ಮಂಗಳೂರು, ಜು.7: ಮಂಗಳೂರಿನ ಸ್ಟೇಟ್‌ಬ್ಯಾಂಕ್‌ನ ಸಿಟಿ ಬಸ್‌ಸ್ಟಾಂಡ್‌ನಲ್ಲಿ ನಿಲ್ಲಿಸಲಾಗಿದ್ದ ಬಸ್ಸೊಂದು ಮುಂದಕ್ಕೆ ಚಲಿಸಿ ಅಂಗಡಿಯೊಂದಕ್ಕೆ ನುಗ್ಗಿದ್ದು, ಈ ಸಂದರ್ಭ ಮಹಿಳೆಯೋರ್ವರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಪ್ರಾಣಹಾನಿ ತಪ್ಪಿದ್ದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.
ಜೋಕಟ್ಟೆ- ಸ್ಟೇಟ್ ಬ್ಯಾಂಕ್ ರಸ್ತೆಯಾಗಿ ಚಲಿಸುವ 2c ನಂಬರ್‌ನ ಖಾಸಗಿ ಬಸ್ಸೊಂದರ ಚಾಲಕ ಎಂದಿನಂತೆ ಬಸ್‌ನ್ನು ನಿಗದಿತ ಸ್ಥಳದಲ್ಲಿ ನಿಲ್ಲಿಸಿ ಚಹಾ ಕುಡಿಯಲು ತೆರಳಿದ್ದ ಎನ್ನಲಾಗಿದೆ. ಈ ಸಂದರ್ಭ ನ್ಯೂಟ್ರಲ್ ನಲ್ಲಿದ್ದ ಬಸ್ ಇಳಿಜಾರಾಗಿರುವ ರಸ್ತೆಯಲ್ಲಿ ನಿಧಾನವಾಗಿ ಮುಂದಕ್ಕೆ ಚಲಿಸಿ, ಎದುರಿಗಿದ್ದ ಅಂಗಡಿಯೊಂದಕ್ಕೆ ಢಿಕ್ಕಿ ಹೊಡೆದು ನಿಂತಿದೆ.
ಈ ವೇಳೆ ಬಸ್ ಚಾಲಕನಿಲ್ಲದೆ ಚಲಿಸುತ್ತಿರುವುದನ್ನು ಕಂಡ ಬಸ್‌ನಿಲ್ದಾಣದಲ್ಲಿದ್ದ ಮಹಿಳೆಯೋರ್ವರು ಬೊಬ್ಬೆ ಹಾಕಿ ಬಸ್ ನ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರನ್ನು ಎಚ್ಚರಿಸಿದರು. ಇದರಿಂದ ಎಚ್ಚೆತ್ತ ಸಾರ್ವಜನಿಕರು ಚದುರಿದ ಪರಿಣಾಮ ಸಂಭವನೀಯ ಪ್ರಾಣಾಪಾಯ ತಪ್ಪಿದೆ ಎನ್ನಲಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಅಂಗಡಿ ಹಾಗೂ ಬಸ್ ಗೆ ಸ್ವಲ್ಪ ಪ್ರಮಾಣದ ಹಾನಿಯಾಗಿವೆ.
ಬೆಳಗ್ಗಿನ ಸಂದರ್ಭವಾಗಿದ್ದರಿಂದಾಗಿ ನಿಲ್ದಾಣದಲ್ಲಿ ಕಡಿಮೆ ಜನಸಂಖ್ಯೆ ಇದ್ದುದರಿಂದಾಗಿ ಯಾವುದೇ ಅಪಾಯ ಉಂಟಾಗಿಲ್ಲ. ಸಾಮಾನ್ಯವಾಗಿ ಈ ಭಾಗದಲ್ಲಿ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಬಸ್ ಗೆ ಕಾಯುತ್ತಿದ್ದರು. ಆದರೆ ಇಂದು ಈ ಪ್ರದೇಶದಲ್ಲಿ ಹೆಚ್ಚು ಜನಸಂಖ್ಯೆ ಇಲ್ಲದೇ ಇದ್ದುದರಿಂದಾಗಿ ದೊಡ್ಡ ಅಪಾಯವೊಂದು ತಪ್ಪಿದೆ.
Comments are closed.