ಕರಾವಳಿ

ಯಕ್ಷರಂಗಕ್ಕೆ ತೀವೃ ಆಘಾತ ತಂದ ಸುದ್ದಿ – ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ನಿಧನ

Pinterest LinkedIn Tumblr

Ishwanath_shetty_died

ಮುಂಬಾಯಿ : ಅನಾರೋಗ್ಯದಿಂದಾಗಿ  ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು ಇಂದು ಬೆಳಿಗ್ಗೆ 9.15 ಕ್ಕೆ ನಿಧನ ಹೊಂದಿದರು .ಯಕ್ಷರಂಗಕ್ಕೆ ತೀವೃ ಆಘಾತ ತಂದ  ಸುದ್ದಿ ಇದು . ಕಳೆದ ಐದು ತಿಂಗಳಿಂದ ಅನಾರೋಗ್ಯದಿಂದಿದ್ದ ಶೆಟ್ಟರ ನಿಧನ ಯಕ್ಷರಂಗಕ್ಕೆ ದೊಡ್ಡ ನಷ್ಟವನ್ನೇ ತಂದಿದೆ .ಸದಾ ನಗುಮೊಗದ , ಸರಳ , ನಿಗರ್ವಿ ವ್ಯಕ್ತಿತ್ವದ ಶೆಟ್ಟರು ಇನ್ನೀಗ ನೆನಪು ಮಾತ್ರವಾಗಿ ಇತಿಹಾಸದ ಪುಟಕ್ಕೆ ಸಂದು ಹೋದರು ಎಂದು ಬರೆಯುವುದೇ ವೇದನೆಯ ವಿಷಯ.

1955 ರಲ್ಲಿ ಜನಿಸಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು ತೆಂಕು, ಬಡಗು ತಿಟ್ಟಿನ ಸುಪ್ರಸಿಧ್ಧ ವೇಷಧಾರಿ ,  ಅರ್ಥಧಾರಿ ಹಾಗೂ ಪ್ರಸಂಗಕರ್ತರು. ಅಸ್ಖಲಿತ ವಾಗ್ವೈಖರಿ , ಆಕರ್ಷಕ ಮಂಡನಾಕ್ರಮ, ಸುಂದರವಾದ ವಾದಸಂವಾದದ ಪ್ರಸ್ತುತಿ , ಸರಳ ಆದರೂ ಶುಧ್ಧ ಭಾಷಾಪ್ರಯೋಗ ——- ಇವೆಲ್ಲಾ ಮೇಳೈಸಿರುವದೇ ಶೆಟ್ಟಿಯವರ ಅರ್ಥಗಾರಿಕೆಯ ಹೆಚ್ಚುಗಾರಿಕೆ .

ಪಿ.ಯು.ಸಿ. ಪೂರೈಸಿ , ಯಕ್ಷಗಾನ ರಂಗಕ್ಕೆ ಬಂದ ವಿಶ್ವನಾಥ ಶೆಟ್ಟರು ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದವರು . ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳದ ತಿರುಗಾಟ ಶೆಟ್ಟರಿಗೆ ಯಕ್ಷಗಾನದ ಪಟ್ಟುಗಳನ್ನು ತಿಳಿಯುವ ವೇದಿಕೆಯಾಯಿತು. ಮೇಳದ ಲೆಕ್ಕಾಚಾರವನ್ನು ಬರೆಯುವ ಜವಾಬ್ದಾರಿ ಹೊಂದಿ , ವೇಷಗಳನ್ನೂ ನಿರ್ವಹಿಸುತ್ತಿದ್ದರು. ಕದ್ರಿಮೇಳದ ” ಬೊಳ್ಳಿದಂಡಿಗೆ ” ಯ ಜಿಪುಣ ಶೆಟ್ಟಿಯ ಪಾತ್ರ , ” ಗರುಡಕೇಂಜವೆ ” ಯ “ದುಷ್ಟ ಮಂತ್ರಿ , ” ಗೆಜ್ಜೆದಪೂಜೆ ” ಯ ನಿಷ್ಟಾವಂತ ಮಂತ್ರಿ , ” ಕದ್ರಿಕ್ಷೇತ್ರ ಮಹಾತ್ಮೆ ” ಯ ಗೋರಕ್ಷನಾಥ , ಮಾತ್ರವಲ್ಲದೇ ಪೌರಾಣಿಕ ಪ್ರಸಂಗಗಳ ಶ್ರೀರಾಮ ,   ಶ್ರೀಕೃಷ್ಣ, ವಿದುರ , ಪರಶುರಾಮ , ಭೀಷ್ಮ ಮುಂತಾದ ಪಾತ್ರಗಳಲ್ಲಿ ಹೆಸರು ಗಳಿಸಿದರು.

ಈ ಅವಧಿಯಲ್ಲೇ ಶೆಟ್ಟರು ಪ್ರಸಂಗಗಳನ್ನು ಬರೆಯಲಾರಂಭಿಸಿದ್ದರು. ಬೊಳ್ಳಿದಂಡಿಗೆ , ಗೆಂಡಸಂಪಿಗೆ , ರತ್ನರಾಧಿಕೆ ಮುಂತಾದ ತುಳು ಪ್ರಸಂಗಗಳೊಂದಿಗೇ ಪೌರಾಣಿಕ ಪ್ರಸಂಗವನ್ನೂ ಬರೆದು, ಅವೆಲ್ಲಾ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು .

” ವಿಷಮ ಸಮರಂಗ ” , ಕನ್ಯಾಂತರಂಗ, ಚಾಣಾಕ್ಷ ಚಾಣಕ್ಯ , ವರ್ಣವೈಷಮ್ಯ , ಶಶಿವಂಶ ವಲ್ಲರಿ , ಜ್ವಾಲಾಜಾಹ್ನವೀ , ಶ್ರೀರಾಮಸೇತು  ಮುಂತಾದ ಪೌರಾಣಿಕ ಪ್ರಸಂಗಗಳು ಶೆಟ್ಟರಿಂದಲೇ ರಚಿಸಲ್ಪಟ್ಟ ಕೃತಿಗಳು.

ಕದ್ರಿ ಮೇಳ ನಿಂತಾಗ ಶೆಟ್ಟರು ಕರ್ಣಾಟಕ ಮೇಳ ಸೇರಿದರು. ಈ ಅವಧಿಯಲ್ಲೇ ಶೆಟ್ಟರ ಅದ್ಭುತ ಪ್ರತಿಭೆ ಹೊರಹೊಮ್ಮಿತು . ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಶ್ರೇಷ್ಟ ಪ್ರಸಂಗ ಕೃತಿಯಾದ ” ಮಾನಿಷಾದ ” ದ ಪ್ರಧಾನ ಪಾತ್ರವಾದ ” ವಾಲ್ಮೀಕಿ” ಪಾತ್ರ ಶೆಟ್ಟರಿಗೆ ದೊರಕಿತು. ವಿಶ್ವನಾಥ ಶೆಟ್ಟರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಅಸ್ಖಲಿತವಾದ ಮಾತುಗಾರಿಕೆ , ಭಾವಾಭಿನಯ ಹಾಗೂ ತಾವೇ ಸ್ವತಃ ಪ್ರಸಂಗಕರ್ತರಾದ ಕಾರಣ, ವಾಲ್ಮೀಕಿಯ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು .ವಾಲ್ಮೀಕಿ ಪಾತ್ರ ಅತ್ಯಂತ ಜನಪ್ರಿಯತೆ ಗಳಿಸಿ ಶೆಟ್ಟರು , ಪ್ರಸಿಧ್ಧಿಯಾದರು.

ಉತ್ತಮ ಪ್ರಸಂಗಕರ್ತರಾಗಿ ಬೊಟ್ಟಿಕೆರೆಯವರು” ಅಭಿನವ ವಾಲ್ಮೀಕಿ” ಎನಿಸಿಕೊಂಡರೆ , ಶೆಟ್ಟರು ವಾಲ್ಮೀಕಿಯ ಪಾತ್ರನಿರ್ವಹಣೆಯಿಂದ ” ಯಕ್ಷರಂಗದ ವಾಲ್ಮೀಕಿ ” ಎನಿಸಿಕೊಂಡರು. ವಾಲ್ಮೀಕೀ ರಾಮಾಯಣದ ಶ್ಲೋಕ , ಅರ್ಥ , ಭಾವಾರ್ಥ ಗಳೆಲ್ಲವನ್ನೂ ತಮ್ಮ ಪಾತ್ರ ಪೋಷಣೆಗೆ ಸಮರ್ಥವಾಗಿ ಬಳಸಿದರು. ಪರಿಣಾಮವಾಗಿ ಶೆಟ್ಟರ ವಾಲ್ಮೀಕಿ ಜನಮಾನಸದಲ್ಲಿ ಪ್ರತಿಷ್ಟೆಗೊಂಡಿತು . ” ಮಾನಿಷಾದ ” ದ ಭರ್ಜರಿ ಯಶಸ್ಸಿಗೆ ” ವಾಲ್ಮೀಕಿಯ ಕೊಡುಗೆ ” ಯೂ ಸೇರಿಕೊಂಡಿತು .ಇಂದಿಗೂ ” ಮಾನಿಷಾದ ” ಎಂದಾಗ ಶೆಟ್ಟರ ವಾಲ್ಮೀಕಿ ಪಾತ್ರವೇ ಕಣ್ಣ ಮುಂದೆ ನಿಲ್ಲುವಷ್ಟು ಆ ಪಾತ್ರವನ್ನು ಕಟೆದು ನಿಲ್ಲಿಸಿದ್ದರು .

ಮುಂದೆ ಕರ್ಣಾಟಕ ಮೇಳ ತನ್ನ ತಿರುಗಾಟ ನಿಲ್ಲಿಸುವ ಹಂತದಲ್ಲಿರುವಾಗ , ಶೆಟ್ಟರಿಗೆ ಬಡಗಿನ ಸಾಲಿಗ್ರಾಮ ಮೇಳದಿಂದ ಬೇಡಿಕೆ ಬಂತು . ಸಾಲಿಗ್ರಾಮ ಮೇಳಕ್ಕೆ” ಮಾತಾಡುವ ” ಕಲಾವಿದರ ಅನಿವಾರ್ಯತೆಯಿದ್ದಾಗ ,ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರಿಗೆ ಹೊಳೆದದ್ದು, ವಿಶ್ವನಾಥ ಶೆಟ್ಟರ ಹೆಸರು. ಅಂತೂ ಶೆಟ್ಟರು , ಸಾಲಿಗ್ರಾಮ ಮೇಳ ಸೇರಿ , ಅಲ್ಲೂ ಮಾತುಗಾರಿಕೆಯಿಂದ ವಿಜೃಂಭಿಸಲಾರಂಭಿಸಿದರು .ಪರಶುರಾಮ, ಶ್ರೀರಾಮ, ಶ್ರೀಕೃಷ್ಣ , ಭೀಷ್ಮ , ಹನೂಮಂತ, ಈಶ್ವರ ಮುಂತಾದ ಪಾತ್ರಗಳ ನಿರ್ವಹಣೆಯಿಂದ ಬಡಗಿನ ಅಭಿಮಾನಿಗಳ ಮನ ರಂಜಿಸಿದರು . ಕಾಲ್ಪನಿಕ ಪ್ರಸಂಗವಾದ ” ಅಗ್ನಿನಕ್ಷತ್ರ ” ದ ಮಂತ್ರಿಯ ಪಾತ್ರ , ಈಶ್ವರೀ ಪರಮೇಶ್ವರಿ , ರಂಗನಾಯಕಿ , ಧರ್ಮಸಂಕ್ರಾಂತಿ , ಸೂರ್ಯವಂಶಿ ಪ್ರಸಂಗಗಳ ಪಾತ್ರಗಳೆಲ್ಲಾ ಶೆಟ್ಟರಿಗೆ ಹೆಸರು ತಂದ ಪಾತ್ರಗಳು .ಇತ್ತೀಚೆಗೆ ಹಿರಿಯಡ್ಕ ಮೇಳದ ತಿರುಗಾಟದಲ್ಲೇ ಶೆಟ್ಟರು ಗಂಭೀರ ಸ್ತಿತಿಯಲ್ಲಿ ಅನಾರೋಗ್ಯಕ್ಕೊಳಗಾದರು .

ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ” ಎಂದಾಕ್ಷಣ ಜನಸಾಮಾನ್ಯ ಪ್ರೇಕ್ಷಕರು ಇವರು ಯಕ್ಷರಂಗದ ಸುಪ್ರಸಿಧ್ಧ ಕಲಾವಿದ , ಇತ್ತೀಚೆಗೆ ನಮ್ಮನ್ನು ಅಗಲಿದ , ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಖಾಸಾ ತಮ್ಮ ಎಂದೇ ಭಾವಿಸಿದ್ದಾರೆ . ಇದಕ್ಕೆ ಕಾರಣ” ಸಿದ್ದಕಟ್ಟೆ ” ಎಂಬ ಊರು  ಎಂಬುದು ಮಾತ್ರ ಕಾರಣವಲ್ಲ, ಮಾತುಗಾರಿಕೆಯಲ್ಲೂ , ವಿಶ್ವನಾಥ ಶೆಟ್ಟರ ಪ್ರಬುಧ್ಧತೆಯಿಂದಾಗಿ .ಆದರೆ , ವಿಶ್ವನಾಥ ಶೆಟ್ಟರು , ಚೆನ್ನಪ್ಪ ಶೆಟ್ಟರಿಗೆ ಸಂಬಂಧದಲ್ಲಿ ತಮ್ಮನೇ ಹೊರತು ಖಾಸಾ ತಮ್ಮನಲ್ಲ . ಆದರೂ , ಈ ಇಬ್ಬರು ” ಸಿದ್ದಕಟ್ಟೆ ” ಯವರ ಅರ್ಥಗಾರಿಕೆಯಲ್ಲಿಯ ವ್ಯತ್ಯಾಸ ಗಮನಾರ್ಹ. ( ನಾನು ಗಮನಿಸಿದಂತೆ ) ದಿ. ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲಿ ಸ್ವಲ್ಪ ಮಟ್ಟಿನಲ್ಲಿ ” ಶೇಣಿ ” ಯವರ ಪ್ರಭಾವ ಗುರುತಿಸಬಹುದು.

ಪದ್ಯಗಳಲ್ಲಿ ಬರುವ ಶಬ್ದಾರ್ಥಗಳನ್ನು ವಿಶ್ಲೇಶಿಸಿ , ತನ್ನ ಪಾತ್ರ ಪೋಷಣೆಯನ್ನು ಪೀಠಿಕೆಯಲ್ಲೇ ಮಂಡಿಸುವ ಶೇಣಿಯವರ ಅದ್ಭುತ ಕಲೆಯನ್ನು ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲೂ ಕಾಣಬಹುದಾಗಿತ್ತು . ಎದುರು ಪಾತ್ರಧಾರಿ ದಾರಿ ತಪ್ಪಿದರೆ , ಕೂಡಲೇ ಖಂಡಿಸುವದು ಚೆನ್ನಪ್ಪ ಶೆಟ್ಟರ ಕ್ರಮ. ( ದಿ. ಶೇಣಿಯವರ ಅರ್ಥದಲ್ಲೂ ಇದನ್ನು ಗಮನಿಸಬಹುದು) ಆದರೆ , ವಿಶ್ವನಾಥ ಶೆಟ್ಟರ ಅರ್ಥ ದಿ. ರಾಮದಾಸ ಸಾಮಗರ ಅರ್ಥವನ್ನು ಹೋಲುತ್ತಿದೆ. ಪೀಠಿಕೆ , ಮಂಡನೆ , ಖಂಡನೆ , ವಾದ, ಸಂವಾದಗಳಲ್ಲಿ ” ಸಾಮಗ ” ಶೈಲಿ ಕಾಣಬಹುದಾಗಿದ್ದರೂ , ಸಾಮಗರ ಅನುಕರಣೆಯಾಗದೇ ಸ್ವಂತಿಕೆಯಿದೆ. ಸರಳ ಭಾಷೆ , ಆಕರ್ಷಕವಾದ ಮಾತುಗಾರಿಕೆಯು ವಿಶ್ವನಾಥ ಶೆಟ್ಟರ ಅರ್ಥಗಾರಿಕೆಯ ಜೀವಾಳ .ಎದುರು ಪಾತ್ರಧಾರಿ ತಪ್ಪಿ ಮಾತಾಡಿದರೆ , ನಗುನಗುತ್ತಾ ಹಾಸ್ಯದಿಂದಲೇ ಮರುತ್ತರ ನೀಡುತ್ತಿದ್ದರು . ಶುಧ್ದತುಳು ಭಾಷೆಯನ್ನು ತುಳುಪ್ರಸಂಗಗಳಲ್ಲಿ ಪ್ರಸ್ತುತಪಡಿಸುವ ಕಲೆ ವಿಶ್ವನಾಥ ಶೆಟ್ಟರಿಗೆ ಸಿಧ್ದಿಸಿತ್ತು.ತುಳುಭಾಷೆಯ ಸಾಹಿತ್ಯ ಜ್ಞಾನದಿಂದಾಗಿ ತುಳು ಗಾದೆ ,ಒಗಟು ಗಳನ್ನು ಧಾರಾಳವಾಗಿ ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದರು .

ಭಾಷಣ , ಅಭಿನಂದನಾ ನುಡಿಗಳನ್ನು ಶೆಟ್ಟರು ಅದ್ಭುತವಾಗಿ ನಿರ್ವಹಿಸುತ್ತಿದ್ದರು . ನಮ್ಮ ” ಯಕ್ಷಸಂಗಮ ” ದ ಐದನೇ ವರ್ಷದ ಕಾರ್ಯಕ್ರಮದಂದು ” ಮಿಜಾರು ಅಣ್ಣಪ್ಪ ಸಂಮಾನ ” ದಂದು ಅಣ್ಣಪ್ಪರ ಸಹಕಲಾವಿದರಾದ, ವಿಶ್ವನಾಥ ಶೆಟ್ಟರು , ಅಭಿನಂದನಾ ಭಾಷಣ ಮಾಡಿ ಅಣ್ಣಪ್ಪರಿಂದಲೇ ಮೆಚ್ಚುಗೆ ಗಳಿಸಿದ್ದರು . ( ವಿಶ್ವನಾಥ ಶೆಟ್ಟರು ಇಷ್ಟೆಲ್ಲಾ ಹೇಳಿದ್ದು ನನ್ನ ಕುರಿತಾಗಿಯಾ ? ಎಂದು ಅಣ್ಣಪ್ಪರು ಸಂಮಾನಿತರ ಭಾಷಣದಲ್ಲಿ ಕೇಳಿದ್ದರು) ತಾಳಮದ್ದಳೆಯಲ್ಲೂ ತಮ್ಮ ಛಾಪನ್ನು ಒತ್ತಿದ ವಿಶ್ವನಾಥ ಶೆಟ್ಟರು ಶ್ರೀರಾಮ , ಶ್ರೀಕೃಷ್ಣ , ಸುಗ್ರೀವ, ಪರಶುರಾಮ, ಭೀಷ್ಮ , ಶಂತನು , ಹನೂಮಂತ, ಸುಧನ್ವ ಮುಂತಾದ ಸಾತ್ವಿಕ ಪಾತ್ರಗಳಲ್ಲಿ ಮಿಂಚಿದಂತೆ ಸಾಲ್ವ, ದುಷ್ಟಬುಧ್ಧಿ , ಕೌರವ ದಂಥಹ ಖಳ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು . ನಗುನಗುತ್ತಾ ಎದುರು ಪಾತ್ರಧಾರಿಗಳ ವಾದಗಳಿಗೆ ಪ್ರತ್ಯುತ್ತರ ಕೊಡುವ ಶೈಲಿ ಅಸದೃಶ. ಸಹ ಕಲಾವಿದರೊಂದಿಗೆ ಆತ್ಮೀಯರಾಗಿರುತ್ತಿದ್ದ ಶೆಟ್ಟರು , ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು .

ಚೆನ್ನಪ್ಪ  ಶೆಟ್ಟರ ಬಗ್ಗೆ ಅಪಾರ ಗೌರವ ಹೊಂದಿದ್ದ ಶೆಟ್ಟರು , ಚೆನ್ನಪ್ಪ ಶೆಟ್ಟರ ಅಕಾಲ ನಿಧನದಿಂದಾಗಿ ಸ್ವಲ್ಪ ಕಾಲ ಅಧೀರರಾಗಿದ್ದುದು ಸತ್ಯ. ಚೆನ್ನಪ್ಪ ಶೆಟ್ಟರ ಸಂಸ್ಮರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೆಲ್ಲಾ  , ಚೆನ್ನಪ್ಪ ಶೆಟ್ಟರ ಬಗ್ಗೆ ಮಾತಾಡುವಾಗ ಅಳುತ್ತಿದ್ದರು. “ಚೆನ್ನಪ್ಪ ಶೆಟ್ಟಿ” ಯವ ರಿರುವಾಗ ಕರಪತ್ರಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ” ಸಿದ್ದಕಟ್ಟೆ ದ್ವಯರು ” ಎಂಬ ಶಬ್ದ ಇನ್ನು ಕಾಣಲಾಗದು ” ಎಂದು ಕಂಬನಿ ಮಿಡಿದಿದ್ದರು . ( ಚೆ.ಶೆಟ್ಟಿ × ವಿ.ಶೆಟ್ಟಿ ಯವರನ್ನು ಒಟ್ಟಾಗಿ ಸಿದ್ದಕಟ್ಟೆದ್ವಯರು ಎಂದು ಬರೆಯುವ ರೂಢಿಯಿತ್ತು )

ಎರಡು ತಿಂಗಳ ಹಿಂದೆ ಶೆಟ್ಟರ ಆರೈಕೆ ನೋಡುತ್ತಿದ್ದ  ಡಾ .ಪದ್ಯಾಣ ಸುಬ್ರಹ್ಮಣ್ಯರೊಂದಿಗೆ ಶೆಟ್ಟರ ಮನೆಗೆ ಹೋದಾಗ” ಕುಡ್ವರೇ , ನಾನು ಮರಳಿ ಅರ್ಥ ಹೇಳಲಾಗುತ್ತದೆಯಲ್ಲವೇ “ಎಂದು ನನ್ನಲ್ಲಿ ಪ್ರಶ್ನಿಸಿದ್ದರು .ಮರಳಿ ಯಕ್ಷರಂಗಕ್ಕೆ ಬರಬೇಕೆಂಬ ಹಂಬಲ ಶೆಟ್ಟರಿಗಿತ್ತು  . ಆದರೂ  ” ವಿಧಿ ” ಯ ಎದುರು ಯಾರಾದರೂ ನಿಲ್ಲಬಲ್ಲರೇ ?.

ಆಟಕೂಟಗಳ ಸರದಾರ, ಪ್ರಸಂಗಕರ್ತ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು , ಇಂದು ಯಕ್ಷರಂಗವನ್ನು ಅಗಲಿದ್ದಾರೆ .ಅವರ ಕುಟುಂಬಕ್ಕೆ ಈ ಆಘಾತವನ್ನು ಭರಿಸುವ ಶಕ್ತಿ ನೀಡಲಿ , ಅಗಲಿದ ಶೆಟ್ಟರ ಆತ್ಮಕ್ಕೆ ” ಸದ್ಗತಿ ” ದೊರಕಲಿ ಎಂದು ಪರಮಾತ್ಮನಲ್ಲಿ ಹಾಗೂ  ಕಲಾಮಾತೆಯಲ್ಲಿ ಪ್ರಾರ್ಥನೆ .

ವರದಿ / ಚಿತ್ರ : ಈಶ್ವರ್ ಐ.ಎಲ್

Comments are closed.