ಮಂಗಳೂರು,ಜು.8: ಡಿವೈಎಸ್ಪಿ ಗಣಪತಿ ಸಾವಿಗೆ ಶರಣಾಗುವ ಮುಂಚೆ ತನ್ನ ಸಾವಿಗೆ ಕಾರಣರಾದವರ ಹೆಸರನ್ನು ಉಲ್ಲೇಖಿಸಿದ್ದು, ಸರಕಾರ ತಕ್ಷಣ ಅವರು ಹೇಳಿರುವ ಹೆಸರಿನವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅಗ್ರಹಿಸಿದ್ದಾರೆ,
ಶುಕ್ರವಾರ ನಗರದ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಗಣಪತಿ ಸಾವಿಗೆ ಕಾರಣದವರನ್ನು ತಕ್ಷಣ ಬಂಧಿಸದಿದ್ದರೆ ಜಿಲ್ಲಾ ಬಂದ್ ಮಾಡಿ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಗಣಪತಿಯವರು ದ.ಕ. ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದರಿಂದ ಅವರು ತನ್ನ ಸಾವಿಗೆ ಮೊದಲು ತಿಳಿಸಿರುವ ಹೆಸರಿಸಿರುವರನ್ನು ಸರಕಾರ ಬಂಧಿಸದಿದ್ದರೆ ಜಿಲ್ಲೆಯಲ್ಲಿ ಬಂದ್ ನಡೆಸಿ ಪ್ರತಿಭಟನೆ ನಡೆಸುವುದು ಅನಿವಾರ್ಯ. ಇದು ಬೇಡವೆಂದಾದಲ್ಲಿ ಘಟನೆಯ ಹಿಂದಿನ ಸತ್ಯವನ್ನು ರಾಜ್ಯ ಸರಕಾರ ಬಹಿರಂಗಪಡಿಸಬೇಕು ಎಂದು ನಳಿನ್ ತಿಳಿಸಿದರು.
ಕೆಲವು ಅಧಿಕಾರಿಗಳ ಮೇಲೆ ರಾಜಕಾರಣಿಗಳು ಮತ್ತು ಹಿರಿಯ ಅಧಿಕಾರಿಗಳ ಒತ್ತಡ ಎಷ್ಟಿದೆ ಎಂಬುದಕ್ಕೆ ಗಣಪತಿ ಸಾವು ಒಂದು ಸ್ಪಷ್ಟ ಸಾಕ್ಷಿ. ಅಧಿಕಾರಿಗಳನ್ನು ಬಂಧನದಲ್ಲಿಡುವ ಕೆಲಸ ಕಾಂಗ್ರೆಸನಿಂದ ಆಗಿದೆ. ಅಧಿಕಾರಿಗಳನ್ನು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬೇಕು.ರಕ್ಷಣೆ ನೀಡುವವರಿಗೆ ರಕ್ಷಣೆ ನೀಡಲಾಗದ ಸರಕಾರ ಜನಸಾಮಾನ್ಯರಿಗೆ ಯಾವ ರೀತಿ ರಕ್ಷಣೆ ನೀಡಬಲ್ಲದು ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸಿದರು.
ಗಣಪತಿಯವರ ಆತ್ಮಹತ್ಯೆ ನಿಜಕ್ಕೂ ದುಃಖಕರ ಸಂಗತಿ. ಆದರೆ ಅವರು ಸಾವಿಗೆ ಮುಂಚೆ ಹೆಸರಿಸಿರುವವರು ಆತ್ಮಹತ್ಯೆಗೆ ಪ್ರೇರಣೆ ನೀಡಿದವರಾಗಿರುವುದರಿಂದ ಅವರನ್ನು ಬಂಧಿಸಿ ತನಿಖೆ ಕೈಗೊಳ್ಳಬೇಕು.ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ವಿಷಯವನ್ನು ಇತರ ಸಂಸದರ ಜೊತೆ ಸೇರಿ ಲೋಕಸಭೆಯಲ್ಲೂ ಚರ್ಚಿಸಲಾಗುವುದು ಎಂದು ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಹೇಳಿದರು.
Comments are closed.