ಮಂಗಳೂರು,ಜೂನ್.30 : ಕರ್ನಾಟಕ – ಕೇರಳ ಗಡಿ ಪ್ರದೇಶವಾದ ಮಂಗಳೂರು ಸಮೀಪದ ಬೊಳ್ಮಾರಿನಲ್ಲಿ ಮರಳು ಮಾಫಿಯಕ್ಕೆ ಸಂಬಂದಿಸಿದಂತೆ ಇಂದು ಬೆಳಿಗ್ಗೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಇವರಲ್ಲಿ ಗಂಭೀರ ಗಾಯಗೊಂಡ ಓರ್ವನನ್ನು ಮಂಗಳೂರಿನ ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲು ಪಡಿಸಲಾಗಿದೆ.
ಮರಳು ಮಾಫಿಯಾ ಗುಂಪುಗಳ ನಡುವೆ ನಡೆದ ಘರ್ಷಣೆ ತಾರಕ್ಕಕ್ಕೇರಿದ್ದು, ಎರಡು ತಂಡಗಳು ಮನೆಗಳಿಗೆ ನುಗ್ಗಿ ಪರಸ್ಪರ ಹಲ್ಲೆ ನಡೆಸಿರುವುದು ಮಾತ್ರವಲ್ಲದೇ ಪರಸ್ಪರ 11 ಸುತ್ತಿನ ಗುಂಡಿನ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.
ಈ ವೇಳೆ ಹಲವರಿಗೆ ಗಾಯಗಳಾಗಿದ್ದು, ಗಂಭೀರ ಗಾಯಗೊಂಡ ಓರ್ವ ವ್ಯಕ್ತಿಯನ್ನು ಇಂದು ಬೆಳಿಗ್ಗೆ ನಗರದ ಸರಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Updated News..
ಮರಳು ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಕ್ಕೆ ಕೇರಳದ ಕುಖ್ಯಾತ ಮರಳು ಮಾಫಿಯಾದ ಗ್ಯಾಂಗೊಂದು ಎರಡು ಮನೆಗಳ ಮೇಲೆ ಗುಂಡಿನ ಹಾಗೂ ತಲವಾರ್ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಕರ್ನಾಟಕ-ಕೇರಳ ಗಡಿ ಪ್ರದೇಶದ ಸಾಲೆತ್ತೂರು ತಲೆಕ್ಕಿ ಸಮೀಪದ ಬೊಳ್ವಾದೆ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ತಲೆಕ್ಕಿ ನಿವಾಸಿಗಳಾದ ಮಜೀದ್, ಪೌಝೀಯ ಹಾಗೂ ಅಜೀಜ್ ಎಂಬವರು ಗಂಭೀರ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾಲೆತ್ತೂರು, ತಲೆಕ್ಕಿ ಮೊದಲಾದ ಕಡೆಗಳ ಮೂಲಕ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಾಟ ನಿರಂತರವಾಗಿ ನಡೆಯುತ್ತಿದೆ. ಈ ಬಗ್ಗೆ ಎಚ್ಚೆತ್ತ ಈ ಭಾಗದ ಸಾರ್ವಜನಿಕರು ಅಕ್ರಮ ಮರಳು ಸಾಗಾಟದ ಲಾರಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೇ ವಿಚಾರದಲ್ಲಿ ಮರಳು ಮಾಫಿಯಾದ ಗ್ಯಾಂಗ್ ಗಳು ಇಲ್ಲಿನ ಮುಖಂಡರ ಮೇಲೆ ದ್ವೇಷ ಇಟ್ಟುಕೊಂಡಿದ್ದರು. ಕೇರಳದ ಕುಖ್ಯಾತ ಮರಳು ತಂಡದ ರಫೀಕ್, ಇಬ್ರಾಹಿಂ ಪುದು, ಇಬ್ರಾಹಿಂ ತಲೆಕ್ಕಿ, ಜೀಯಾ ಪೈವಳಿಕೆ, ಸೇರಿದಂತೆ ಸುಮಾರು 25ರಿಂದ 30 ಜನರ ತಂಡ ಗುರುವಾರ ಬೆಳಗ್ಗೆ ಜಾವ ಅಂದರೆ ಮುಸ್ಲಿಮರು ಉಪವಾಸ ಪ್ರಯುಕ್ತ ಊಟ ಮಾಡಲು ಎದ್ದೇಳುವ ವೇಳೆಗೆ ಕೇರಳ ಕಡೆಯಿಂದ ಒಂದು ಸ್ವಿಪ್ಟ್, ಒಂದು ಐ ಟ್ವೆಂಟಿ, ಒಂದು ಆಲ್ಟೋ ಕಾರು ಸೇರಿದಂತೆ ಒಟ್ಟು ನಾಲ್ಕು ಕಾರಿನಲ್ಲಿ ಬಂದ ತಂಡ ರಸ್ತೆ ಬದಿಯಲ್ಲಿ ಮಾತನಾಡುತ್ತಿದ್ದ ಸಾರ್ವಜನಿಕರ ಗುಂಪಿನ ಮೇಲೆ ದಾಳಿ ನಡೆಸಿದೆ. ಬಳಿಕ ಅಜೀಜ್ ಹಾಗೂ ಶರೀಫ್ ಅವರ ಮನೆಯ ಮೇಲೆ ಹಲವಾರು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ತಲವಾರ್ ಹಾಗೂ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ ಮನೆಯೊಳಗಡೆ ಇದ್ದ ಪೌಝೀಯ ಎಂಬ ಮಹಿಳೆ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪ್ರತ್ಯಕ್ಷಿದರ್ಶಿಗಳು ತಿಳಿಸಿದ್ದಾರೆ.
ಈ ಸಂದರ್ಭ ಸುತ್ತಮುತ್ತಲಿನಲ್ಲಿ ಜನರು ಬೊಬ್ಬೆ ಹೊಡೆಯಲು ಪ್ರಾರಂಭಿಸಿದ್ದು, ಬಳಿಕ ಅಲ್ಲೆ ಇದ್ದಂತಹ ಕಾರು ಹಾಗೂ ಒಂದು ಬೈಕಿನ ಮೇಲೆ ದಾಳಿ ನಡೆಸಿ ಅದನ್ನು ಧ್ವಂಸಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ತೀವ್ರತೆ ಹೆಚ್ಚಾಗುತ್ತಿದ್ದಂತೆ ಸ್ಥಳದಲ್ಲಿ ಮತ್ತಷ್ಟು ಜನ ಜಮಾಯಿಸ ತೊಡಗಿದ್ದರು. ಬಳಿಕ ಸಾರ್ವಜನಿಕರು ಪ್ರತಿದಾಳಿ ನಡೆಸಲು ಮುಂದಾಗುತ್ತಿದ್ದಂತೆ ಕೇರಳದ ತಂಡದ ಮೂರು ಕಾರುಗಳ ಮೂಲಕ ತಲೆಕ್ಕಿ ಕಡೆಗೆ ಪರಾರಿಯಾಗಿದ್ದು, ಮತ್ತೊಂದು ಕಾರು ಇನ್ನೊಂದು ಕಡೆಗೆ ತೆರಳಿದೆ. ಸಾರ್ವಜನಿಕರು ಅವರನ್ನು ಹಿಂಬಾಲಿಸಿಕೊಂಡು ಹೋದರೂ ಅವರು ಕಾರು ಬಿಟ್ಟು ಕೇರಳದತ್ತ ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ವಿಟ್ಲ ಪೊಲೀಸರು ಆಗಮಿಸಿದ್ದಾರೆ. ಈ ವ್ಯಾಪ್ತಿ ಕೇರಳದ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಾಗಿದ್ದರಿಂದ ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
Comments are closed.