ಮಂಗಳೂರು,ಜೂನ್.15: ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಕೋಲಾರದಲ್ಲಿ ನಿರಂತರ ಹೋರಾಟಕ್ಕೆ ಚಾಲನೆ ನೀಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಮಂಡಳಿ ಹಾಗೂ ಚಿತ್ರರಂಗದ ನಟ-ನಟಿಯರು ಕೋಲಾರದಲ್ಲಿ ಮೊನ್ನೆ ಬೃಹತ್ ರ್‍ಯಾಲಿ ಮತ್ತು ಸಭೆ ನಡೆಸಿದ್ದಾರೆ.
ಕೋಲಾರ ಜಿಲ್ಲೆ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ನಿರ್ಮಿಸಿರುವ ನಿರಂತರ ಹೋರಾಟ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿತ್ರರಂಗದ ಗಣ್ಯರು, ಶಾಶ್ವತ ನೀರಾವರಿ ಸೌಕರ್ಯ ದೊರಕುವವರೆಗೆ ಹೋರಾಟ ಮುಂದುವರಿಸಿ ಎಂದು ಸ್ಥಳೀಯರನ್ನು ಹುರಿದುಂಬಿಸಿದ್ದಾರೆ. ‘ನಾವಿರುವುದೇ ನಿಮಗಾಗಿ, ನಾಡಿರುವುದೇ ನಮಗಾಗಿ’ ಎಂದು ಹಾಡು ಹಾಡಿದ ನಟ ಶಿವರಾಜ್ ಕುಮಾರ್ ಅವರಂತೂ, ನಾವು ಇಷ್ಟು ವರ್ಷ ಇಲ್ಲಿಗೆ ಬಾರದೆ ತಪ್ಪು ಮಾಡಿದ್ದೇವೆ ಎಂಬ ರೀತಿ ಮಾತನಾಡಿದ್ದಾರೆ.
ಚಿನ್ನದ ನಾಡಿಗೆ ನೀರಿನ ಸಮಸ್ಯೆ ನಿವಾರಣೆಗೆ ಆಗ್ರಹಿಸುವ ಸಲುವಾಗಿ ನಾವು ಬರಬೇಕಾಯಿತಲ್ಲ ಎಂದು ದುಃಖವಾಗುತ್ತಿದೆ ಎಂದಿರುವ ಶಿವರಾಜ್‌ಕುಮಾರ್, ಕಿವುಡಾಗಿರುವ ಸರ್ಕಾರಕ್ಕೆ ಕೇಳಿಸುವಂತೆ, ನೀರು ಕೊಡಿ ಎಂಬ ಕೂಗು ಹಾಕಿ. ಚಿನ್ನದ ನಾಡು ಬರಡಾಗುವುದು ಬೇಡ ಎಂದಿದ್ದಾರೆ.
ಬಯಲು ಸೀಮೆಯವರ ಪ್ರತಿ ಸಮಸ್ಯೆಗೂ ಸ್ಪಂದಿಸುವ ಚಿತ್ರರಂಗದವರು, ಕರಾವಳಿ ಪ್ರದೇಶದ ಸಮಸ್ಯೆಯತ್ತಲೂ ಗಮನ ಹರಿಸಬೇಕಾಗಿದೆ. ಕನ್ನಡ ಚಲನ ಚಿತ್ರಗಳನ್ನು ಕೇವಲ ಬಯಲು ಸೀಮೆಯವರು ಮಾತ್ರ ನೋಡುವುದಲ್ಲ. ದ.ಕ., ಉಡುಪಿ, ಕಾಸರಗೋಡು ಸೇರಿದಂತೆ ಸಮಸ್ತ ತುಳುನಾಡಿನವರು ಚಿತ್ರ ನೋಡಿ ಪ್ರೋತ್ಸಾಹಿಸಿರುತ್ತಾರೆ. ಅಲ್ಲದೆ ಎಷ್ಟೋ ಚಿತ್ರಗಳು ಇಲ್ಲಿ ಶತದಿನೋತ್ಸವ ಆಚರಿಸಿವೆ.
ಈ ನಿಟ್ಟಿನಲ್ಲಿ ಚಿತ್ರರಂಗದ ಮಂದಿ, ಇಲ್ಲಿ ನಡೆಯುತ್ತಿರುವ ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧದ ಚಳವಳಿಗೂ ಸಹಕಾರ ನೀಡಬೇಕಾಗಿದೆ. ಯೋಜನೆ ವಿರುದ್ಧ ಕರಾವಳಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಬೇಕಿದೆ. ಇಲ್ಲದಿದ್ದರೆ ಇಲ್ಲಿನ ಜನತೆಯ ಕನ್ನಡ ಚಿತ್ರಗಳನ್ನು ಬಹಿಷ್ಕರಿಸಬೇಕಾದ ಅನಿವಾರ್ಯತೆ ಎದುರಾದೀತು. ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ತುಳುನಾಡಿನ ಜನತೆಯ ಪಾತ್ರ ಮಹತ್ವದ್ದಾಗಿದೆ. ದುಡ್ಡು ಕೊಟ್ಟು ಸಿನಿಮಾ ನೋಡುವ ಇಲ್ಲಿಯ ಜನತೆಯ ಅನ್ನದ ಋಣವೂ ಕನ್ನಡ ಚಿತ್ರರಂಗದ ಮೇಲಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ.
ಅವರಿಗೆ ನಾವು ಬೇಡವಾದರೆ ಮತ್ತೆ ನಮಗ್ಯಾಕೆ ಅವರು… ? ಹಾಗಾಗಿ ನಾವು ಕನ್ನಡ ಚಿತ್ರಗಳನ್ನು ವೀಕ್ಷಿಸುವ ಜೌಚಿತ್ಯ ಏನು? ಆದ್ದರಿಂದ ಕೂಡಲೇ ಚಿತ್ರರಂಗದ ಮಂದಿ ಇಲ್ಲಿಯ ಹೋರಾಟಕ್ಕೂ ಧ್ವನಿಗೂಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರಗಳನ್ನು ತುಳುನಾಡಿನಲ್ಲಿ ಬಹಿಷ್ಕರಿಸಬೇಕಾದೀತು. ಎಂದು ತುರವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು ಎಚ್ಚರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ತುರವೇ ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರಾವ್ ಕಡಬ, ಜಿಲ್ಲಾದ್ಯಕ್ಷರಾದ ಹಮೀದ್ ಹಸನ್ ಮಾಡೂರು, ಸಿರಾಜ್ ಅಡ್ಕರೆ, ಮೊಹನ್ ದಾಸ್ ರೈ, ಜರಾಲ್ಡ್ ಟವರ್‍ಸ್, ಆನಂದ್ ಅಮೀನ್ ಅಡ್ಯಾರ್, ಹರೀಶ್‌ಕುಮಾರ್, ರಕ್ಷಿತ್ ಕೆ. , ಶ್ರೀಕಾಂತ್ ಸಾಲಿಯಾನ್, ರಮೇಶ್ ಪೂಜಾರಿ ಶೀರೂರು, ರಾಜೇಶ್ ಕುತ್ತಾರ್, ಜ್ಯೋತಿಕಾ ಜೈನ್, ಜೆ.ಇಬ್ರಾಹಿಂ ಜಪ್ಪು, ಚಂದ್ರಹಾಸ್ ರೈ, ಜನಾರ್ದನ್, ನವಾಝ್, ಮುಂತಾದವರು ಉಪಸ್ಥಿತರಿದ್ದರು.
Comments are closed.