ಮಂಗಳೂರು,ಜುಲೈ.02: ರಾಜ್ಯಾದ್ಯಂತ ಛಾಯಾಗ್ರಾಹಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಇಂದು ನಗರದ ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಶಾಂತಿಯುತ ಜಾಥಾ ನಡೆಯಿತು.
ಈ ಸಂದರ್ಭ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ದ.ಕ. ಜಿಲ್ಲಾಧ್ಯಕ್ಷ ಜಗನ್ನಾಥ ಶೆಟ್ಟಿ ಅವರು ಮಾತನಾಡಿ, ಛಾಯಾಗ್ರಹಣ ಕಲೆಯು ದೃಶ್ಯ ಕಲೆಯೇ ಆಗಿರುವುದರಿಂದ ರಾಜ್ಯದ ನುರಿತ, ಅನುಭವಿ, ಪ್ರಸಿದ್ಧ ಛಾಯಾಗ್ರಾಹಕರನ್ನು ಗುರುತಿಸಿ ರಾಜ್ಯಮಟ್ಟದ ಪುರಸ್ಕಾರಗಳನ್ನು ನೀಡಬೇಕು. ಮಾತ್ರವಲ್ಲದೇ ಈ ಕಲೆಯನ್ನು ಉಳಿಸಿ ಬೆಳೆಸಲು ಇತರ ರಾಜ್ಯಗಳಲ್ಲಿರುವಂತೆ ಪ್ರತ್ಯೇಕ ಅಕಾಡೆಮಿಯನ್ನು ಸ್ಥಾಪಿಸಬೇಕು. ಎಂದು ಆಗ್ರಹಿಸಿದರು. ಛಾಯಾಗ್ರಾಹಕರು ಒಂದೆಡೆ ಸೇರಿ ಸಭೆ, ಸಮಾರಂಭಗಳನ್ನು ನಡೆಸಲು ಅಗತ್ಯವಿರುವ ಛಾಯಾಭವನ ನಿರ್ಮಿಸಲು ನಿವೇಶನ, ಆರ್ಥಿಕ ನೆರವು ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಎಲ್ಲಾ ಸರ್ಕಾರಿ ಅವಶ್ಯಕತೆಗಳಿಗೆ ಸ್ಟುಡಿಯೋದಲ್ಲಿ ತೆಗೆಯುವ ಸ್ಪಷ್ಟ ಚಿತ್ರಗಳನ್ನೇ ಸ್ವೀಕರಿಸಬೇಕು. ಪ್ರತಿ ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಳ ಛಾಯಾಗ್ರಹಣವನ್ನು ಹೊರಗುತ್ತಿಗೆ ನೀಡದೆ ಸ್ಥಳೀಯರಿಗೆ ನೀಡಬೇಕು. ಪ್ರತಿ ಚುನಾವಣೆಯಲ್ಲಿ ಬೇಕಾಗುವ ವಿಡಿಯೋ ಚಿತ್ರೀಕರಣಕ್ಕೆ ಮಧ್ಯವರ್ತಿಗಳಿಗೆ ನೀಡದೇ ಆಯಾ ಜಿಲ್ಲೆಯ ವೃತ್ತಿಪರರಿಗೆ ನೀಡಬೇಕು. ಅಲ್ಲದೇ ರಾಜ್ಯದ ಸಮಸ್ತ ಛಾಯಾಗ್ರಹಕರ ಮಕ್ಕಳಿಗೆ ಆರ್ ಟಿ ಇ ಮೂಲಕ ವಿದ್ಯಾಭ್ಯಾಸ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಜಗನಾಥ ಶೆಟ್ಟಿ ಹೇಳಿದರು.
ಪ್ರತಿಭಟನಾ ಸಭೆಯ ಬಳಿಕ ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್‌ನ ನಿಯೋಗವು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
Comments are closed.