*ಯೋಗೀಶ್ ಕುಂಭಾಸಿ
ಕುಂದಾಪುರ: ಅವರಿಬ್ಬರು ಬಾಲ್ಯದಿಂದಲೂ ಆತ್ಮೀಯ ಗೆಳೆಯರು. ಶುಕ್ರವಾರ ರಾತ್ರಿವರೆಗೂ ಅವರಿಬ್ಬರು ಜೀವಕ್ಕೆ ಜೀವ ಕೊಡುವಷ್ಟರ ಮಟ್ಟಿಗೆ ಆತ್ಮೀಯರು. ಆದರೇ ಇಬ್ಬರ ನಡುವೆ ಅದೇನಾಯಿತೋ ಏನೋ…ರಾತ್ರಿ ಗೆಳೆಯನಿಂದಲೇ ಇನ್ನೊಬ್ಬ ಗೆಳೆಯನ ಕೊಲೆಯಾಗಿತ್ತು. ಶಿಕಾರಿಗೆ ತೆರಳು ಹೊರಟ ಇವರಲ್ಲಿ ಒಬ್ಬ ಶಿಕಾರಿಯಾಗಿ ಹೋಗಿದ್ದ. ಮಳೆಯ ಅಬ್ಬರದ ನಡುವೆ ಆ ಭಾಗದಲ್ಲಿ ಗುಂದಿನ ಸದ್ದು ಅಬ್ಬರಿಸಿತ್ತು. ಅಲ್ಲಿ ನಡೆಯಬಾರದ್ದು ನಡೆದೇ ಹೋಗಿತ್ತು.
(ಕೊಲೆಯಾದ ಪ್ರಶಾಂತ್ ಶೆಟ್ಟಿ)
(ಕೊಲೆ ಆರೋಪಿ ಅಂಕಿತ್ ಶೆಟ್ಟಿ)
ಬೈಂದೂರಿನ ಹೇರೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮ್ಯಾಕೋಡು ಎಂಬಲ್ಲಿ ಶುಕ್ರವಾರ ತಡರಾತ್ರಿ ಈ ದುರ್ಘಟನೆ ನಡೆದಿದೆ. ಬೈಂದೂರು ಖಂಬದಕೋಣೆ ಸಮೀಪದ ಹಳಗೇರಿ ನಿವಾಸಿ ಪ್ರಶಾಂತ್ ಶೆಟ್ಟಿ(23) ಸ್ನೇಹಿತನಿಂದಲೇ ಕೊಲೆಯಾದ ದುರ್ದೈವಿ. ಈತನ ಸ್ನೇಹಿತ ಅಂಕಿತ್ ಶೆಟ್ಟಿ(23) ಎಂಬತನೇ ಕೊಲೆ ಮಾಡಿದ ಆರೋಪ ಹೊತ್ತಿದ್ದಾನೆ.
ವಾರದ ಹಿಂದಷ್ಟೇ ಊರಿಗೆ ಬಂದಿದ್ದ…..
ಹಳಗೇರಿ ನಿವಾಸಿಗಳಾದ ಪ್ರಶಾಂತ್ ಶೆಟ್ಟಿ ಹಾಗೂ ಅಂಕಿತ್ ಬಾಲ್ಯ ಸ್ನೇಹಿತರು. ಒಟ್ಟಿಗೆ ವಿದ್ಯಾಭ್ಯಾಸವನ್ನು ಮಾಡಿಮುಗಿಸಿದವರು. 9ನೇ ತರಗತಿ ವಿದ್ಯಾಭ್ಯಾಸ ಮುಗಿಸಿದ ಪ್ರಶಾಂತ್ ಹೊಟ್ಟೆಪಾಡಿಗಾಗಿ ಬೆಂಗಳೂರು ಸೇರಿಕೊಂಡು ಸಹೋದರನ ಬೇಕರಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದು ಅಂಕಿತ್ ಮಾತ್ರ ಊರಲ್ಲಿಯೇ ವಾಸವಿದ್ದ. ಬೆಂಗಳುರಿನಿಂದ ಆಗ್ಗಾಗೆ ಊರಿಗೆ ಬರುತ್ತಿದ್ದ ಪ್ರಶಾಂತ್ ಅತೀಯಾಗಿ ಸೇರುತ್ತಿದ್ದುದು ಮಾತ್ರ ಅಂಕಿತ್ ಜೊತೆಗೆ. ಆತನ ಬೈಕಿನಲ್ಲಿಯೇ ಸುತ್ತಾಡಿಕೊಂಡು ಕಾಲಕಳೆಯುತ್ತಿದ್ದ. ಹೀಗೆ ವಾರಗಳ ಹಿಂದಷ್ಟೇ ಸಹೋದರನೊಂದಿಗೆ ಪ್ರಶಾಂತ್ ಶೆಟ್ಟಿ ಊರಿಗೆ ಬಂದಿದ್ದ. ಹೀಗೆ ಊರಿಗೆ ಬಂದ ದಿನದಿಂದಲೂ ಇಬ್ಬರು ಒಟ್ಟಿಗೆ ಸುತ್ತಾಡಿಕೊಂಡು ಆತ್ಮೀಯತೆಯಿಂದಲೇ ಇದ್ದರು.
ಶಿಕಾರಿಗೆ ತೆರಳುವ ವೇಳೆ…..
ಹೀಗೆಯೇ ಶುಕ್ರವಾರವೂ ಕೂಡ ಗೆಳೆಯರು ಕುಡಿಯಲು ಬಾರೊಂದಕ್ಕೆ ತೆರಳಿ ತಡರಾತ್ರಿಯವರೆಗೂ ಕುಡಿದಿದ್ದರೆನ್ನಲಾಗಿದೆ. ಮೂರ್ನಾಲ್ಕು ಗಂಟೆಗಳ ಕಾಲ ನಡೆದ ಇವರ ಪಾರ್ಟಿಯಲ್ಲಿ ಇನ್ನಿಬ್ಬರು ಗೆಳೆಯರು ಜೊತೆಯಾಗಿದ್ದರು. ಸುಮಾರು 11 ಗಂಟೆಗೆ ಬಾರಿನಿಂದ ನಾಲ್ವರು ಮ್ಯಾಕೋಡು ಎಂಬಲ್ಲಿನ ಅಂಕಿತ್ ಶೆಟ್ಟಿ ಮನೆಗೆ ಊಟಕ್ಕೆಂದು ತೆರಳಿದ್ದರು. ಊಟದ ತರುವಾಯ ಕಾಡಿಗೆ ಶಿಕಾರಿಗೆ ತೆರಳುವ ನಿರ್ಧಾರವನ್ನು ಮಾಡಿದ್ದು ಪ್ರಶಾಂತನ ಮನೆಗೆ ಅಂಕಿತ್ ಕರೆ ಮಾಡಿ ರಾತ್ರಿ ಶಿಕಾರಿ ತೆರಳುವ ಕಾರಣ ಪ್ರಶಾಂತ್ ಮನೆಗೆ ಬರುವುದು ಮುಂಜಾನೆಯಾಗುತ್ತದೆಯೆಂದು ಹೇಳಿದ್ದ. ಇದಾದ ಬಳಿಕ ಶಿಕಾರಿಗೆ ತೆರಳಲು ಅಂಕಿತ್ ತಂದೆಯ ಹೆಸರಿನಲ್ಲಿದ್ದ ಪರವಾನಿಗೆ ಇರುವ ಬಂದೂಕನ್ನು ಸಿದ್ದಪಡಿಸಿಕೊಂಡಿದ್ದರು. ಈ ನಡುವೆಯೇ ಗುಂದಿನ ಸದ್ದು ಮೊಳಗಿದೆ. ಚೀರಾಡುವ ಸದ್ದು ಕೇಳಿ ಅಂಕಿತ್ ಶೆಟ್ಟಿ ಮನೆಯವರು ಓಡೋಡಿ ಬಂದು ನೋಡುವಾಗ ಪ್ರಶಾಂತ್ ಶೆಟ್ಟಿ ಜೀವನ್ಮರಣ ಸ್ಥಿತಿಯಲ್ಲಿ ಒದ್ದಾಡುತ್ತಿದ್ದ. ಆತನ ಎದೆ ಭಾಗದಲ್ಲಿ ಗುಂಡು ಹೊಕ್ಕಿತ್ತು.
ಆಸ್ಪತ್ರೆಗೆ ಕರೆದೊಯ್ದರೂ…..
ಗಂಭೀರವಾಗಿ ಗಾಯಗೊಂಡ ಪ್ರಶಾಂತನ ಎಡಎದೆ ಭಾಗದಲ್ಲಿ ಗಾಯವಾಗಿದ್ದು ವಿಪರೀತ ರಕ್ತಸ್ರಾವವಾಗಿತ್ತು. ನಡೆಯಬಾರದ್ದು ನಡೆದಿದೆ ಎಂದು ತಿಳಿಯುತ್ತಲೇ ಅಂಕಿತನ ತಂದೆ ಪ್ರಶಾಂತ ಶೆಟ್ಟಿಯನ್ನು ತನ್ನ ಕಾರಿನಲ್ಲಿ ಹಾಕಿಕೊಂಡು ಅಂಕಿತ್ ಹಾಗೂ ಇತರೇ ಇಬ್ಬರು ಸ್ನೇಹಿತರನ್ನು ಕುಳ್ಳೀರಿಸಿಕೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯತ್ತ ಬರುತ್ತಾರಾದರೂ ಅಷ್ಟೋತ್ತಿಗಾಗಲೇ ಪ್ರಶಾಂತ್ ಇಹಲೋಕ ತ್ಯಜಿಸಿದ್ದ. ಆಸ್ಪತ್ರೆಯಲ್ಲಿ ಈತ ಮೃತಪಟ್ಟಿರುವುದು ದೃಢಪಟ್ಟ ಬಳಿಕ ಅದೇ ಕಾರಿನಲ್ಲಿ ಶವವನ್ನು ಪುನಃ ಮನೆಗೆ ತರುತ್ತಾರೆ. ಬಳಿಕ ಎಲ್ಲರೂ ಸಮಾಲೋಚಿಸಿ ಪ್ರಶಾಂತ್ ಮನೆಗೆ ವಿಚಾರ ತಿಳಿಸುವ ತೀರ್ಮಾನ ಮಾಡುತ್ತಾರೆ. ಅದರಂತೆಯೇ ಪ್ರಶಾಂತ್ ಸಂಬಂಧಿಯೋರ್ವರಿಗೆ ವಿಚಾರ ಮುಟ್ಟಿಸಿ ಅವರ ಮೂಲಕ ಆತನ ಮನೆಗೆ ತೆರಳಿ ಸಹೋದರನಿಗೆ ವಿಚಾರ ತಿಳಿಸಿ ಕುಂದಾಪುರ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಕರೆದೊಯ್ದಿದ್ದರೆನ್ನಲಾಗಿದೆ.
ಸುಳ್ಳು ಕಥೆ ಸೃಷ್ಟಿಸಿದ ಅಂಕಿತ…
ಪ್ರಶಾಂತ್ ಸಹೋದರ ಆಸ್ಪತ್ರೆಗೆ ಬರುತ್ತಿದ್ದಂತೆಯೇ ಅಲ್ಲಿದ್ದ ಅಂಕಿತ್ ಶೆಟ್ಟಿ ಆತನ ಬಳಿ ಸುಳ್ಳಿನ ಕಥೆಯೊಂದನ್ನು ಸೃಷ್ಟಿಸಿ ಹೇಳಿದ್ದ. ರಾತ್ರಿ ಶಿಕಾರಿಗೆ ತೆರಳುವ ವೇಳೆ ಮಧ್ಯರಾತ್ರಿ ಮ್ಯಾಕೋಡು ಎಂಬಲ್ಲಿ ಬಿಳಿಬಣ್ಣದ ಕಾರಿನಲ್ಲಿ ಮೂವರಿದ್ದ ಗುಂಪು ಆಕ್ರಮಣ ಮಾಡಿ ಪ್ರಶಾಂತನಿಗೆ ಗುಂಡು ಹೊಡೆದು ಪರಾರಿಯಾಗಿದ್ದಾರೆ. ಬಳೀಕ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನ ಆತ ಸತ್ತಿದ್ದಾನೆ ಎಂದು ತಾನೇ ಹೆಣೆದ ಕಥೆಯನ್ನು ತಡವರಿಸುತ್ತಾ ವಿವರಿಸಿದ್ದಾನೆ. ಪುನಃ ಪುನಃ ವಿಚಾರಿಸಿದಾಗಲೂ ಇದೇ ರೀತಿಯಾದ ಗೊಂದಲದ ಕಥೆ ಹೇಳಿದ್ದಾನೆ. ಅದರೇ ಈತನ ನಡವಳಿಕೆ ಬಗ್ಗೆ ಅನುಮಾನಗೊಂಡ ಪ್ರಶಾಂತ ಶೆಟ್ಟಿ ಸಹೋದರ ಇನ್ನಷ್ಟು ಮಾಹಿತಿಯನ್ನು ಬೇರೆಯವರ ಮೂಲಕ ಕಲೆಹಾಕಿದಾಗ ಶಿಕಾರಿಗೆ ತೆರಳಲು ನಾಲ್ವರು ಸ್ಕೆಚ್ ಮಾಡಿದ್ದು ಈ ಸಂದರ್ಭ ಏನೋ ಅಚಾತುರ್ಯವಾಗಿ ಈ ದುರ್ಘಟನೆ ನಡೆದಿರುವುದು ಬೆಳಕಿಗೆ ಬರುತ್ತದೆ.
ಪ್ಲೇಟ್ ಬದಲಿಸಿದ ಆರೋಪಿ…
ಮೊದಮೊದಲು ಯಾರೋ ಅಪರಿಚಿತರು ಗುಂಡಿಟ್ಟು ಕೊಂದರು ಎಂದು ಕಥೆ ಹೇಳಿದ್ದ ಅಂಕಿತ್ ಕೊನೆಗೆ ಶಿಕಾರಿಗೆ ತೆರಳುವ ವೇಳೆ ಅಚಾತುರ್ಯ ನಡೆದು ಈ ಘಟನೆ ಆಗಿದೆ ಎಂದಿದ್ದ. ಇನ್ನಷ್ಟು ವಿಚಾರಣೆ ಬಳಿಕ ಮನೆಯಲ್ಲಿ ಪ್ರಶಾಂತ್ ಕುಳಿತಿರುವಾಗ ಟೇಬಲ್ ಮೇಲಿಟ್ಟಿದ್ದ ಬಂದೂಕು ತನ್ನಷ್ಟಕ್ಕೆ ಸಿಡಿದಿದೆ. ಈ ವೇಳೆ ನಾವೆಲ್ಲಾ ಹೊರಗಿದ್ದು ಆತನ ಚೀರಾಟ ಕೇಳಿ ಒಳಗೆ ಬಂದಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾನೆ. ಇದಕ್ಕೆ ಆತನ ಇನ್ನಿಬ್ಬರು ಸ್ನೇಹಿತರೂ ಕೂಡ ‘ಕಳ್ಳ ದೇವರಿಗೆ ಸುಳ್ಳು ಸಾಕ್ಷಿ’ ಎಂಬಂತೆ ಪೊಲೀಸರೆದುರು ತಲೆಯಲ್ಲಾಡಿಸಿದ್ದಾರೆ. ಅಂಕಿತ್ ತಂದೆಯೂ ಕೂಡ ತನಗೇನು ಗೊತ್ತಿಲ್ಲ ಎನ್ನುತ್ತಿದ್ದಾರೆ.
ಕೊಲೆ ಪ್ರಕರಣ ದಾಖಲು..
ಇನ್ನು ಅಂಕಿತ್ ನಡವಳಿಕೆ ಬಗ್ಗೆ ಅನುಮಾನಗೊಂಡ ಪ್ರಶಾಂತ್ ಶೆಟ್ಟಿ ಕುಟುಂಬದವರು ಆತನ ವಿರುದ್ಧ ಅಕ್ರೋಷಗೊಂಡಿದ್ದಾರೆ. ಕ್ಷಣಕ್ಕೊಂದು ಹೇಳಿಕೆ ನೀಡಿ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾನೆಂದು ಪೊಲೀಸರೆದುರು ಆರೋಪಿಸಿದ್ದಾರೆ. ಅಲ್ಲದೇ ಪ್ರಶಾಂತನನ್ನು ಅಂಕಿತ್ ಶಿಕಾರಿಗೆ ಕರೆದೊಯ್ದು ಯಾವುದೋ ದ್ವೇಷ ಅಥವಾ ದುರುದ್ದೇಶದಿಂದ ಕೊಲೆಮಾಡಿದ್ದಾನೆ. ಈ ಸಂದರ್ಭ ಅಂಕಿತನೊಂದಿಗೆ ಇನ್ನಿಬ್ಬರು ಗೆಳೆಯರಿದ್ದು ಅವರ ವಿಚಾರಣೆಯನ್ನೂ ಮಾಡುವಂತೆಯೂ ಪೊಲಿಸರಿಗೆ ದೂರು ನೀಡಿದ್ದಾರೆ.
ಆರೋಪಿ ಅರೆಸ್ಟ್, ಇಬ್ಬರ ವಿಚಾರಣೆ..
ಪ್ರಶಾಂತ್ ಮನೆಯವರ ದೂರಿನಂತೆ ಕೊಲೆ ಆರೋಪದಡಿಯಲ್ಲಿ ಆರೋಪಿ ಅಂಕಿತ್ ಶೆಟ್ಟಿಯನ್ನು ಪೊಲಿಸರು ಬಂಧಿಸಿದ್ದಾರೆ. ಅಲ್ಲದೇ ಘಟನೆ ನಡೆಯುವ ಸಂದರ್ಭ ಜೊತೆಗಿದ್ದರೆನ್ನಲಾದ ಇನ್ನಿಬ್ಬರು ಸ್ನೇಹಿತರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಅಂಕಿತ್ ಈ ಭಾಗದಲ್ಲಿ ತನ್ನ ನಡೆವಳಿಕೆಗಳಿಂದ ಕುಖ್ಯಾತಿ ಗಳಿಸಿದ್ದು ಬೈಂದೂರು ಠಾಣೆಯ ವ್ಯಾಪ್ತಿಯಲ್ಲಿಯೂ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದ.
ಸದ್ಯ ಕೊಲೆ ಬಗ್ಗೆ ಯಾವುದೇ ನಿಖರ ಕಾರಣ ತಿಳಿದುಬಂದಿಲ್ಲ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ತನಿಖೆ ಬಳಿಕ ಈ ಪ್ರಕರಣದ ಬಗ್ಗೆ ಇನ್ನಷ್ಟು ಸತ್ಯಾಸತ್ಯತೆಗಳು ಹೊರಬೀಳುವ ಸಾಧ್ಯತೆಗಳಿದೆ.
ಇದನ್ನೂ ಓದಿರಿ-
Comments are closed.