆ.
ನಂದಾವರದ ನಿವಾಸಿಗಳಾದ ಶೌಕತ್ ಆಲ್ (20) ಮತ್ತು ತೌಶಿತ್ ಗಾಯಾಳುಗಳು. ಅವರ ಸ್ಥಿತಿ ಚಿಂತಾಜನಕವಾಗಿದೆ.
ಘಟನೆಗೆ ಕಂಟೈನರ್ ಚಾಲಕನ ನಿರ್ಲಕ್ಷವೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಕ್ರೋಶಿತ ಜನರು ಕಂಟೈನರ್ ಲಾರಿಗೆ ಬೆಂಕಿ ಹಚ್ಚಲೂ ಮುಂದಾಗಿದ್ದು, ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಸ್ಥಳದಲ್ಲಿ ಬಂಟ್ವಾಳ, ಮಂಗಳೂರು ಗ್ರಾಮಾಂತರ ಮತ್ತು ಅಗ್ನಿಶಾಮಕದಳ ಸಿಬ್ಬಂದಿ ಬೀಡು ಬಿಟ್ಟಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
Comments are closed.