ಮಂಗಳೂರು, ಜೂ.16: ನಗರದ ಮ.ನ.ಪಾ ವ್ಯಾಪ್ತಿಯಲ್ಲಿ ಕಾರ್ಯಪ್ರವೃತ್ತಿಯಲ್ಲಿರುವ ಉದ್ದಿಮೆದಾರರು ಜೂನ್ ತಿಂಗಳ ಅಂತ್ಯದೊಳಗೆ ಹಳೆ ಪರವಾನಿಗೆ ನವೀಕರಣ ಅಥವಾ ಹೊಸ ಪರವಾನಿಗೆಯನ್ನು ಮಾಡಿಸಿಕೊಳ್ಳಬೇಕು ಎಂದು ಪಾಲಿಕೆಯ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಸೂಚಿಸಿದ್ದಾರೆ.
ನಗರದ ಪಾಲಿಕೆ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 29,100 ಉದ್ದಿಮೆದಾರರು ಪರವಾನಗಿಯನ್ನು ನವೀಕರಿಸಿದ್ದು, 740 ಸಂಖ್ಯೆಯ ಉದ್ದಿಮೆಗಳನ್ನು ರದ್ದುಪಡಿಸಲಾಗಿದೆ. ಉಳಿದಂತೆ 8,799 ಉದ್ದಿಮೆಗಳು ಪರವಾನಗಿಯನ್ನು ನವೀಕರಿಸಲು ಬಾಕಿ ಇದೆ ಎಂದರು.
ಪರವಾನಿಗೆಯನ್ನು ಪಡೆಯದ ಅಥವಾ ನವೀಕರಿಸದ ಉದ್ದಿಮೆಗಳನ್ನು ಕಾನೂನು ಪ್ರಕಾರ ಮುಚ್ಚಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಅರೋಗ್ಯ ವಿಭಾಗ ಮತ್ತು ಕಂದಾಯ ವಿಭಾಗದಿಂದ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಸ್ಥಾಯಿ ಸಮಿತಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರಾಜೇಶ್, ರಜನೀಶ್, ಲತಾ ಸಾಲ್ಯಾನ್, ಉಪ ಆಯುಕ್ತ ಗೋಕುಲ್ದಾಸ್ ನಾಯಕ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.