ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧೆಡೆ ಹೆಚ್ಚುತ್ತಿರುವ ಸರಗಳ್ಳರ ದುಷ್ಕೃತ್ಯಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದು, ಇದಕ್ಕಾಗಿ ಹೊಸ ತಂತ್ರವನ್ನು ಹೆಣೆದಿದ್ದಾರೆ. ಇನ್ನು ಮುಂದೆ ಯಾರಾದರೂ ಸರಗಳ್ಳತನ ಮಾಡಿ ಸಿಕ್ಕಿಬಿದ್ದರೆ ಅಂಥವರಿಗೆ ಐಪಿಸಿ ಸೆಕ್ಷನ್ 397 ಮತ್ತು 392 ಪ್ರಕಾರ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಹಾಲಿ ಇರುವ ಕಾನೂನಿಗೆ ತಿದ್ದುಪಡಿ ಮಾಡಲಾಗಿದೆ. ಈಗಾಗಲೇ ಗೃಹ ಇಲಾಖೆ ಅಧಿಸೂಚನೆ ಹೊರಡಿಸಿದ್ದು , ಸರಗಳ್ಳತನ, ದರೋಡೆ, ಮಾರಕಾಸ್ತ್ರಗಳನ್ನಿಡಿದು ಬೆದರಿಕೆ ಹಾಕುವುದು, ಅಪಹರಣ ಮಾಡಿ ಸಿಕ್ಕಿಬಿದ್ದರೆ ಐಪಿಎಸ್ ಸೆಕ್ಷನ್ 392 ಹಾಗೂ 397ರ ಪ್ರಕಾರ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಇದನ್ನೆ ಅಸ್ತ್ರವಾಗಿಟ್ಟುಕೊಂಡಿರುವ ಗೃಹ ಇಲಾಖೆ ಸರಗಳ್ಳತನ ಮಾಡಿ ಸಿಕ್ಕಿ ಬಿದ್ದವರಿಗೆ ಏಳು ವರ್ಷ ಶ್ರೀ ಕೃಷ್ಣನ ಜನ್ಮಸ್ಥಳ ದರ್ಶನ ಮಾಡಿಸಲು ಮುಂದಾಗಿದೆ.
ಸುಲಭ ಜಾಮೀನು: ಬೆಂಗಳೂರು ಸೇರಿದಂತೆ ರಾಜ್ಯದ ಎರಡನೇ ಹಂತ ಮಹಾನಗರಗಳಾದ ಮೈಸೂರು, ಮಂಗಳೂರು, ತುಮಕೂರು, ಶಿವಮೊಗ್ಗ, ದಾವಣಗೆರೆ, ಬೀದರ್, ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಸೇರಿದಂತೆ ಮತ್ತಿತರ ಕಡೆ ಸರಗಳ್ಳರ ಹಾವಳಿ ವಿಪರೀತವಾಗಿತ್ತು.
ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಿದ್ದ ಸರಗಳ್ಳರು ಹೇಗೋ ಅವರಿವರ ನೆರವು ಪಡೆದು 30-40 ಸಾವಿರ ನೀಡಿ ಸುಲಭವಾಗಿ ಜಾಮೀನಿನ ಮೇಲೆ ಹೊರಬಂದು ಪುನಃ ಅದೇ ದುಷ್ಕೃತ್ಯ ನಡೆಸುತ್ತಿದ್ದರು. ಇದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತ್ತು. 2012ರಲ್ಲಿ ಬೆಂಗಳೂರಿನಲ್ಲಿ 353, 2013ರಲ್ಲಿ 329, 2014ರಲ್ಲಿ 529, 2015ರಲ್ಲಿ 343 ಹಾಗೂ ಮೇ ಅಂತ್ಯಕ್ಕೆ 126 ಸರಗಳ್ಳರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇನ್ನು ರಾಜ್ಯದ ವಿವಿಧೆಡೆಯಲ್ಲೂ ಇವರ ಕೈಚಳಕ ವಿಪರೀತವಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಗೃಹ ಇಲಾಖೆ ಶಾಶ್ವತವಾಗಿ ಕಡಿವಾಣ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ಗೂಂಡಾ ಕಾಯ್ದೆ:
ಸರಗಳ್ಳರಿಗೆ ಜಾಮೀನು ನೀಡದಂತೆ ಪೊಲೀಸರು ಗೂಂಡಾ ಕಾಯ್ದೆ ಜಾರಿ ಮಾಡುತ್ತಿದ್ದರು. ಆದರೂ 6 ತಿಂಗಳು ಮುಗಿಯುತ್ತಿದ್ದಂತೆ ಜಾಮೀನು ಪಡೆದುಕೊಳ್ಳುತ್ತಿದ್ದರು. ಇದು ಪೊಲೀಸರಿಗೆ ಭಾರೀ ಕಿರಿಕಿರಿ ಉಂಟು ಮಾಡುತ್ತಿತ್ತು. ಹೀಗಾಗಿ ಇನ್ನು ಮುಂದೆ ಸರಗಳ್ಳರ ಕೈಚಳಕ್ಕೆ ನಡೆಯದಂತೆ ಏಳು ವರ್ಷ ಜೈಲಿಗೆ ಅಟ್ಟಲು ಪೊಲೀಸರು ಮುಂದಾಗಿದ್ದಾರೆ. ಸರಗಳ್ಳರ ಹಾವಳಿಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಗೃಹ ಇಲಾಖೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದೆ. ಕಳೆದ ಜನವರಿ 17ರಂದು ಜೆ.ಪಿನಗರದ ಜರಗನಹಳ್ಳಿ ನಿವಾಸಿ ಶಿವು, ಆಗಸ್ಟ್ 24ರಂದು ರಾಕೇಶ್ ಅಲಿಯಾಸ್ ರಾಕಿ, ಹೊಸಕೋಟೆ ನಿವಾಸಿ ಭಾರತಿ ಕಳೆದ ಡಿಸೆಂಬರ್ 13ರಂದು ಅಲಿಂಪಾಷ ಎಂಬ ಸರಗಳ್ಳರನ್ನು ಪೊಲೀಸರು ಬಂಧಿಸಿದ್ದರು. ಈಗಾಗಲೇ ಈ ನಾಲ್ವರು ಸರಗಳ್ಳರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
Comments are closed.